ವಿಚಾರಣೆ ಮುಕ್ತಾಯದ ಅಂದಾಜು ನೀಡಲು ವಿಫಲ: ಯುಎಪಿಎ ಅಡಿ 5 ವರ್ಷ ಸೆರೆಯಲ್ಲಿದ್ದ ಆರೋಪಿಗೆ ಪಂಜಾಬ್‌ ಹೈಕೋರ್ಟ್ ಜಾಮೀನು

ಸುದೀರ್ಘ ಮತ್ತು ಪ್ರಯಾಸಕರ ವಿಚಾರಣೆಯ ಪ್ರಕ್ರಿಯೆಯೇ ಸ್ವತಃ ಶಿಕ್ಷೆಯಾಗುವ ಪರಿಸ್ಥಿತಿಯನ್ನು ತಡೆಯಲು ಬಯಸುವುದಾಗಿ ನ್ಯಾಯಾಲಯವು ಒತ್ತಿ ಹೇಳಿದೆ.
Punjab and Haryana High Court, Chandigarh.
Punjab and Haryana High Court, Chandigarh.
Published on

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧನಕ್ಕೊಳಗಾದ ನಂತರ 5 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದ ವ್ಯಕ್ತಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ [ಸುಖ್ಜಿಂದರ್ ಸಿಂಗ್ @ ಬಿಟ್ಟು vs ಪಂಜಾಬ್ ರಾಜ್ಯ]. ಆರೋಪಿಯ ವಿರುದ್ಧದ ಕ್ರಿಮಿನಲ್ ವಿಚಾರಣೆ ಯಾವಾಗ ಮುಕ್ತಾಯಗೊಳ್ಳುತ್ತದೆ ಎನ್ನುವ ಅಂದಾಜು ನೀಡಲು ರಾಜ್ಯ ಸರ್ಕಾರವು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಆದೇಶ ನೀಡಿದೆ.

ಆರೋಪಿ ಸುಖಜಿಂದರ್‌ ಸಿಂಗ್‌ ಅಲಿಯಾಸ್‌ ಬಿಟ್ಟೂ ಬಳಿಯಿಂದ ₹50,000 ನಗದು, ಪಿಸ್ತೂಲ್ ಮತ್ತು ಮಾದಕವಸ್ತು ವಶಪಡಿಸಿಕೊಂಡ ಆರೋಪದ ನಂತರ ಆತನ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿಯು ಜಾಮೀನು ಕೋರಿ ಸಲ್ಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಸಿಬಲ್ ಮತ್ತು ನ್ಯಾ. ಲಪಿತಾ ಬ್ಯಾನರ್ಜಿ ಅವರ ವಿಭಾಗೀಯ ಪೀಠವು ಆರೋಪಿ ಸುಖಜಿಂದರ್ ಸಿಂಗ್ ಇದಾಗಲೇ 5 ವರ್ಷ 2 ತಿಂಗಳು ಜೈಲಿನಲ್ಲಿ ಕಳೆದಿದ್ದಾನೆ. 2021ರಲ್ಲಿಯೇ ಆತನ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದ್ದರೂ ವಿಚಾರಣೆಯ ಸಮಯದಲ್ಲಿ ಎಲ್ಲಾ 36 ಸಾಕ್ಷಿಗಳನ್ನು ಇನ್ನೂ ವಿಚಾರಣೆಗೆ ಒಳಪಡಿಸಲಾಗಿಲ್ಲ ಎನ್ನುವ ಸಂಗತಿಯನ್ನು ಗಣನೆಗೆ ತೆಗೆದುಕೊಂಡು, ಆರೋಪಿಗೆ ಜಾಮೀನು ನೀಡಿತು.

"ವಿಚಾರಣೆಯನ್ನು ಪೂರ್ಣಗೊಳಿಸಲು ಬೇಕಾಗುವ ಸಮಯದ ಬಗ್ಗೆ ಯಾವುದೇ ಸಮಂಜಸವಾದ ಅಂದಾಜನ್ನು ನೀಡಲು ರಾಜ್ಯ ವಕೀಲರು ಅಸಮರ್ಥರಾಗಿದ್ದಾರೆ. ಆದ್ದರಿಂದ, ಮೇಲ್ಮನವಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದನ್ನು ಬಿಟ್ಟು ನ್ಯಾಯಾಲಯಕ್ಕೆ ಬೇರೆ ದಾರಿಯಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಸುದೀರ್ಘ ಮತ್ತು ಪ್ರಯಾಸಕರ ವಿಚಾರಣೆಯ ಪ್ರಕ್ರಿಯೆಯೇ ಸ್ವತಃ ಶಿಕ್ಷೆಯಾಗುವ ಪರಿಸ್ಥಿತಿಯನ್ನು ತಡೆಯಲು ಬಯಸುವುದಾಗಿ ನ್ಯಾಯಾಲಯವು ಒತ್ತಿ ಹೇಳಿದೆ.

"ಸಾಂವಿಧಾನಿಕ ನ್ಯಾಯಾಲಯವು ದೀರ್ಘ ಮತ್ತು ಕಠಿಣತರ ವಿಚಾರಣೆಯ ಪ್ರಕ್ರಿಯೆಯೇ ಸ್ವತಃ ಶಿಕ್ಷೆಯಾಗುವ ಪರಿಸ್ಥಿತಿಯನ್ನು ತಡೆಯಲು ಬಯಸುತ್ತದೆ... ಭಾರತದ ಸಂವಿಧಾನದ 21ನೇ ವಿಧಿಯು ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆಯ ಮೂಲಭೂತ ಹಕ್ಕನ್ನು ಪ್ರತಿಪಾದಿಸುತ್ತದೆ, ಇದರಲ್ಲಿ ತ್ವರಿತ ವಿಚಾರಣೆಯ ಹಕ್ಕೂ ಸಹ ಸೇರಿದೆ. ಸುಪ್ರೀಂ ಕೋರ್ಟ್‌ ಅನೇಕ ತೀರ್ಪುಗಳಲ್ಲಿ ತಿಳಿಸಿರುವಂತೆ, ಯುಎಪಿಎ ಅಡಿಯಲ್ಲಿನ ಸುದೀರ್ಘ ಕಸ್ಟಡಿಯಲ್ಲಿರುವ ಅಂಶವೇ ಸಂವಿಧಾನದ 21ನೇ ವಿಧಿಯನ್ನು ಅನ್ವಯಿಸಿ ಜಾಮೀನು ನೀಡಲು ಅರ್ಹವಾಗಲಿದೆ. ಮೇಲ್ಮನವಿದಾರರು ಇದಾಗಲೇ 05 ವರ್ಷ 02 ತಿಂಗಳು ಮತ್ತು 30 ದಿನಗಳ ನೈಜ ಶಿಕ್ಷೆಯನ್ನು ಅನುಭವಿಸಿದ್ದಾರೆ" ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ಆರೋಪಿಯ ಜಾಮೀನು ವಿರೋಧಿಸುತ್ತಾ ಈ ಹಿಂದೆ ಪಂಜಾಬ್‌ ಸರ್ಕಾರವು ಆರೋಪಿಯು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ವಾದಿಸಿತ್ತು. ಆರೋಪಿಗಳು ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಹೊಂದಿದ್ದಾರೆ ಎಂಬ ರಹಸ್ಯ ಮಾಹಿತಿಯ ಆಧಾರದ ಮೇಲೆ ಸಹ-ಆರೋಪಿಯೊಬ್ಬರ ಮನೆಯಲ್ಲಿ ನಡೆಸಿದ ದಾಳಿಯ ಸಮಯದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿಗಳು ದರೋಡೆ, ಸುಲಿಗೆ ಮತ್ತು ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆಪಾದಿಸಲಾಗಿತ್ತು.

Kannada Bar & Bench
kannada.barandbench.com