ಸಲಿಂಗ ವಿವಾಹಕ್ಕೆ ಮನ್ನಣೆ ನೀಡುವ ಮತ್ತು ನಿಯಂತ್ರಿಸುವ ಕಾಯಿದೆಯನ್ನು ಸಂಸತ್ತು ಜಾರಿಗೆ ತರದೇ ಇದ್ದರೂ ಅಂತಹ ಕಾನೂನು ರೂಪಿಸಲು ರಾಜ್ಯ ಶಾಸಕಾಂಗಗಳು ಸ್ವತಂತ್ರವಾಗಿವೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ ತೀರ್ಪಿನಲ್ಲಿ ಮಹತ್ವದ ಅವಲೋಕನ ಮಾಡಿದೆ.
ಈಗಿರುವ ಕಾನೂನು ಸಲಿಂಗ ಜೋಡಿ ವಿವಾಹವಾಗುವುದಕ್ಕೆ ಅಥವಾ ಸಿವಿಲ್ ಯೂನಿಯನ್ ಮದುವೆಗೆ ಸಮ್ಮತಿ ಸೂಚಿಸುವುದಿಲ್ಲ. ಹಾಗೆ ಸಮ್ಮತಿ ನೀಡುವ ಕಾನೂನು ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್ ನಿನ್ನೆಯ ತೀರ್ಪಿನಲ್ಲಿ ಹೇಳಿತ್ತು. ಆದರೆ, ಇದೇ ವೇಳೆ ಬಹುಮತ ಮತ್ತು ಅಲ್ಪಮತದ ತೀರ್ಪುಗಳೆರಡರಲ್ಲೂ ನ್ಯಾಯಮೂರ್ತಿಗಳು ʼಮದುವೆಗೆ ಸಂಬಂಧಿಸಿದ ಕಾಯಿದೆ ಜಾರಿಗೊಳಿಸುವ ಅಧಿಕಾರವನ್ನು ಸಂವಿಧಾನ, ಕೇಂದ್ರ ಹಾಗೂ ರಾಜ್ಯ ಶಾಸಕಾಂಗಗಳಿಗೆ ನೀಡಿರುವುದರಿಂದ ಕೇಂದ್ರದ ಕಾಯಿದೆ ಇಲ್ಲದಿದ್ದಾಗ ರಾಜ್ಯ ಶಾಸಕಾಂಗಗಳು ಈ ಕುರಿತು ನಿರ್ಧಾರ ತೆಗೆದುಕೊಳ್ಳಬಹುದು' ಎಂದು ಅಭಿಪ್ರಾಯಪಟ್ಟಿವೆ.
ಸಲಿಂಗ ಮನೋಧರ್ಮದ ವಿವಾಹಗಳಿಗೆ ಮನ್ನಣೆ ನೀಡಲು ರಾಜ್ಯ ಶಾಸಕಾಂಗ ಕೂಡ ಕ್ರಮ ಕೈಗೊಳ್ಳಬಹುದು ಎಂದು ಬಹುಮತದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಹಿಮಾ ಕೊಹ್ಲಿ ಅವರು ತಿಳಿಸಿದರು.
ಸರ್ಕಾರವು ಈ ಕುರಿತು ಅನೇಕ ನೀತಿ ನಿರ್ಧರಣಗಳನ್ನು ಕೈಗೊಳ್ಳಬಹುದು. ಮದುವೆ ಮತ್ತು ಕುಟುಂಬದ ಕುರಿತಾದ ಎಲ್ಲ ಕಾನೂನುಗಳನ್ನು ಅವು ಲಿಂಗ ತಟಸ್ಥವಾಗಿ ಮಾಡಬಹುದು. ಇಲ್ಲವೆ, ವಿಶೇಷ ವಿವಾಹ ಕಾಯಿದೆಯಂತಹ ಪ್ರತ್ಯೇಕ ಕಾಯಿದೆಯನ್ನು ಲಿಂಗ ತಟಸ್ಥವಾಗಿ ಜಾರಿಗೆ ತಂದು ಸಲಿಂಗ ಸಮುದಾಯಕ್ಕೆ ಮದುವೆಯ ಅವಕಾಶ ಕಲ್ಪಿಸಬಹುದು ಅಥವಾ ಸಿವಿಲ್ ಯೂನಿಯನ್ ಅಥವ ಗೃಹ ಪಾಲುದಾರಿಕೆ ಕಾಯಿದೆಗಳನ್ನು ಜಾರಿಗೆ ತರಬಹುದು. ಇದಲ್ಲದೆ ಮತ್ತೊಂದು ವಿಧಾನವೆಂದರೆ, ಕೇಂದ್ರದ ಕಾಯಿದೆಯ ಅನುಪಸ್ಥಿತಿಯಲ್ಲಿ ರಾಜ್ಯ ಶಾಸಕಾಂಗಗಳು ಈ ಕುರಿತು ಕ್ರಮ ಕೈಗೊಳ್ಳಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಅಲ್ಪಮತದ ತೀರ್ಪಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಕೂಡ “ಸಂವಿಧಾನದ ಏಳನೇ ಶೆಡ್ಯೂಲ್‌ಗೆ ಪಟ್ಟಿ III ರ ನಮೂದು 5 ರೊಂದಿಗೆ ಸಹವಾಚಿಸಿದ 245 ಮತ್ತು 246 ನೇ ವಿಧಿಗಳ ಅಡಿಯಲ್ಲಿ ಸಲಿಂಗ ಮನೋಧರ್ಮದ ವಿವಾಹಕ್ಕೆ ಮನ್ನಣೆ ನೀಡುವ ಮತ್ತು ನಿಯಂತ್ರಿಸುವ ಕಾನೂನುಗಳನ್ನು ಜಾರಿಗೆ ತರುವುದು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ವ್ಯಾಪ್ತಿಗೆ ಬರುತ್ತದೆ" ಎಂದು ವಿವರಿಸಿದರು.
ವಿವಾಹ ವಿಚಾರ ಸಮವರ್ತಿ ಪಟ್ಟಿಯಲ್ಲಿರುವುದರಿಂದ ರಾಜ್ಯ ಶಾಸಕಾಂಗಗಳು ಮದುವೆ ಕುರಿತಂತೆ ಕೇಂದ್ರ ಸರ್ಕಾರ ರೂಪಿಸಿದ್ದ ಕಾನೂನುಗಳಿಗೆ ತಿದ್ದುಪಡಿಗಳನ್ನು ಮಾಡಿವೆ ಎಂದು ಅವರು ಇದೇ ವೇಳೆ ಪ್ರಸ್ತಾಪಿಸಿದರು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]