
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ನಿಯೋಜಿತ ಉಪ ಮುಖ್ಯಮಂತ್ರಿಯಾದ ಡಿ ಕೆ ಶಿವಕುಮಾರ್ ಅವರ ವಿರುದ್ಧದ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿರುವ ಅರ್ಜಿಯನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 14ಕ್ಕೆ ಮುಂದೂಡಿದೆ.
ಡಿ ಕೆ ಶಿವಕುಮಾರ್ ವಿರುದ್ಧದ ತನಿಖೆಗೆ ತಡೆ ನೀಡಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರ ನೇತೃತ್ವದ ವಿಭಾಗೀಯ ಪೀಠವು ಬುಧವಾರ ನಡೆಸಿತು.
ಶಿವಕುಮಾರ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು “ಅಕ್ರಮ ಆಸ್ತಿ ಗಳಿಕೆ ಪ್ರಕರಣವು ಮೇ 23ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ” ಎಂದರು. ಈ ವಾದ ಆಧರಿಸಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿತು.
ಸಿಬಿಐ ಆಕ್ಷೇಪದ ಹೊರತಾಗಿಯೂ ಫೆಬ್ರವರಿ 10ರಂದು ಡಿ ಕೆ ಶಿವಕುಮಾರ್ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿತ್ತು. ಆನಂತರ ಹಲವು ಬಾರಿ ಆದೇಶ ವಿಸ್ತರಣೆ ಮಾಡಿದೆ.
2017ರಲ್ಲಿ ಆದಾಯ ತೆರಿಗೆ ಇಲಾಖೆಯು ಡಿ ಕೆ ಶಿವಕುಮಾರ್ ಮನೆ-ಕಚೇರಿ ಮತ್ತು ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಿಗೇ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿತ್ತು. ಆ ಬಳಿಕ, ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಕರ್ನಾಟಕ ಸರ್ಕಾರದಿಂದ ಸಿಬಿಐ ಅನುಮತಿ ಪಡೆದುಕೊಂಡಿತ್ತು. 2019ರ ಸೆಪ್ಟೆಂಬರ್ 25ರಂದು ರಾಜ್ಯ ಸರ್ಕಾರ ಅನುಮತಿಸಿದ್ದು, 2020ರ ಅಕ್ಟೋಬರ್ 3ರಂದು ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್ 13 (2), 13 (1)(ಇ) ಅಡಿಯಲ್ಲಿ ಸಿಬಿಐ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ತಡೆಯಾಜ್ಞೆ ತೆರವು ಮಾಡಿ, ತನಿಖೆ ಮುಂದುವರಿಸಲು ಅನುಮತಿಸುವಂತೆ ಕೋರಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸಿಬಿಐ ತನಿಖೆಗೆ ಅನುಮತಿಸಿ ಕರ್ನಾಟಕ ಸರ್ಕಾರ ಅನುಮತಿಸಿರುವ ಆದೇಶವನ್ನು ಪ್ರಶ್ನಿಸಿ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ವಜಾ ಮಾಡಿತ್ತು.