ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಭಾಷಣಗಳಲ್ಲಿ ರಾಮ ಮಂದಿರದ ಸ್ಥಳದಲ್ಲಿ ಬಾಬರಿ ಮಸೀದಿಯನ್ನು ಮರಳಿ ತರಲು ಉದ್ದೇಶಿಸಿದ್ದಾರೆ ಎಂದು ಅಜಿತ್ ಭಾರ್ತಿ ತಮ್ಮ ಎಕ್ಸ್ ಖಾತೆಯಲ್ಲಿ ಸುಳ್ಳು ಮಾಹಿತಿ ಪ್ರಚಾರ ಮಾಡಿದ್ದಾರೆ ಎಂಬ ಆರೋಪದಡಿ ಯೂ ಟ್ಯೂಬರ್ ಅಜಿತ್ ಭಾರ್ತಿ ವಿರುದ್ಧ ದಾಖಲಾಗಿದ್ದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ತಮ್ಮ ವಿರುದ್ಧ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿ ಬಿಹಾರದ ಬೆಗುಸರಾಯ್ ನಿವಾಸಿಯಾದ ಅಜಿತ್ ಭಾರ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕದಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ ಶ್ಯಾಮ್ ಅವರು ಅಜಿತ್ ಭಾರ್ತಿ ಸಂವಿಧಾನ ಕೊಡಮಾಡಿರುವ ತಮ್ಮ ಮೂಲಭೂತ ಹಕ್ಕಿನ ಅನುಸಾರವೇ ನಡೆದುಕೊಂಡಿದ್ದಾರೆ. ಅವರ ವಿವರಣೆಯನ್ನು ಕಾನೂನು ಬಾಹಿರ ಎಂದು ಆಕ್ಷೇಪಿಸಿರುವ ದೂರುದಾರರ ನಡೆಯು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಘ್ನ ಒಡ್ಡುವಂತಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿದರು.
ಇದನ್ನು ಪುರಸ್ಕರಿಸಿದ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರು ತಮ್ಮ ಆಕ್ಷೇಪಣೆ ಸಲ್ಲಿಸಲಿ. ಅಲ್ಲಿಯವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಹೆಚ್ಚಿನ ತನಿಖೆಗೆ ಅನುಮತಿಸಲಾಗುವುದಿಲ್ಲ ಎಂದು ಹೇಳಿ ಪೀಠ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಅಜಿತ್ ಭಾರ್ತಿ ಅವರು ಇದೇ 13ರಂದು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೊದಲ್ಲಿ ರಾಹುಲ್ ಗಾಂಧಿ ರಾಮ ಮಂದಿರದ ಬದಲಿಗೆ ಬಾಬರಿ ಮಸೀದಿಯನ್ನು ಮರಳಿ ತರಲು ಉದ್ದೇಶಿಸಿದ್ದಾರೆ ಎಂಬ ವಿವರಣೆಯನ್ನು ಹರಿಬಿಟ್ಟಿದ್ದರು. ಇದು ಸುಳ್ಳು ಮಾಹಿತಿ. ಈ ಮೂಲಕ ಅವರು ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಬಿ ಕೆ ಬೋಪಣ್ಣ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153-ಎ ಮತ್ತು 502 (2)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.