ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿರುವ ಈ ಸಂದರ್ಭದಲ್ಲಿ ಭಾರತದ ಚುನಾವಣಾ ಆಯೋಗದ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ಮತ್ತು ಡಾ.ಸುಖ್ಬೀರ್ ಸಿಂಗ್ ಸಂಧು ಅವರ ನೇಮಕಾತಿ ತಡೆಹಿಡಿಯುವುದು ಅನಿಶ್ಚಿತತೆ ಮತ್ತು ಅರಾಜಕತೆಗೆ ಕಾರಣವಾಗುತ್ತದೆ" ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆ- 2023ನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಈ ಇಬ್ಬರ ನೇಮಕಾತಿಗೆ ತಡೆ ನೀಡಲು ನಿರಾಕರಿಸಿತ್ತು.
ಶುಕ್ರವಾರ ಪ್ರಕಟವಾದ ವಿವರವಾದ ಆದೇಶದಲ್ಲಿ ನೇಮಕಾತಿ ತಡೆ ಹಿಡಿಯುವುದು ಅವ್ಯವಸ್ಥೆ ಮತ್ತು ನೈಜ ಸಾಂವಿಧಾನಿಕ ಕುಸಿತಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ತಿಳಿಸಿದೆ.
"ಲೋಕಸಭೆಗೆ ನಡೆಯಲಿರುವ 18ನೇ ಸಾರ್ವತ್ರಿಕ ಚುನಾವಣೆಯ ಸಮಯವನ್ನು ಪರಿಗಣಿಸಿ ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ಅಥವಾ ನಿರ್ದೇಶನ ನೀಡುವುದು ಸೂಕ್ತವೆಂದು ಅನ್ನಿಸುತ್ತಿಲ್ಲ. ಮೇಲೆ ಸೂಚಿಸಿದಂತೆ, ಇದು ಅವ್ಯವಸ್ಥೆ ಮತ್ತು ಸಾಂವಿಧಾನಿಕ ಕುಸಿತಕ್ಕೆ ಕಾರಣವಾಗುತ್ತದೆ" ಎಂದು ಅದು ಹೇಳಿದೆ.
ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡಿರುವುದು ಭಾರತದ ಚುನಾವಣಾ ಆಯೋಗವನ್ನು ಹೆಚ್ಚು ಸಮರ್ಪಕಗೊಳಿಸಿದೆ ಎಂದು ಕೂಡ ನ್ಯಾಯಾಲಯ ಹೇಳಿದೆ.
"ಈ ನ್ಯಾಯಾಲಯ ಯಾವುದೇ ಹಸ್ತಕ್ಷೇಪ ಅಥವಾ ತಡೆಯಾಜ್ಞೆ ನೀಡುವುದು ಸ್ವಲ್ಪವೂ ಸರಿ ಎನಿಸುವುದಿಲ್ಲ ಮತ್ತು ಅನುಚಿತವಾಗಿರುತ್ತದೆ. ಏಕೆಂದರೆ ಇದು 19.04.2024 ರಿಂದ 01.06.2024 ರವರೆಗೆ ನಿಗದಿಯಾಗಿರುವ ಲೋಕಸಭೆಯ 18 ನೇ ಸಾರ್ವತ್ರಿಕ ಚುನಾವಣೆಗೆ ಅಡ್ಡಿಯಾಗುತ್ತದೆ" ಎಂದು ಅದು ವಿವರಿಸಿದೆ.
ಲೋಕಸಭೆಗೆ ನಡೆಯಲಿರುವ 18 ನೇ ಸಾರ್ವತ್ರಿಕ ಚುನಾವಣೆಯ ಸಮಯವನ್ನು ಪರಿಗಣಿಸಿ ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ಅಥವಾ ನಿರ್ದೇಶನ ನೀಡುವುದು ಸೂಕ್ತವೆಂದು ಅನಿಸುತ್ತಿಲ್ಲ. ಮೇಲೆ ಸೂಚಿಸಿದಂತೆ, ಇದು ಅವ್ಯವಸ್ಥೆ ಮತ್ತು ಸಾಂವಿಧಾನಿಕ ಕುಸಿತಕ್ಕೆ ಕಾರಣವಾಗುತ್ತದೆ.
ಸುಪ್ರೀಂ ಕೋರ್ಟ್
ಆದರೂ, ಈ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಿಸಲು ಅಳವಡಿಸಿಕೊಂಡ ಕಾರ್ಯವಿಧಾನವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದ್ದು ಆಯ್ಕೆ ಪ್ರಕ್ರಿಯೆಯ ಪಾವಿತ್ರ್ಯಕ್ಕೆ ಸಂಬಂಧಿಸಿದಂತೆ ನ್ಯಾಯಯುತ ಚರ್ಚೆಯ ಅಗತ್ಯವಿದೆ ಎಂದು ಹೇಳಿದೆ.
ನೇಮಕಗೊಂಡ ವ್ಯಕ್ತಿಗಳ ಅರ್ಹತೆ ಕುರಿತು ತನ್ನೆದುರು ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಇಲ್ಲವೇ ಅದನ್ನು ಪ್ರಶಿಸಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
"ಚುನಾವಣಾ ಆಯುಕ್ತರು ಎಂಬುದು ಸಾಂವಿಧಾನಿಕ ಹುದ್ದೆಯಾಗಿರುವುದರಿಂದ, ಒಮ್ಮೆ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವವರನ್ನು ಆಯ್ಕೆ ಮಾಡಿದ ನಂತರ, ಅವರು ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಬದ್ಧರಾಗಿದ್ದಾರೆ ಎಂದು ನಮಗೆ ನಾವೇ ನೆನಪಿಸಿಕೊಳ್ಳುವುದು ವಿವೇಚನಾಯುಕ್ತವಾಗಿರುತ್ತದೆ. ಅವರು ತಮ್ಮ ಕಾರ್ಯನಿರ್ವಹಣೆಯಲ್ಲಿ ಸಾಂವಿಧಾನಿಕ ಪಾತ್ರ ಮತ್ತು ಔಚಿತ್ಯಕ್ಕೆ ಬದ್ಧರಾಗಿರುತ್ತಾರೆ ಎಂಬ ಭಾವನೆಯಿದೆ" ಎಂದು ನ್ಯಾಯಪೀಠ ಹೇಳಿದೆ.
ಈ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೇಳಿಕೆಯೊಂದನ್ನು ಸುಪ್ರೀಂ ಕೋರ್ಟ್ ನೆನೆದಿದೆ:
"ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ, ಅದನ್ನು ಜಾರಿಗೆ ತರುತ್ತಿರುವವರು ಉತ್ತಮವಾಗಿಲ್ಲದಿದ್ದರೆ, ಅದು ಕೆಟ್ಟದು ಎನಿಸಿಕೊಳ್ಳುತ್ತದೆ. ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ, ಅದನ್ನು ಜಾರಿಗೆ ತರುವವರು ಉತ್ತಮವಾಗಿದ್ದರೆ, ಅದು ಒಳ್ಳೆಯದು ಎಂದು ನಿರೂಪಿತವಾಗುತ್ತದೆ".
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]