

ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ಮೊಬೈಲ್ ಪೋನ್‌ನಲ್ಲಿ ಸಂಗ್ರಹಿಸಿಟ್ಟಿರುವುದು ಸಹ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ (ಐಟಿ) ಅಪರಾಧವಾಗಲಿದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ.
ಮೊಬೈಲ್‌ನಲ್ಲಿ ಹೇರಳವಾಗಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ಸಂಗ್ರಹಿಸಿದ್ದ ವ್ಯಕ್ತಿಯೊಬ್ಬರ ವಿರುದ್ಧ ಪೋಕ್ಸೊ ಕಾಯಿದೆ-2012ರ ಸೆಕ್ಷನ್ 15 ಮತ್ತ ಐಟಿ ಕಾಯಿದೆ-2000ರ ಸೆಕ್ಷನ್ 67(ಬಿ) ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಕೇರಳದ ತ್ರಿಶೂರು ಜಿಲ್ಲೆಯ ಚೊಟ್ಟೂರುಪುರ ಕಿಲ್ಲನೂರಿನ ಪಿ ಜೆ ಬಿನೋಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ತಿರಸ್ಕರಿಸಿದೆ.
“ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳು ಮೊಬೈಲ್ ಪೋನ್‌ನಲ್ಲಿ ಸಂಗ್ರಹಿಸಲಾಗಿದೆಯಷ್ಟೆ. ಆದರೆ, ಅದನ್ನು ಯಾರಿಗೂ ಕಳುಹಿಸಿಲ್ಲ. ಹೀಗಾಗಿ, ಪೋಕ್ಸೊ ಕಾಯಿದೆ ಮತ್ತು ಐಟಿ ಕಾಯಿದೆಯಡಿ ಅಪರಾಧಗಳು ನನಗೆ ಅನ್ವಯವಾಗುವುದಿಲ್ಲ” ಎಂಬ ಅರ್ಜಿದಾರನ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
ಮಕ್ಕಳ ಅಶ್ಲೀಲ ಚಿತ್ರ ಹಾಗೂ ವಿಡಿಯೊಗಳನ್ನು ಪ್ರಸರಣ ಮಾಡುವುದಷ್ಟೇ ಅಲ್ಲ; ಪ್ರಸಾರವಾಗುವ ಸಾಮರ್ಥ್ಯವನ್ನು ಹೊಂದಿರುವ ಮಕ್ಕಳ ಅಶ್ಲೀಲ ಪೋಟೊ ಹಾಗೂ ವಿಡಿಯೊವನ್ನು ಸಂಗ್ರಹಿಸಿಡುವುದು ಸಹ ಪೋಕ್ಸೊ ಕಾಯಿದೆಯ ಸೆಕ್ಷನ್ 15ರ ಅಡಿಯಲ್ಲಿ ಅಪರಾಧವಾಗುತ್ತದೆ. ಈ ಕುರಿತು ಸುಪ್ರೀಂ ಕೋರ್ಟ್ ಸಹ ತೀರ್ಪು ನೀಡಿದೆ. ಅರ್ಜಿದಾರರು ತಮ್ಮ ಫೋನ್‌ನಿಂದ ಮಕ್ಕಳ ಅಶ್ಲೀಲ ಚಿತ್ರ ಮತ್ತು ಪೋಟೊವನ್ನು ರವಾನಿಸಿಲ್ಲ ಎಂಬ ಕಾರಣಕ್ಕಾಗಿ ಅವರು ಅಪರಾಧಕ್ಕೆ ಹೊಣೆಗಾರರಾಗಿರುವುದಿಲ್ಲ ಎಂದು ಅರ್ಥೈಸಲಾಗದು. ಪ್ರಕರಣ ಸಂಬಂಧ ವಿಚಾರಣಾಧೀನ ನ್ಯಾಯಾಲಯ ಈಗಾಗಲೇ ಅರ್ಜಿದಾರನ ವಿರುದ್ಧ ಆರೋಪಗಳನ್ನು ಹೊರಡಿಸಿದೆ. ಸಾಕ್ಷ್ಯಧಾರಗಳ ವಿಚಾರಣೆ ಹಂತದಲ್ಲಿ ಪ್ರಕರಣವಿದೆ. ಆತ ಪೂರ್ಣಪ್ರಮಾಣದ ವಿಚಾರಣೆಯಿಂದಲೇ ದೋಷಮುಕ್ತವಾಗಿ ಬರಲಿ. ಈ ಹಂತದಲ್ಲಿ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಅಪರಾಧ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಅರ್ಜಿದಾರರ ಮೊಬೈಲ್ ಫೋನ್ ಅನ್ನು ಪೊಲೀಸರು ತನಿಖೆ ವೇಳೆ ವಶಕ್ಕೆ ಪಡೆದಿದ್ದರು. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿತ್ತು. ಈ ವೇಳೆ ಮೊಬೈಲ್ ಸ್ಟೋರೇಜ್ ಬಾಕ್ಸ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳು ಹೇರಳವಾಗಿರುವುದು ಪತ್ತೆಯಾಗಿತ್ತು.
ಇದರಿಂದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು, ಅರ್ಜಿದಾರನ ವಿರುದ್ಧ ಐಟಿ ಕಾಯಿದೆ ಸೆಕ್ಷನ್ 67(ಬಿ) ಮತ್ತು ಪೋಕ್ಸೊ ಕಾಯಿದೆ ಸೆಕ್ಷನ್ 15ರ ಅನ್ವಯ; ಮಕ್ಕಳ ಅಶ್ಲೀಲ ಚಿತ್ರಗಳ ರಚನೆ, ಬ್ರೌಸಿಂಗ್, ಸಂಗ್ರಹಣೆ ಮತ್ತು ಪ್ರಸರಣ ಶಿಕ್ಷಾರ್ಹ ಅಪರಾಧ ಎಂಬ ಅಂಶಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಅರ್ಜಿದಾರನ ವಿರುದ್ಧ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ಆರೋಪ ಹೊರಿಸಿ ವಿಚಾರಣೆ ನಡೆಸುತ್ತಿತ್ತು. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.