ತಮ್ಮ ಜೇಬಿನಿಂದ ಹಣ ಪಾವತಿಸಬೇಕಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಕ್ಷುಲ್ಲಕ ಪ್ರಕರಣ ದಾಖಲಿಸುವಂತಿಲ್ಲ: ಸುಪ್ರೀಂ

ಕ್ಷುಲ್ಲಕ ಪ್ರಕರಣ ದಾಖಲಿಸಿದ್ದ ಭೂಸ್ವಾಧೀನ ಅಧಿಕಾರಿಯೊಬ್ಬರಿಗೆ ₹ 5 ಲಕ್ಷ ದಂಡ ವಿಧಿಸಿದ ಸರ್ವೋಚ್ಚ ನ್ಯಾಯಾಲಯ.
ತಮ್ಮ ಜೇಬಿನಿಂದ ಹಣ ಪಾವತಿಸಬೇಕಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಕ್ಷುಲ್ಲಕ ಪ್ರಕರಣ ದಾಖಲಿಸುವಂತಿಲ್ಲ: ಸುಪ್ರೀಂ

ವ್ಯಾಜ್ಯಕ್ಕೆ ತಮ್ಮ ಜೇಬಿನಿಂದ ಹಣ ಖರ್ಚು ಮಾಡಬೇಕಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ನಿಷ್ಪ್ರಯೋಜಕ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಎಚ್ಚರಿಕೆ ನೀಡಿದೆ [ವಿಶೇಷ ಭೂಸ್ವಾಧೀನ ಅಧಿಕಾರಿ ಮತ್ತು ವಿಠಲ್ ರಾವ್ ನಡುವಣ ಪ್ರಕರಣ].

ಕೆಲ ಭೂಮಾಲೀಕರಿಗೆ ಪರಿಹಾರ ನೀಡುವಂತೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರದ ಅಧಿಕಾರಿಯೊಬ್ಬರನ್ನು  ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತ್ತು.

ಪರಿಹಾರ ತೀರ್ಪನ್ನು ಈ ಹಿಂದೆ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದ್ದರೂ ತೀರ್ಪು ಜಾರಿ ಹಂತದಲ್ಲಿ ಅಧಿಕಾರಿ ಮೇಲ್ಮನವಿ ಸಲ್ಲಿಸಿರುವುದನ್ನು ಕಂಡ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

“ಸರ್ಕಾರದ ಅಧಿಕಾರಿಗಳು ತಮ್ಮ ಜೇಬಿನಿಂದ ಹಣ ವ್ಯಯಿಸಬೇಕಿಲ್ಲ ಮತ್ತು ಈಗಾಗಲೇ ಭೂಮಿ ಕಳೆದುಕೊಂಡಿರುವ ಭೂಮಾಲೀಕರನ್ನು ಮತ್ತಷ್ಟು ಕಿರುಕುಳ ನೀಡಲೆಂದು ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸಲು ಸರ್ಕಾರಿ ಅಧಿಕಾರಿಗಳಿಗೆ ಅನುಮತಿ ನೀಡುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಕ್ಷುಲ್ಲಕ ಪ್ರಕರಣ ದಾಖಲಿಸಿದ್ದ ಭೂಸ್ವಾಧೀನ ಅಧಿಕಾರಿಯೊಬ್ಬರಿಗೆ ₹ 5 ಲಕ್ಷ ದಂಡ ವಿಧಿಸಿತು. ಈ ಮೊತ್ತದಲ್ಲಿ ತಲಾ ₹ 2.5 ಲಕ್ಷವನ್ನು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಸಂಘದ ಗ್ರಂಥಾಲಯಕ್ಕೆ ಮತ್ತು ಸುಪ್ರೀಂ ಕೋರ್ಟ್ ವಕೀಲರ ಸಂಘಕ್ಕೆ ನಾಲ್ಕು ವಾರಗಳಲ್ಲಿ ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
G_Vyasan___Anr__v_State_of_Kerala___Ors.pdf
Preview

Related Stories

No stories found.
Kannada Bar & Bench
kannada.barandbench.com