ಔಷಧ, ವೈದ್ಯಕೀಯ ಉಪಕರಣಗಳ ಮೂಲ ದರ ಪ್ರಕಟಣೆ: ಸುತ್ತೋಲೆ ಜಾರಿಗೆ ಸದ್ಯ ಒತ್ತಾಯಿಸುವುದಿಲ್ಲ ಎಂದ ಸರ್ಕಾರ

ನವೆಂಬರ್ 1ರಿಂದ ಜಾರಿಗೆ ಬರಬೇಕಿದ್ದ ಸುತ್ತೋಲೆಯನ್ನು ಮರುಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ವಿಚಾರಣೆವರೆಗೆ ಅದರ ಅನುಷ್ಠಾನಕ್ಕೆ ಒತ್ತಾಯಿಸುವುದಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಔಷಧ, ವೈದ್ಯಕೀಯ ಉಪಕರಣಗಳ ಮೂಲ ದರ ಪ್ರಕಟಣೆ: ಸುತ್ತೋಲೆ ಜಾರಿಗೆ ಸದ್ಯ ಒತ್ತಾಯಿಸುವುದಿಲ್ಲ ಎಂದ ಸರ್ಕಾರ
Published on: 

ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಬಳಕೆಯ ವಸ್ತುಗಳ ಮೂಲ ದರವನ್ನು ಬಹಿರಂಗವಾಗಿ ಪ್ರಕಟಿಸುವಂತೆ ಆಸ್ಪತ್ರೆಗಳಿಗೆ ಸೂಚಿಸಿ ಹೊರಡಿಸಿರುವ ಸುತ್ತೋಲೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ  ಹೈಕೋರ್ಟ್‌‌ಗೆ ಮಾಹಿತಿ ನೀಡಿದೆ.

ಖಾಸಗಿ ಆಸ್ಪತ್ರೆಗಳ ಪರವಾಗಿ ಪ್ರೈವೇಟ್ ಹಾಸ್ಪಿಟಲ್ಸ್ ಅಂಡ್​ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಡಾ. ಶೋಭಾ ಪ್ರಕಾಶ್, ಪ್ರಿಸ್ಟೈನ್ ಹಾಸ್ಪಿಟಲ್ಸ್ ಅಂಡ್ ರಿಸರ್ಚ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ನ ವೈದ್ಯ ಡಾ. ಹಾಲಗೆರೆ ಮಲ್ಲಿಕಾರ್ಜುನ ಪ್ರಸನ್ನ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ಏಕಸದಸ್ಯ ಪೀಠ ನಡೆಸಿತು.

Justice CM Poonacha
Justice CM Poonacha

ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಿ ವಿ ಭಾನುಪ್ರಕಾಶ್ ಅವರು “ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಬಳಕೆಯ ವಸ್ತುಗಳ ಮೂಲ ದರವನ್ನು ಬಹಿರಂಗಪಡಿಸುವಂತೆ ಸರ್ಕಾರ ಅಕ್ಟೋಬರ್ 1ರಂದು ಸುತ್ತೋಲೆ ಹೊರಡಿಸಿದೆ. ಆದರೆ, ಅರ್ಜಿದಾರರು ಸುತ್ತೋಲೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿರುವುದು ತಡವಾಗಿದೆ. ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಕಾನೂನು ನಿಬಂಧನೆಗಳಿಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ನೀಡಿದರೆ, ಸುತ್ತೋಲೆಯನ್ನು ಹಿಂಪಡೆದು ಹೊಸದಾಗಿ ಸುತ್ತೋಲೆ ಹೊರಡಿಸುವ ಸಾಧ್ಯತೆಯೂ ಇದೆ” ಎಂದು ವಿವರಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಪೀಠವು ನವೆಂಬರ್ 1ರಿಂದ ಸುತ್ತೋಲೆ ಜಾರಿಗೆ ಬರಲಿದ್ದು, ಅಲ್ಲಿಯವರೆಗೆ ಸುತ್ತೋಲೆ ಜಾರಿ ಮಾಡುವಂತೆ ಕಡ್ಡಾಯಗೊಳಿಸಬಾರದು ಎಂಬುದು ಅರ್ಜಿದಾರರ ಕೋರಿದ್ದಾರೆ ಎಂದು ತಿಳಿಸಿತು.

ಇದಕ್ಕೆ  ಎಎಜಿ ಅವರು ಅರ್ಜಿದಾರರ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.

ವಾದ ಆಲಿಸಿದ ಪೀಠವು ಸುತ್ತೋಲೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸುವುದಿಲ್ಲ ಎಂಬುದಾಗಿ ಸರ್ಕಾರ ತಿಳಿಸದೆ ಎಂಬ ಅಂಶವನ್ನು ದಾಖಲಿಸಿಕೊಂಡು ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.

ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣಾ ಇಲಾಖೆ 2026ರ ಅಕ್ಟೋಬರ್ 1ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, ನವೆಂಬರ್ 1ರಿಂದ ರೋಗಿಗಳ ಪ್ರತಿಯೊಂದು ಬಿಲ್​​​​​ನಲ್ಲಿ ಔಷಧಗಳ ಖರೀದಿ ಬೆಲೆ ನಮೂದಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ. ಆದರೆ, ಈ ರೀತಿ ಆದೇಶಿಸಲು ಇಲಾಖೆಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಎಂದು ವಾದಿಸಲಾಗಿದೆ.

ಈ ಸುತ್ತೋಲೆಗೆ ಕೇಂದ್ರದ ಕ್ಲಿನಿಕಲ್ ಎಸ್ಟಾಬ್ಲಿಸ್​​​​​ಮೆಂಟ್​ ಕಾಯಿದೆ-2010 ಅನ್ನು ಮೂಲವಾಗಿ ಉಲ್ಲೇಖಿಸಲಾಗಿದೆ. ಆದರೆ, ಸಂವಿಧಾನದ ವಿಧಿ 252(1) ರಡಿ ಕರ್ನಾಟಕ ವಿಧಾನಮಂಡಲವು ಈ ಕಾಯಿದೆಯನ್ನು ರಾಜ್ಯದಲ್ಲಿ ಅಳವಡಿಸಿಕೊಂಡೇ ಇಲ್ಲ. ರಾಜ್ಯದಲ್ಲಿ ಕೆಪಿಎಂಇ ಕಾಯಿದೆ ಜಾರಿಯಲ್ಲಿದ್ದು, ಅದರಲ್ಲಿ ಖರೀದಿ ದರ ಪ್ರಕಟಿಸುವ ಯಾವುದೇ ನಿಯಮವಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಔಷಧಗಳ ಮೂಲ ಬೆಲೆ ಎಂಬುದು ಜಿಎಸ್ಟಿ, ರಿಯಾಯಿತಿಗಳು, ಬ್ಯಾಚ್​ಗಳು ಮತ್ತು ಜಾರಿಗೆ ಬರುವ ವಿನಾಯಿತಿಗಳನ್ನು ಆಧರಿಸಿ ಬದಲಾಗುತ್ತದೆ. ಇದಕ್ಕೆ ಸೂಕ್ತವಾದ ಯಾವುದೇ ಸರಾಸರಿ ಲೆಕ್ಕಾಚಾರದ ಮಾನದಂಡವನ್ನು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿಲ್ಲ, ಇದರಿಂದ ಆಸ್ಪತ್ರೆಗಳ ಆಡಳಿತ ಮತ್ತು ತಂತ್ರಾಂಶ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಲಿದೆ. ಅಲ್ಲದೇ, ಸಂವಿಧಾನದ ವಿಧಿ 19(1)(ಜಿ) ಪ್ರಕಾರ ಪ್ರತಿಯೊಬ್ಬರಿಗೂ ಮುಕ್ತವಾಗಿ ವ್ಯಾಪಾರ ಮಾಡುವ ಹಕ್ಕಿದೆ. ಸರಬರಾಜುದಾರರೊಂದಿಗೆ ಮಾಡಿಕೊಂಡ ಗೌಪ್ಯ ವಾಣಿಜ್ಯ ಒಪ್ಪಂದದ ದರಗಳನ್ನು ರೋಗಿಗಳ ಬಿಲ್‌ನಲ್ಲಿ ಪ್ರಕಟಿಸುವುದರಿಂದ ಆಸ್ಪತ್ರೆಗಳ ಮೂಲಭೂತ ಹಕ್ಕಿಗೆ ಧಕ್ಕೆಯಾಗಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವಿದ್ಯುತ್, ಸಾರಿಗೆ, ಟೆಲಿಕಾಂ ಸೇರಿದಂತೆ ಯಾವುದೇ ಸಾರ್ವಜನಿಕ ತುರ್ತು ಸೇವಾ ವಲಯದಲ್ಲೂ ಪೂರೈಕೆದಾರರ ಖರೀದಿ ವೆಚ್ಚವನ್ನು ಬಿಲ್​​ನಲ್ಲಿ ತೋರಿಸುವ ನಿಯಮವಿಲ್ಲ. ವೈದ್ಯಕೀಯ ವಲಯವನ್ನು ಮಾತ್ರ ಈ ರೀತಿ ಪ್ರತ್ಯೇಕಿಸಿ ಕಠಿಣ ನಿಯಮ ವಿಧಿಸಿರುವುದು ಸಂವಿಧಾನದ ವಿಧಿ 14ರ (ಸಮಾನತೆಯ ಹಕ್ಕು) ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ, ನವೆಂಬರ್ 1 ರಿಂದ ಈ ಕಡ್ಡಾಯ ಪ್ರಕಟಣೆ ಆದೇಶ ಜಾರಿಗೆ ಬರಲಿದ್ದು, ಅಷ್ಟರಲ್ಲಿ ವಿಚಾರಣೆ ನಡೆಸಿ ಅಕ್ಟೋಬರ್ 1ರ ಇಲಾಖಾ ಸುತ್ತೋಲೆಯನ್ನು ರದ್ದುಗೊಳಿಸಬೇಕು ಮತ್ತು ಅರ್ಜಿಯ ಅಂತಿಮ ತೀರ್ಪು ಬರುವವರೆಗೆ ಸುತ್ತೋಲೆಯ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಪೀಠಕ್ಕೆ ಕೋರಲಾಗಿದೆ.