[ಅಕ್ರಮ ವಲಸಿಗರ ಓಲೈಕೆ ನಿಲ್ಲಬೇಕು] ವಲಸಿಗರ ಮಾಹಿತಿ ನೀಡಿದ ವ್ಯಕ್ತಿ ವಿರುದ್ಧ ಎಫ್‌ಐಆರ್‌: ಹೈಕೋರ್ಟ್‌ ಕೆಂಡಾಮಂಡಲ

“ಬೇರೆಬೇರೆ ಮಾತನಾಡುವುದಲ್ಲ. ಮೊದಲು (ಅಕ್ರಮ ವಲಸೆ) ಇದನ್ನು ನಿಯಂತ್ರಿಸಲು ಹೇಳಿ. (ಗೃಹ) ಇಲಾಖೆ ಏನು ಮಾಡುತ್ತಿದೆ. ಬೇರೆ ಭಾಷಣದಲ್ಲಿ ತಲ್ಲೀನರಾಗಿದ್ದಾರೆಯೇ” ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು.
Bangladeshi immigrants, Karnataka High Court
Bangladeshi immigrants, Karnataka High Court
Published on

ಬಾಂಗ್ಲಾದೇಶದ ಅಕ್ರಮ ವಲಸಿಗರ ದೂರು ಆಧರಿಸಿ ನಗರದ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರೊಬ್ಬರ ವಿರುದ್ಧ ಹಲ್ಲೆ ಹಾಗೂ ಜೀವ ಬೆದರಿಕೆ ಸೇರಿದಂತೆ ಇನ್ನಿತರ ಆರೋಪಗಳ ಮೇಲೆ ಎರಡು ಎಫ್ಐಆರ್ ದಾಖಲಿಸಿದ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್ ಪೊಲೀಸರ ನಡೆ ನಿಜಕ್ಕೂ ರಾಷ್ಟ್ರದ ಭದ್ರತೆ ಮತ್ತು ಹಿತಾಸಕ್ತಿಗೆ ಬೆದರಿಕೆಯಾಗಿದ್ದು, ಸರ್ಕಾರವು ಅಕ್ರಮ ವಲಸಿಗರಿಗೆ ಸಹಕರಿಸುವುದು ಮತ್ತು ಓಲೈಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಮಂಗಳವಾರ ಮಾರ್ಮಿಕವಾಗಿ ನುಡಿದಿದೆ.

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶದ ಪ್ರಜೆಗಳನ್ನು ತೋರಿಸಿದ ಹಿನ್ನೆಯಲ್ಲಿ ಅವರ ದೂರು ಸ್ವೀಕರಿಸಿ ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಮಲ್ಲಸಂದ್ರದ ಟಿ ನಾಗೇಂದ್ರಪ್ಪ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪೊಲೀಸರು ಮತ್ತು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

Justice M Nagaprasanna
Justice M Nagaprasanna

ಅರ್ಜಿದಾರರ ವಿರುದ್ಧದ ಪೊಲೀಸರು ದಾಖಲಿಸಿರುವ ಪ್ರತ್ಯೇಕ ಎರಡು ಎಫ್ಐಆರ್‌ಗಳಿಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಿದ ಪೀಠವು ಅರ್ಜಿಯಲ್ಲಿ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಒ) ಅವರನ್ನು ಪ್ರತಿವಾದಿ ಮಾಡಿತು. ಹಾಗೆಯೇ, ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ಒದಗಿಸುವಂತೆ ಪೊಲೀಸರು ಹಾಗೂ ಸರ್ಕಾರಕ್ಕೆ ಸೂಚನೆ ನೀಡಿ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್‌ 6ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಗಿರೀಶ್‌ ಭಾರದ್ವಾಜ್‌ ಅವರು “ಅರ್ಜಿದಾರರು ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಅಕ್ರಮವಾಗಿ ನೆಲೆಸಿರುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪ್ರಕರಣದಲ್ಲಿ ದೂರುದಾರರಾಗಿರುವ ಬೆಂಗಳೂರಿನ ಹೊಸಸಿದ್ದಾಪುರದಲ್ಲಿ ನೆಲೆಸಿರುವ ಬಾಂಗ್ಲಾ ದೇಶದ ಪ್ರಜೆ ನಸ್ರೀನಾ ಅವರನ್ನು ತೋರಿಸಿದ್ದರು. ಬಾಂಗ್ಲಾ ಪ್ರಜೆಯಾದ ದೂರುದಾರೆಯು ಕಳೆದ 15 ವರ್ಷಗಳಿಂದ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ, ಅರ್ಜಿದಾರರು ಜುಲೈ 22ರಂದು ಬೆಳಿಗ್ಗೆ 11.30ಗೆ ಗಂಟೆಯಲ್ಲಿ ಮಾಹಿತಿ ನೀಡಿದ್ದರೆ; ದೂರುದಾರರ ಬಗ್ಗೆ ತನಿಖಾಧಿಕಾರಿಯು ಎಫ್ಆರ್‌ಆರ್‌ಒಗೆ ಪತ್ರ ಬರೆಯುತ್ತಾರೆ. ಅದಾದ ಕೇವಲ 15 ನಿಮಿಷಗಳಲ್ಲಿಯೇ ಬಾಂಗ್ಲಾ ಪ್ರಜೆ ನೀಡಿದ ದೂರು ದಾಖಲಿಸಿಕೊಂಡು ಹಲ್ಲೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಿ ಅರ್ಜಿದಾರರನ್ನು ಬಂಧಿಸಿ; ಜೈಲಿಗೆ ಕಳುಹಿಸಿದ್ದಾರೆ. ಮರು ದಿನ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕೊಡತಿ ಗ್ರಾಮದ ಕಾರ್ಮಿಕರ ಗುಡಿಸಲಿನಲ್ಲಿದ್ದ ಬಾಂಗ್ಲಾ ನಿವಾಸಿ ಮೊಹಮ್ಮದ್ ಸೈದುಲ್ಲಾ ಇಸ್ಲಾಂ ನೀಡಿದ ದೂರು ಆಧರಿಸಿ ವರ್ತೂರು ಠಾಣಾ ಪೊಲೀಸರು ಮತ್ತೊಂದು ದೂರು ದಾಖಲಿಸಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.

Girish Bharadwaj, Advocate
Girish Bharadwaj, Advocate

ದೂರುದಾರರರು ಬಾಂಗ್ಲದೇಶದ ಪ್ರಜೆಯಾಗಿ ಎಂಬುದು ತಿಳಿದು ಪೊಲೀಸರ ಪರ ಹಾಜರಿದ್ದ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠವು ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಿ ಎಂದು ನ್ಯಾಯಾಲಯ ನಿರ್ದೇಶಿಸುತ್ತಿದ್ದರೆ; ಪೊಲೀಸರು ಮಾತ್ರ ಅಕ್ರಮ ವಲಸಿಗರ ದೂರು ಸ್ವೀಕರಿಸಿ ನಮ್ಮ ದೇಶದ ಪ್ರಜೆಗಳ ಮೇಲೆ ದೂರು ಎಫ್ಐಆರ್ ದಾಖಲಿಸಿದ್ದೀರಲ್ಲಾ? ಎಂದು ಖಾರವಾಗಿ ಪ್ರಶ್ನಿಸಿತು.

ಜಗದೀಶ್‌ ಅವರು “ದೂರುದಾರರ ಮೇಲೆ ಅರ್ಜಿದಾರರು ಹಲ್ಲೆ ನಡೆಸಿದ್ದಾರೆ ಎಂಬ ಕಾರಣಕ್ಕೆ ದೂರು ದಾಖಲಿಸಲಾಗಿದೆ. ಬಾಂಗ್ಲಾ ಪ್ರಜೆ ಎಂದು ತಿಳಿದ ಕೂಡಲೇ ದೂರುದಾರರನ್ನು ವಿದೇಶಿಯರ ನೋಂದಣಿ ಅಧಿಕಾರಿ (ಎಫ್ಆರ್‌ಆರ್‌ಒ) ಎದುರು ಹಾಜರುಪಡಿಸಲಾಯಿತು” ಎಂದು ತಿಳಿಸಿದರು.

ಆಗ ಪೀಠವು “ಏನು ಹೊಡೆದಿದ್ದಾರೆ ಅಂತ? ಅವರು ಸುಳ್ಳು ಹೇಳುತ್ತಾರೆ. ಅವರು ಹೇಳಿದ್ದಾರೆಂದು ದೂರು ದಾಖಲಿಸುತ್ತೀರಾ? ಮಾರ್ಗಸೂಚಿಗಳ ಅನುಸಾರ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಬೇಕಿದೆ. ಆದರೆ, ಅವರು ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡು, ಅವರು ಇಲ್ಲೇ ನೆಲೆಸಲು ಅವಕಾಶ ಕಲ್ಪಿಸುತ್ತಿದ್ದೀರಿ. ಅವರು ನೀಡಿದ ದೂರು ಹೇಗೆ ತಾನೆ ಸ್ವೀಕರಿಸಲು ಸಾಧ್ಯ? ಇದರಿಂದಲೇ ಅಕ್ರಮ ವಲಸಿಗರು ನಮ್ಮ ದೇಶದಲ್ಲಿ ನೆಲೆಸುತ್ತಿದ್ದಾರೆ. ಸರ್ಕಾರ ಈ ರೀತಿ ಸಹಕರಿಸುತ್ತಿವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ” ಎಂದು ಖಾರವಾಗಿ ನುಡಿಯಿತು.

ಅಲ್ಲದೆ, "ಎಫ್ಆರ್‌ಆರ್‌ಒ ಅವರು ಕೂಡಲೇ ದೂರುದಾರರನ್ನು ದೇಶದಿಂದ ಗಡಿಪಾರು ಮಾಡುವುದಕ್ಕೆ ಕ್ರಮ ಜರುಗಿಸಬೇಕಲ್ಲವೇ? ಅದಕ್ಕೂ ಮುನ್ನವೇ 15 ನಿಮಿಷದಲ್ಲೇ ಅರ್ಜಿದಾರರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಇದು ಪ್ರತಿ ದೂರು ದಾಖಲಿಸುವುದಲ್ಲದೇ ಮತ್ತೇನು? ಈ ಸಣ್ಣ ವಿಚಾರ ತನಿಖಾಧಿಕಾರಿಗೆ ಗೊತ್ತಾಗುವುದಿಲ್ಲವೇ? ಮನಸ್ಸಿಗೆ ಬಂದಂತೆ ಆರೋಪ ಮಾಡಿದ ಕೂಡಲೇ ದೂರು ದಾಖಲಿಸುವುದು ಎಷ್ಟು ಸರಿ. ತನಿಖಾಧಿಕಾರಿಯು ಎಫ್ಆರ್‌ಆರ್‌ಒಗೆ ಬರೆದ ಪತ್ರದಲ್ಲಿ ದೂರುದಾರ ಬಾಂಗ್ಲಾ ಪ್ರಜೆ ಮೇಲೆ ಅರ್ಜಿದಾರರ ಹಲ್ಲೆ ಮಾಡಿದ್ದಾರೆ ಎಂದು ಒಂದಕ್ಷರವೂ ಉಲ್ಲೇಖಿಸಿಲ್ಲ. ಸರ್ಕಾರ ಹೀಗೆ ಸಹಕಾರ ನೀಡಿದರೆ; ಅಕ್ರಮ ವಲಸಿಗರ ಪ್ರಮಾಣ ನಾಯಿಕೊಡೆಯಂತೆ ಬೆಳೆಯುತ್ತದೆ. ಇದು ರಾಷ್ಟ್ರದ ಭದ್ರತೆಗೆ ಬೆದರಿಕೆ ಹಾಗೂ ಇಡೀ ಸಮಾಜಕ್ಕೆ ಅಪಾಯವಾಗಲಿದೆ. ಇಂತಹುದಕ್ಕೆ ವ್ಯವಸ್ಥೆಯು ಸಹಕರಿಸಬಾರದು. ಈ ಬೆಳವಣಿಗೆ ನಿಜಕ್ಕೂ ಕೆಟ್ಟದ್ದಾಗಿದೆ” ಎಂದು ಮಾರ್ಮಿಕವಾಗಿ ನುಡಿಯಿತು.

ಅಲ್ಲದೆ, ದೂರುದಾರರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ತೋರಿಸಿದಕ್ಕೆ 15 ನಿಮಿಷದಲ್ಲೇ ಅರ್ಜಿದಾರರ ವಿರುದ್ಧ ಪ್ರತಿದೂರು ದಾಖಲಿಸಲಾಗಿದೆ. ಕಾನೂನು ದುರ್ಬಳಕೆಗೆ ಇದಕ್ಕಿಂತ ಅತ್ಯುತ್ತಮ ಉದಾಹರಣೆ ಮತ್ತೊಂದಿಲ್ಲ. ದೂರುದಾರರನ್ನು ಗಡಿಪಾರು ಮಾಡಲು ಎಫ್ಆರ್‌ಆರ್‌ಒಗೆ ನಿರ್ದೇಶನ ನೀಡಲಾಗುವುದು ಎಂದು ನುಡಿದರು.

ಸರ್ಕಾರಿ ಅಭಿಯೋಜಕರು ಉತ್ತರಿಸಿ, ಅಕ್ರಮ ವಲಸಿಗರನ್ನು ತೋರಿಸಿದ್ದಾರೆ ಎಂಬ ಕಾರಣಕ್ಕೆ ಅರ್ಜಿದಾರರ ಮೇಲೆ ದೂರು ದಾಖಲಿಸಿಲ್ಲ. ಹಲ್ಲೆ ನಡೆಸಿರುವುದಾಗಿ ದೂರುದಾರರು ದೂರು ನೀಡಿದ್ದರಿಂದ ಎಫ್ಐಆರ್ ದಾಖಲಿಸಲಾಗಿದೆ ಅಷ್ಟೆ. ಅದು ಬಿಟ್ಟು ದೂರುದಾರರನ್ನು ಪೊಲೀಸರು ದೂರುದಾರರನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ವಾಸ್ತವವಾಗಿ ದೂರುದಾರ ಬಾಂಗ್ಲಾ ಪ್ರಜೆ ಎಂದು ತಿಳಿದ ಕ್ಷಣವೇ, ಎಫ್ಆರ್‌ಆರ್‌ಒಗೆ ಒಪ್ಪಿಸಿ; ವಿದೇಶಿಯರ ಬಂಧನ ಕೇಂದ್ರಕ್ಕೆ ಕರೆದೊಯ್ದು ಬಿಡಲಾಗಿದೆ ಎಂದರು.

ಆಗ ಪೀಠವು, ಹಾಗಾದರೆ ಅತ್ತ ದೂರುದಾರರನ್ನು ವಿದೇಶಿಯರ ಬಂಧನ ಕೇಂದ್ರಕ್ಕೆ ಕಳುಹಿಸಿ; ಇತ್ತ ಅರ್ಜಿದಾರರ ಮೇಲೆ 15 ನಿಮಿಷಗಳಲ್ಲೇ ಹಲ್ಲೆ ಆರೋಪದ ಮೇಲೆ ದೂರುದಾಖಲಿಸಿದ್ದೀರಾ? ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದೀರಲ್ಲಾ? ದೂರುದಾರರ ಮೈ ಮೇಲೆ ಗಾಯಗಳಿತ್ತೇ? ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತೆ? ಎಂದು ಕೇಳಿದರಲ್ಲದೆ, ಗಾಯಗಳಿಲ್ಲ; ಆಸ್ಪತ್ರೆಗೆ ದಾಖಲಿಸಿಲ್ಲ. ದೂರು ನೀಡಿದರೆ ಮಾತ್ರಕ್ಕೆ ಏನೊಂದು ಪರಿಶೀಲನೆ ನಡೆಸದೆ ಈ ದೇಶದ ಪ್ರಜೆ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರ ನಡೆ ನಿಜಕ್ಕೂ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ವ್ಯವಸ್ಥೆ ಬದಲಾಗಬೇಕು. ಇದು ಓಲೈಕೆಯಲ್ಲದೇ ಮತ್ತೇನೂ ಅಲ್ಲ. ಇಂತಹ ಓಲೈಕೆಯನ್ನು ನಿಲ್ಲಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು ಎಂದು ತಾಕೀತು ಮಾಡಿತು.

ಕೊನೆಯಲ್ಲಿ ಪೀಠವು “ಬೇರೆಬೇರೆ ಮಾತನಾಡುವುದಲ್ಲ. ಮೊದಲು (ಅಕ್ರಮ ವಲಸೆ) ಇದನ್ನು ನಿಯಂತ್ರಿಸಲು ಹೇಳಿ. (ಗೃಹ) ಇಲಾಖೆ ಏನು ಮಾಡುತ್ತಿದೆ. ಬೇರೆ ಭಾಷಣದಲ್ಲಿ ತಲ್ಲೀನರಾಗಿದ್ದಾರೆಯೇ” ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಹೊಸಸಿದ್ದಾಪುರದಲ್ಲಿ ನೆಲೆಸಿರುವ ಬಾಂಗ್ಲಾ ದೇಶದ ಪ್ರಜೆ ನಸ್ರೀನಾ ಮತ್ತು ಕೊಡತಿ ಗ್ರಾಮದ ಕಾರ್ಮಿಕರ ಗುಡಿಸಲಿನಲ್ಲಿ ವಾಸವಿರುವ ಮೊಹಮ್ಮದ್ ಸೈದುಲ್ಲಾ ಇಸ್ಲಾಂ ಎಂಬುವವರು ನೀಡಿದ ದೂರು ಆಧರಿಸಿ ಕ್ರಮವಾಗಿ ಬೆಳ್ಳಂದೂರು ಮತ್ತು ವರ್ತೂರು ಠಾಣಾ ಪೊಲೀಸರು, ಮಹಿಳೆಯ ಗೌರವಕ್ಕೆ ಧಕ್ಕೆ ತಂದ, ಹಲ್ಲೆ ನಡೆಸಿದ, ಸ್ವಯಂ ಪ್ರೇರಣೆಯಿಂದ ನೋಟು ಉಂಟು ಮಾಡಿದ, ಶಾಂತಿಭಂಗಕ್ಕೆ ಪ್ರಚೋದಿಸುವ ಉದ್ದೇಶದಿಂದ ಅವಮಾನ ಮಾಡಿದ, ಜೀವ ಬೆದರಿಕೆ ಹಾಕಿದ ಮತ್ತು ಅಕ್ರಮವಾಗಿ ನಿರ್ಬಂಧ ಹೇರಿರುವುದು ಸೇರಿದಂತೆ ಇನ್ನಿತರ ಆರೋಪಗಳ ಮೇಲೆ ಅರ್ಜಿದಾರರ ಮೇಲೆ ಪ್ರತ್ಯೇಕ ಎರಡು ಎಫ್ಐಆರ್ ದಾಖಲಿಸಿದ್ದರು. ಅವುಗಳನ್ನು ರದ್ದುಪಡಿಸುವಂತೆ ಕೋರಿ ನಾಗೇಂದ್ರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com