ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಆರ್ ವಿ ದೇವರಾಜ್ ಅವರ ವಿರುದ್ಧ ಯಾವುದೇ ತೆರನಾದ ಹೇಳಿಕೆ ನೀಡದಂತೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶವನ್ನು ಈಚೆಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಮಾಡಿದೆ.
ಎಐಸಿಸಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್ ವಿ ದೇವರಾಜ್ ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 39ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಯಶವಂತ್ ಅವರು ಈ ಆದೇಶ ಮಾಡಿದ್ದಾರೆ.
ಮುಂದಿನ ವಿಚಾರಣೆಯವರೆಗೆ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ. ಪ್ರತಿವಾದಿಗಳಿಗೆ ಸಮನ್ಸ್ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಯನ್ನು ಜನವರಿ 31ಕ್ಕೆ ಮುಂದೂಡಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಮಾಜಿ ಶಾಸಕ, ಕೆಎಸ್‌ಆರ್‌ಟಿಸಿ ಮತ್ತು ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷರಾಗಿ ಸಮಾಜ ಮತ್ತು ರಾಜಕೀಯ ಕ್ಷೇತ್ರದಲ್ಲಿ ಆರ್ ವಿ ದೇವರಾಜ್ ಅವರು ಒಳ್ಳೆಯ ಹೆಸರು ಗಳಿಸಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅವರು ದೇವರಾಜ್ ಅವರ ವಿರುದ್ಧ ಆಧಾರರಹಿತ ಹೇಳಿಕೆ ನೀಡುತ್ತಿದ್ದು, ಅವಮಾನಕಾರಿ ಪದಗಳನ್ನು ಬಳಕೆ ಮಾಡುತ್ತಿದ್ದಾರೆ.
ಆರ್ ವಿ ದೇವರಾಜ್ ಅವರನ್ನು ಕಳ್ಳ, ಗೂಂಡಾ, ಮಾರ್ಕೆಟ್ ದೇವಿ, ತರಕಾರಿ ಮಾರುವವರಿಂದ ಮಾಮೂಲಿ ವಸೂಲಿ, ಬಿಲ್ಡರ್‌ಗಳಿಂದ ಹಣ ವಸೂಲಿ ಮಾಡುವವ ಎಂದಿದ್ದಾರೆ. ಈಡಿಯಟ್, ನೀಚ ವ್ಯಕ್ತಿ, ಭಯೋತ್ಪಾದಕ, ಅವರ ಆರೋಗ್ಯ ಕೆಟ್ಟಿದ್ದು, ಅವರನ್ನು ಹಿಡಿದು ಎತ್ತಲು ಇಬ್ಬರು ವ್ಯಕ್ತಿಗಳು ಬೇಕು. ಎಂಎಲ್‌ಎ ಆಗಲೂ ನಾಲಾಯಕ್, ಜನರು ಅವರಿಗೆ ಮತ ಹಾಕಬಾರದು, ಕೆಲಸಕ್ಕೆ ಬಾರದವನು ಇತ್ಯಾದಿ ಪದಗಳನ್ನು ಕೆಜಿಎಫ್ ಬಾಬು ಬಳಕೆ ಮಾಡಿದ್ದಾರೆ. ಬಿ-ಟಿವಿ ನ್ಯೂಸ್, ಪವರ್ ಟಿವಿಗಳಿಗೆ ನೀಡಿರುವ ಸಂದರ್ಶನಗಳಲ್ಲಿ ಈ ಪದಗಳ ಬಳಕೆಯನ್ನು ಕೆಜಿಎಫ್ ಬಾಬು ಬಳಕೆ ಮಾಡಿದ್ದು, ಈ ವಿಡಿಯೊಗಳು ಫೇಸ್‌ಬುಕ್, ಗೂಗಲ್, ವಾಟ್ಸಾಪ್‌ನಲ್ಲಿ ಲಭ್ಯವಿವೆ. ಆಧಾರಹಿತವಾದ ಹೇಳಿಕೆಗಳಿಂದ ದೇವರಾಜ್ ಅವರ ರಾಜಕೀಯ ಬದುಕಿಗೆ ಹಾನಿಯಾಗುತ್ತಿದ್ದು, ಸಾಕಷ್ಟು ಶ್ರಮವಹಿಸಿ ಸಂಪಾದಿಸಿರುವ ಹೆಸರಿಗೆ ಧಕ್ಕೆಯಾಗಿದೆ ಎಂದು ವಾದಿಸಲಾಗಿದೆ.
ಇದನ್ನು ಪರಿಗಣಿಸಿದ ನ್ಯಾಯಾಲಯವು ಮೇಲ್ನೋಟಕ್ಕೆ ದಾಖಲೆ ರಹಿತವಾಗಿ, ಫಿರ್ಯಾದಿಯ ಹೆಸರು ಹಾಳುಗೆಡವಲು ಉದ್ದೇಶಪೂರ್ವಕವಾಗಿ ಪ್ರತಿವಾದಿಯು ಹೇಳಿಕೆ ನೀಡಿದ್ದಾರೆ. ಇಂಟರ್ನೆಟ್, ಟಿವಿ, ಸಾಮಾಜಿಕ ಮಾಧ್ಯಮಗಳಲ್ಲಿ ಗೌರವಕ್ಕೆ ಹಾನಿ ಮಾಡಿರುವ ವಿಚಾರಗಳು ವ್ಯಾಪಕವಾಗಿ ಹಬ್ಬುತ್ತಿವೆ. ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡದೇ ನೋಟಿಸ್ ಜಾರಿ ಮಾಡಿದರೆ ಅದರ ಉದ್ದೇಶಕ್ಕೆ ಹಿನ್ನಡೆಯಾಗುತ್ತದೆ. ಹೀಗಾಗಿ, ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.