ಉತ್ತರ ಪ್ರದೇಶದ ವೈದ್ಯಕೀಯ ವ್ಯವಸ್ಥೆಯನ್ನು ದೇವರೇ ಕಾಪಾಡಬೇಕು: ಅಲಾಹಾಬಾದ್ ಹೈಕೋರ್ಟ್

ವಿವಿಧ ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡಿ ತೆರಿಗೆ ವಿನಾಯಿತಿ ಪಡೆಯುವ ದೊಡ್ಡ ವ್ಯಾಪಾರ ಸಂಸ್ಥೆಗಳು ಲಸಿಕೆ ತಯಾರಿಕೆಗಾಗಿ ತಮ್ಮ ಹಣ ಉಪಯೋಗಿಸಬಹುದು ಎಂದು ಪೀಠ ತಿಳಿಸಿತು.
Allahabad High Court
Allahabad High Court
Published on

ಉತ್ತರಪ್ರದೇಶದಲ್ಲಿನ ವೈದ್ಯಕೀಯ ಸೌಲಭ್ಯ ಮತ್ತು ವ್ಯವಸ್ಥೆ ಬಗ್ಗೆ ಅಲಾಹಾಬಾದ್‌ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, "ದೇವರೇ ಕಾಪಾಡಬೇಕು" ಎಂದಿದೆ. ಸಂತೋಷ್‌ ಕುಮಾರ್‌ ಎಂಬ ರೋಗಿಯೊಬ್ಬರು ಶೌಚಾಲಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದಾಗ ಗುರುತಿಲ್ಲದ ಮೃತದೇಹ ಎಂದು ಹೇಳಿ ಅವರ ದೇಹವನ್ನು ವಿಲೇವಾರಿ ಮಾಡಿರುವ ಘಟನೆಯುನ್ನು ಗಮನಿಸಿದ ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿತು.

"ಮೀರತ್‌ನಂತಹ ನಗರದ ವೈದ್ಯಕೀಯ ಕಾಲೇಜಿನ ಚಿಕಿತ್ಸೆಯ ಸ್ಥಿತಿಯೇ ಹೀಗಿದ್ದರೆ, ಸಣ್ಣ ನಗರಗಳು ಮತ್ತು ಹಳ್ಳಿಗಳ ವೈದ್ಯಕೀಯ ವ್ಯವಸ್ಥೆಯನ್ನು 'ರಾಮ್ ಭರೋಸೆ' ಎಂಬ ಹಿಂದಿಯ ನಾಣ್ಣುಡಿಯಂತೆ ದೇವರೇ ಕಾಪಾಡಬೇಕು” ಎಂದು ವಿಷಾದದಿಂದ ಖಂಡಿಸಿದೆ.

“ಬಿಜ್ನೋರ್‌ ಜಿಲ್ಲೆಯಲ್ಲಿ 2011 ರ ಜನಗಣತಿಯ ಪ್ರಕಾರ ನಗರ ಪ್ರದೇಶದ ಜನಸಂಖ್ಯೆ 9,25,312ರಷ್ಟು ಇತ್ತು. 2021 ರ ವೇಳೆಗೆ 25% ಹೆಚ್ಚಿರಬೇಕು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅಂತಹ ಜಿಲ್ಲೆಯಲ್ಲಿ ಮೂರನೇ ಹಂತದ ಆಸ್ಪತ್ರೆ ಇಲ್ಲ. ಇರುವ ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 150 ಹಾಸಿಗೆಗಳಿದ್ದು ಬಿಐಪಿಎಪಿ ಯಂತ್ರಗಳ ಒಟ್ಟು ಸಂಖ್ಯೆ 5 ಹಾಗೂ ಹೈ ಫ್ಲೋ ಮೂಗಿನ ನಳಿಕೆಗಳ ಸಂಖ್ಯೆ ಕೇವಲ ಎರಡು ಇದೆ” ಎಂದು ನ್ಯಾಯಾಲಯವು ವಿಚಾರಣೆ ವೇಳೆ ತಿಳಿಸಿತು.

ಅಂತೆಯೇ, 2011ರ ಜನಗಣತಿಯ ಪ್ರಕಾರ ಇಲ್ಲಿನ ತಾಲೂಕು ಕೇಂದ್ರಗಳಲ್ಲಿ ಗ್ರಾಮೀಣ ಜನಸಂಖ್ಯೆ ಸುಮಾರು 27,55,000 ದಷ್ಟಿದ್ದು ಈಗ ಅದು ಶೇ 25ರಷ್ಟು ಹೆಚ್ಚಾಗಿರಬೇಕು. ಈಗ ಆ ಸಂಖ್ಯೆ 32 ಲಕ್ಷ ದಾಟಿದೆ ಎಂದು ಅಂದಾಜಿಸಿದರೆ ಅಲ್ಲಿ ಇರುವುದು ಕೇವಲ ಹತ್ತು ಸಮುದಾಯ ಆರೋಗ್ಯ ಕೇಂದ್ರಗಳು. ಪ್ರತಿಯೊಂದು ಸಮುದಾಯ ಆರೋಗ್ಯದ ಕೇಂದ್ರದ ಮೇಲೆ ಮೂರು ಲಕ್ಷ ಜನರ ಹೊರೆ ಇದೆ. ಮೂರು ಲಕ್ಷ ಜನರಿಗೆ ಕೇವಲ ಮೂವತ್ತು ಹಾಸಿಗೆಗಳು ಇವೆ. ಇದರ ಅರ್ಥ ಒಂದು ಸಮುದಾಯ ಆರೋಗ್ಯ ಕೇಂದ್ರ ಕೇವಲ 0.01% ಜನರಿಗೆ ಆರೈಕೆ ಮಾಡಬಲ್ಲದು ಮತ್ತು ಈ ಕೇಂದ್ರಗಳಲ್ಲಿ ಬಿಐಪಿಎಪಿ ಯಂತ್ರಗಳು ಹಾಗೂ ಹೈ ಫ್ಲೋ ಮೂಗಿನ ನಳಿಕೆಗಳು ಲಭ್ಯ ಇಲ್ಲ. 300 ಹಾಸಿಗೆಗಳಲ್ಲಿ 250 ಆಮ್ಲಜನಕ ಸಿಲಿಂಡರ್‌ಗಳೊಂದಿಗೆ ಕೇವಲ 17 ಆಮ್ಲಜನಕ ಸಾಂದ್ರಕಗಳು ಲಭ್ಯ ಇವೆ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

ಕೋವಿಡ್‌ ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಲೋಪದೋಷಗಳನ್ನು ನ್ಯಾಯಾಲಯ ಎತ್ತಿ ಹಿಡಿಯಿತು. ಮೂರು ತಿಂಗಳ ಅವಧಿಯಲ್ಲಿ ಒಟ್ಟು ಜನಸಂಖ್ಯೆಯ ಶೇ 30ರಷ್ಟನ್ನು ಅಂದರೆ 10 ಲಕ್ಷ ಮಂದಿಗೆ ಪರೀಕ್ಷೆ ನಡೆಸಬೇಕಾದರೆ ದಿನಕ್ಕೆ 10,000 ಪರೀಕ್ಷೆಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೆ ಜಿಲ್ಲಾಧಿಕಾರಿ ನೀಡಿರುವ ಹೇಳಿಕೆ ಪ್ರಕಾರ ಬಿಜ್ನೋರ್‌ ಜಿಲ್ಲೆಯಲ್ಲಿ ಮುಂದಿನ ಕೆಲ ದಿನಗಳ ಕಾಲ ಹಾಗೆ ಮಾಡುವ ಯಾವುದೇ ಸಾಧ್ಯತೆ ಇಲ್ಲದಿರುವುದು ಗಮನಕ್ಕೆ ಬರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಜೊತೆಗೆ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಕೋವಿಡ್ ಪರೀಕ್ಷೆ ಬಗ್ಗೆಯೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಹಳ್ಳಿಗಳು, ಸಣ್ಣ ಊರು ಹಾಗೂ ಪಟ್ಟಣಗಳಲ್ಲಿ ಪರೀಕ್ಷೆಯನ್ನು ತ್ವರಿತವಾಗಿ ಹೆಚ್ಚಿಸಲು ಉತ್ತರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೆ ಸರ್ಕಾರ ಕೈಗೊಳ್ಳಬೇಕಾದ ವಿವಿಧ ಕ್ರಮಗಳನ್ನು ಸೂಚಿಸಿತು. ಈ ಹಂತದಲ್ಲಿ ನ್ಯಾಯಾಲಯ ವಿವಿಧ ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡಿ ತೆರಿಗೆ ವಿನಾಯಿತಿ ಪಡೆಯುವ ದೊಡ್ಡ ವ್ಯಾಪಾರ ಸಂಸ್ಥೆಗಳು ಲಸಿಕೆ ತಯಾರಿಕೆಗಾಗಿ ತಮ್ಮ ಹಣ ಉಪಯೋಗಿಸಬಹುದು ಎಂದು ಹೇಳಿತು. ಪ್ರಕರಣದ ಮುಂದಿನ ವಿಚಾರಣೆ ಮೇ 22ಕ್ಕೆ ನಿಗದಿಯಾಗಿದೆ.

Kannada Bar & Bench
kannada.barandbench.com