ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಪೂಜೆ-ಪುನಸ್ಕಾರ ನಿಲ್ಲಿಸಿ, ಸಂವಿಧಾನಕ್ಕೆ ತಲೆಬಾಗಿ: ನ್ಯಾಯಮೂರ್ತಿ ಅಭಯ್ ಎಸ್.ಓಕಾ

ಸಂವಿಧಾನ ಅಂಗೀಕಾರವಾಗಿ 75 ವರ್ಷಗಳಾಗುತ್ತಿರುವ ಈ ಸಂದರ್ಭ ಜಾತ್ಯತೀತತೆಯನ್ನು ಮುನ್ನಡೆಸಲು ಇದು ಸಕಾಲವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತಿಳಿಸಿದರು.
ನ್ಯಾಯಮೂರ್ತಿ ಎ.ಎಸ್.ಓಕಾ
ನ್ಯಾಯಮೂರ್ತಿ ಎ.ಎಸ್.ಓಕಾ

ದೇಶದ ಸಂವಿಧಾನ ಅಂಗೀಕಾರವಾಗಿ 75 ವರ್ಷಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಕೊನೆಗೊಳಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಕರೆ ನೀಡಿದ್ದಾರೆ.

ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚವಾಡದಲ್ಲಿ ಈಚೆಗೆ ನಡೆದ ನೂತನ ನ್ಯಾಯಾಲಯ ಕಟ್ಟಡದ ಶಂಕುಸ್ಥಾಪನೆ ಸಮಾರಂಭದ ವೇಳೆ, ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದ ಅವರು ಮಾತನಾಡಿದರು.

ಸಂವಿಧಾನದಲ್ಲಿರುವ ಜಾತ್ಯತೀತತೆಯ ಕಲ್ಪನೆಯನ್ನು ಪ್ರೋತ್ಸಾಹಿಸಬೇಕು ಮತ್ತು ನ್ಯಾಯಾಲಯ ಸಂಬಂಧಿತ ಕಾರ್ಯಕ್ರಮಗಳನ್ನು ಸಂವಿಧಾನ ಪೀಠಿಕೆಗೆ ನಮಿಸಿ ಆರಂಭಿಸಬಹುದು ಎಂದು ಸಲಹೆ ನೀಡಿದರು.

ನ್ಯಾ. ಓಕಾ ಅವರ ಭಾಷಣದ ಪ್ರಮುಖಾಂಶಗಳು

  • ಕೆಲವೊಮ್ಮೆ ನ್ಯಾಯಾಧೀಶರು ಅಹಿತಕರ ವಿಷಯಗಳನ್ನು ಹೇಳಬೇಕಾಗುತ್ತದೆ. ನಾನು ಸ್ವಲ್ಪ ಅಹಿತಕರವಾದದ್ದನ್ನು ಹೇಳಲಿದ್ದೇನೆ. ನ್ಯಾಯಾಲಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ವೇಳೆ ನಾವು ಪೂಜೆ-ಅರ್ಚನೆಗಳನ್ನು ನಿಲ್ಲಿಸಬೇಕು.

  • ಬದಲಾಗಿ ಸಂವಿಧಾನದ ಪ್ರಸ್ತಾವನೆಯ ಪಟವನ್ನು ಇರಿಸಿಕೊಂಡು ಕಾರ್ಯಕ್ರಮ ಆರಂಭಕ್ಕೂ ಮುನ್ನ ಅದಕ್ಕೆ ನಮಿಸಬೇಕು.

  • ಸಂವಿಧಾನ 75 ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಅದರ ಘನತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ನಾವು ಈ ಹೊಸ ರೂಢಿಯನ್ನು ಆರಂಭಿಸಬೇಕು.

  • ಸಂವಿಧಾನದ ಪೀಠಿಕೆಯಲ್ಲಿ 'ಜಾತ್ಯತೀತ' ಮತ್ತು 'ಪ್ರಜಾಪ್ರಭುತ್ವ' ಎಂಬ ಪದಗಳು ನನಗೆ ಬಹಳ ಮುಖ್ಯ.

  • ಡಾ. ಅಂಬೇಡ್ಕರ್ ಅವರು ನಮಗೆ ಆದರ್ಶನೀಯ ಸಂವಿಧಾನ ನೀಡಿದ್ದು ಅದರಲ್ಲಿ ಜಾತ್ಯತೀತತೆಯ ಉಲ್ಲೇಖವಿದೆ.

  • ನ್ಯಾಯಾಲಯ ವ್ಯವಸ್ಥೆ ಬ್ರಿಟಿಷರು ರೂಪುಗೊಳಿಸಿದ್ದರೂ ಅದು ಸಂವಿಧಾನದಿಂದ ನಡೆಯಲಿದ್ದು ನ್ಯಾಯಾಲಯಗಳನ್ನು ಸಂವಿಧಾನ ನೀಡಿದೆ.

  • ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ, ನ್ಯಾಯಾಲಯದ ಆವರಣದಲ್ಲಿ ಇಂತಹ ಧಾರ್ಮಿಕ ಆಚರಣೆಗಳನ್ನು ಕಡಿಮೆ ಮಾಡಲು ಯತ್ನಿಸಿದ್ದೆ. ಆದರೆ ಸಂಪೂರ್ಣ ತಡೆಯಲು ಸಾಧ್ಯವಾಗಲಿಲ್ಲ. ಆದರೆ ಸಂವಿಧಾನ ಅಂಗೀಕಾರವಾಗಿ 75 ವರ್ಷಗಳಾಗುತ್ತಿರುವ ಈ ಸಂದರ್ಭ ಜಾತ್ಯತೀತತೆಯನ್ನು ಮುನ್ನಡೆಸಲು ಸಕಾಲವಾಗಿದೆ.

Related Stories

No stories found.
Kannada Bar & Bench
kannada.barandbench.com