ತೆಲಂಗಾಣದೊಂದಿಗೆ ಆಸ್ತಿ ಹಂಚಿಕೆ ವಿಚಾರ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಆಂಧ್ರಪ್ರದೇಶ

₹ 1,42,601 ಕೋಟಿ ಮೌಲ್ಯದ ಆಸ್ತಿ ವಿಭಜಿಸದಿರುವುದು ತೆಲಂಗಾಣಕ್ಕೆ ಲಾಭದಾಯಕವಾಗಿದೆ, ಏಕೆಂದರೆ ಈ ಆಸ್ತಿಗಳಲ್ಲಿ ಸುಮಾರು ಶೇ 91 ಭಾಗ ಹೈದರಾಬಾದ್‌ನಲ್ಲಿದೆ ಎಂದು ಮನವಿಯಲ್ಲಿ ವಾದಿಸಲಾಗಿದೆ,
Andhra Pradesh, Telangana, Supreme Court
Andhra Pradesh, Telangana, Supreme Court

ತೆಲಂಗಾಣದೊಂದಿಗೆ ಆಸ್ತಿ ಮತ್ತು ಸಾಲಬಾಧ್ಯತೆಯ ಹಂಚಿಕೆಯಾಗಬೇಕೆಂದು ಕೋರಿ ಆಂಧ್ರಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ [ಆಂಧ್ರಪ್ರದೇಶ ಸರ್ಕಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಎರಡು ಹೊಸದಾಗಿ ರೂಪುಗೊಂಡ ರಾಜ್ಯಗಳ ನಡುವೆ ಸ್ವತ್ತು  ಮತ್ತು ಸಾಲಬಾಧ್ಯತೆಗಳ ನ್ಯಾಯೋಚಿತ, ಸಮಾನ ಹಾಗೂ ತ್ವರಿತ ವಿಂಗಡಣೆಯನ್ನು ಸರ್ಕಾರ ಕೋರಿದೆ. ಸಂವಿಧಾನದ 14 ಮತ್ತು 21ನೇ ವಿಧಿಯಡಿಯಲ್ಲಿ ಒದಗಿಸಲಾದ ಹಕ್ಕುಗಳೂ ಸೇರಿದಂತೆ ತನ್ನ ಜನರ ಮತ್ತು ತನ್ನ ಸ್ವಂತ ಹಕ್ಕುಗಳ ಕಾರಣಕ್ಕೆ ಕಾನೂನು ರಕ್ಷಕನಾಗಿ (ಪೇರೆನ್ಸ್‌ ಪಟ್ರಿಯೇ- ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಇರುವ ಜನರ ಪಾಲಿಗೆ ರಾಜ ಅಥವಾ ಪ್ರಭುತ್ವ ಕಾನೂನು ರಕ್ಷಕನಾಗುವುದಕ್ಕೆ ಇರುವ ಲ್ಯಾಟಿನ್ ಮೂಲದ ಪಾರಿಭಾಷಿಕ ಪದ) ಆಂಧ್ರಪ್ರದೇಶ ಸರ್ಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

2014ರ ಜೂನ್‌ನಲ್ಲಿ ಎರಡು ರಾಜ್ಯಗಳು ಉದಯಿಸಿದ್ದರೂ, 2014ರ ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯಡಿಯಲ್ಲಿ ಆಸ್ತಿ ಮತ್ತು ಹೊಣೆಗಾರಿಕೆ ಹಂಚಿಕೆ ಮಾಡಲಾಗಿದ್ದರೂ ಹಾಗೂ ಆಂಧ್ರ ಪ್ರದೇಶ ಸರ್ಕಾರವು ತ್ವರಿತ ಪರಿಹಾರ  ಕೋರಿ ಮತ್ತೆ ಮತ್ತೆ  ಯತ್ನಿಸಿರುವುದರ ಹೊರತಾಗಿಯೂ ಆಸ್ತಿಗಳ ನಿಜವಾದ ವಿಭಜನೆ ಇನ್ನೂ ಆರಂಭವಾಗಿಲ್ಲ ಎಂದು ವಕೀಲ ಮಹ್‌ಫೂಝ್‌ ಎ ನಾಝ್ಕಿ ಅವರು ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.

₹ 1,42,601 ಕೋಟಿ ಮೌಲ್ಯದ ಆಸ್ತಿ ವಿಭಜಿಸದಿರುವುದು ತೆಲಂಗಾಣಕ್ಕೆ ಲಾಭದಾಯಕವಾಗಿದೆ, ಏಕೆಂದರೆ ಈ ಆಸ್ತಿಗಳಲ್ಲಿ ಸುಮಾರು ಶೇ 91 ಭಾಗ ಅವಿಭಜಿತ ರಾಜ್ಯದ ರಾಜಧಾನಿಯಾಗಿದ್ದ ಹಾಗೂ ಈಗ ತೆಲಂಗಾಣದಲ್ಲಿರುವ ಹೈದರಾಬಾದ್‌ನಲ್ಲಿದೆ. ಆಸ್ತಿ ಹಂಚಿಕೆ ಮಾಡದಿರುವುದರಿಂದ ಸಂಸ್ಥೆಗಳ ನೌಕರರು ಸೇರಿದಂತೆ ಆಂಧ್ರದ ಜನರ ಮೂಲಭೂತ ಹಾಗೂ ಸಾಂವಿಧಾನಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣದ ನಿಷ್ಕ್ರಿಯತೆ, ಆಂಧ್ರದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಘೋಷಿಸಬೇಕು ಮತ್ತು ಎರಡೂ ರಾಜ್ಯಗಳ ಆಸ್ತಿಯ ತ್ವರಿತ ವಿಂಗಡಣೆಗಾಗಿ ಅಗತ್ಯವಾದ ಎಲ್ಲಾ ನಿರ್ದೇಶನಗಳನ್ನು ನೀಡಬೇಕು  ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.

ಆದ್ದರಿಂದ, ತೆಲಂಗಾಣದ ನಿಷ್ಕ್ರಿಯತೆಯು ತನ್ನ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವನ್ನು ಘೋಷಿಸಲು ಕೋರಿ, ತ್ವರಿತವಾಗಿ ಎರಡು ರಾಜ್ಯಗಳ ನಡುವಿನ ಆಸ್ತಿಗಳ ಖಚಿತ ವಿಭಜನೆಗೆ ಅಗತ್ಯವಿರುವ ಎಲ್ಲಾ ನಿರ್ದೇಶನಗಳನ್ನು ಕೋರಿತು.

Related Stories

No stories found.
Kannada Bar & Bench
kannada.barandbench.com