ಶಿಕ್ಷಣಕ್ಕೆ ಅಡ್ಡಿಯಾಗದಂತೆ ವಿದ್ಯಾರ್ಥಿಗಳಿಗೆ ತಾಂತ್ರಿಕ ಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ: ಕರ್ನಾಟಕ ಹೈಕೋರ್ಟ್

ವರ್ಚುವಲ್ ವಿಧಾನದಲ್ಲಿ ಶಿಕ್ಷಣ ಪಡೆಯಲು ಶೇ 20ರಷ್ಟು ವಿದ್ಯಾರ್ಥಿಗಳಿಗೆ ತಾಂತ್ರಿಕ ಸೌಕರ್ಯಗಳಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿತು.
Classroom
Classroom
Published on

ಕೋವಿಡ್‌ ಲಾಕ್‌ಡೌನ್‌ ನಡುವೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಂತ್ರಜ್ಞಾನ ಮತ್ತು ಸಾಧನಗಳನ್ನು ಒದಗಿಸುವುದು ಸಂವಿಧಾನದ 21 ಎ ವಿಧಿಯಡಿ ಸರ್ಕಾರದ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ.

"ಸಂವಿಧಾನದ 21 ಎ ವಿಧಿ ಪ್ರಕಾರ, 14 ವರ್ಷಗಳವರೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಏಕೆಂದರೆ ಅದು ಅವರ ಮೂಲಭೂತ ಹಕ್ಕಾಗಿದೆ. ಕೋವಿಡ್‌ ವೇಳೆ ತಂತ್ರಜ್ಞಾನದ ಮೂಲಕ ಶಿಕ್ಷಣ ಒದಗಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಮಕ್ಕಳಿಗಾಗಿ ಅಂತಹ ಕ್ರಮ ತೆಗೆದುಕೊಳ್ಳದಿದ್ದರೆ, ಸಂವಿಧಾನದ 21ನೇ ವಿಧಿಯಡಿ ಮಕ್ಕಳ ಮೂಲಭೂತ ಹಕ್ಕು ಒದಗಿಸಲು ವಿಫಲವಾದಂತಾಗುತ್ತದೆ" ಎಂದು ನ್ಯಾಯಮೂರ್ತಿ ಬಿ ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ ತಿಳಿಸಿದೆ.

ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಶಾಲಾ ಮಕ್ಕಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಲ್ಯಾಪ್‌ಟಾಪ್, ಟ್ಯಾಬ್ಲೆಟ್‌‌, ಮತ್ತಿತರ ಡಿಜಿಟಲ್ ಸಂಪನ್ಮೂಲಗಳನ್ನು ಉಚಿತವಾಗಿ ಒದಗಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಜೂನ್ 4 ರಂದು ಸರ್ಕಾರ ಸ್ಥಿತಿಗತಿ ವರದಿ ಸಲ್ಲಿಸಿರುವುದಾಗಿ ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಜುಲೈ 1ರಿಂದ ಆರಂಭವಾಗಲಿದೆ ಎಂದು ಇದೇ ವೇಳೆ ತಿಳಿಸಲಾಯಿತು. ಇಂಟರ್ನೆಟ್, ಲ್ಯಾಪ್‌ಟಾಪ್, ಟೆಲಿವಿಷನ್ ಮತ್ತು ಕೇಬಲ್ ಸೌಲಭ್ಯ ಹೊಂದಿರುವ ವಿದ್ಯಾರ್ಥಿಗಳು, ಕೇವಲ ಟೆಲಿವಿಷನ್‌ ಸೌಲಭ್ಯ ಇರುವ ವಿದ್ಯಾರ್ಥಿಗಳು ಹಾಗೂ ಯಾವುದೇ ಗ್ಯಾಜೆಟ್‌ ಇಲ್ಲದ ವಿದ್ಯಾರ್ಥಿಗಳು ಹೀಗೆ ಮೂರು ವಿಭಾಗಗಳಾಗಿ ವಿಂಗಡಿಸಿ ಶಾಲಾ ಮಾಹಿತಿ ಸಂಗ್ರಹಿಸುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ವರ್ಚುವಲ್‌ ವಿಧಾನದಲ್ಲಿ ಶಿಕ್ಷಣ ಪಡೆಯಲು ಶೇ 20ರಷ್ಟು ವಿದ್ಯಾರ್ಥಿಗಳಿಗೆ ತಾಂತ್ರಿಕ ಸೌಕರ್ಯಗಳಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿತು.

Also Read
ವೃತ್ತಿಪರ ಶಿಕ್ಷಣ ಪ್ರವೇಶಿಕೆ ಸರ್ಕಾರದ ಉಡುಗೊರೆಯಲ್ಲ: ಸುಪ್ರೀಂ ಕೋರ್ಟ್‌

ಆಗ ಅರ್ಜಿದಾರರ ಪರ ಹಾಜರಾದ ವಕೀಲ ಹರೀಶ್‌ ನರಸಪ್ಪ ಅವರು “ಈ ಪ್ರ,ಮಾಣ ಇನ್ನೂ ಹೆಚ್ಚಿರಬಹುದು” ಎಂದರು. ಆಗ ತಂತ್ರಜ್ಞಾನ ಲಭ್ಯತೆ ಕುರಿತು ಮಾಹಿತಿ ಸಂಗ್ರಹಿಸಲು ನಿರ್ದೇಶನ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಶಾಲೆಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿರುವ ಕುಟುಂಬಗಳು ಅವರನ್ನು ಮದುವೆಯಾಗುವಂತೆ ಒತ್ತಾಯಿಸಬಹುದು. ಮಕ್ಕಳ ಕಳ್ಳಸಾಗಣೆ, ಬಾಲ ಕಾರ್ಮಿಕ ಪದ್ಧತಿ, ಭಿಕ್ಷಾಟನೆ ಅಥವಾ ಅಂತಹ ಚಟುವಟಿಕೆಗಳು ಕೂಡ ಹೆಚ್ಚಬಹುದು ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ತಂತ್ರಜ್ಞಾನದ ಮೂಲಕ ಶಿಕ್ಷಣ ಒದಗಿಸುವ ಮಾರ್ಗ ಮತ್ತು ವಿಧಾನಗಳನ್ನು ತಿಳಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶಿಸಿತು.

ತಂತ್ರಜ್ಞಾನ ಲಭ್ಯತೆ ಇಲ್ಲದ ಮಕ್ಕಳು ಕಲಿಕೆಯಿಂದ ಹೊರಗುಳಿದಂತೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಇಂತಹ ತಾರತಮ್ಯವನ್ನು ಒಪ್ಪಿಕೊಳ್ಳಲಾಗದು ಎಂದಿತು. ಲಾಕ್‌ಡೌನ್‌ ನಡುವೆಯೂ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು ಶಿಕ್ಷಣ ವ್ಯವಸ್ಥೆಗೂ ಅಡ್ಡಿ ಉಂಟಾಗಬಾರದು ಎಂದು ನ್ಯಾಯಾಲಯ ಕಿವಿಮಾತು ಹೇಳಿತು.

ಜುಲೈ 12ಕ್ಕೆ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.

Kannada Bar & Bench
kannada.barandbench.com