“ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ಪ್ರಾಣಿಗಳ ವಧೆ ನಡೆಯದಂತೆ ಖಾತರಿವಹಿಸಬೇಕು. ಈ ಸಂಬಂಧ ತುರ್ತಾಗಿ ಕ್ರಮಕೈಗೊಳ್ಳಬೇಕು” ಎಂದು ಬುಧವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದ್ದು, ಮನವಿ ವಿಲೇವಾರಿ ಮಾಡಿದೆ.
ಗೋ ಗ್ಯಾನ್ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ಕಾನೂನುಬಾಹಿರವಾಗಿ ಪ್ರಾಣಿವಧೆ ನಡೆಸುತ್ತಿರುವುದ ಪತ್ತೆಯಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು. ಕಾನೂನುಬಾಹಿರ ಪ್ರಾಣಿವಧೆಯಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಕ್ರಮ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.
“12ನೇ ಪ್ರತಿವಾದಿಯಾದ ಅಬ್ದುಲ್ ಹಕ್ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆ ನಡೆಸಿ ಅದನ್ನು ಸಂಬಂಧಪಟ್ಟ ವಿಚಾರಣಾಧೀನ ನ್ಯಾಯಾಲಯಕ್ಕೆ ತಡ ಮಾಡದೇ ಸಲ್ಲಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು “ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸೇರಿದಂತೆ ರಾಜ್ಯದ ವಿವಿಧೆಡೆ ಅಬ್ದುಲ್ ಹಕ್ ಅವರು ಕಾನೂನುಬಾಹಿರವಾಗಿ ಕಸಾಯಿಖಾನೆಗಳನ್ನು ನಡೆಸುತ್ತಿದ್ದು, ಬೆಂಗಳೂರು, ರಾಮನಗರ ಮತ್ತು ಹಾಸನ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಗೆ ಕಾನೂನುಬಾಹಿರವಾಗಿ ಗೋಮಾಂಸ ಪೂರೈಸುತ್ತಿರುವುದಕ್ಕೆ ಹಾಸನದ ನಿವಾಸಿಯಾದ ಹಕ್ ವಿರುದ್ಧ ಹಲವು ಕಡೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ಪೀಠದ ಗಮನಸೆಳೆದರು.
ಇದಕ್ಕೆ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಕಾನೂನುಬಾಹಿರವಾಗಿ ಪ್ರಾಣಿವಧೆ ನಡೆಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದ ಕಡೆಗಳೆಲ್ಲೆಲ್ಲಾ ಕ್ರಮಕೈಗೊಳ್ಳಲಾಗಿದೆ. ಚನ್ನರಾಯಪಟ್ಟಣದಲ್ಲಿ ಕಾನೂನುಬಾಹಿರವಾಗಿ ಪ್ರಾಣಿ ವಧೆ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಮನವಿಯನ್ನೂ ಪರಿಗಣಿಸಲಾಗಿದ್ದು, ಅದನ್ನು ನಿರ್ಬಂಧಿಸಲಾಗಿದೆ. ಆರೋಪಿ ಹಕ್ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಲಾಗಿದೆ” ಎಂದರು.
“ಕಾನೂನುಬಾಹಿರ ಪ್ರಾಣಿ ವಧೆ ಅಂಗಡಿಗಳನ್ನು ನಡೆಸದಂತೆ ಖಾತರಿವಹಿಸಲಾಗಿದ್ದು, ಇದರ ಮೇಲೆ ನಿರಂತರವಾಗಿ ನಿಗಾವಹಿಸಲಾಗಿದೆ ಎಂದು ಚನ್ನರಾಯಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ” ಎಂದು ಪೀಠಕ್ಕೆ ಸರ್ಕಾರದ ವಕೀಲರು ವಿವರಿಸಿದರು.