
ಭಾರತದ ಸಮಾಜವು ವಿಕಲಚೇತನರೆಡೆಗೆ ಹೊಂದಿರುವ ಸಂವೇದನಾರಾಹಿತ್ಯತೆಯ ಬಗ್ಗೆ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಗುರುವಾರ ತಮ್ಮದೇ ಉದಾಹರಣೆಗಳೊಂದಿಗೆ ಬೆಳಕು ಚೆಲ್ಲಿದರು. ತಮ್ಮ ಇಬ್ಬರು ವಿಭಿನ್ನ ಸಾಮರ್ಥ್ಯದ ಹೆಣ್ಣುಮಕ್ಕಳ ವಿಶೇಷ ಅಗತ್ಯಗಳನ್ನು ಪೂರೈಸಲು ಅಗತ್ಯವಿರುವಂತಹ ನಿವಾಸವನ್ನು ಹುಡುಕಲು ದೆಹಲಿಯಲ್ಲಿ ತಾವು ಸಾಹಸ ಪಡುತ್ತಿರುವುದಾಗಿ ಅವರು ವಿವರಿಸಿದರು.
ಮಾಜಿ ಸಿಜೆಐ ಚಂದ್ರಚೂಡ್ ಅವರು ಏಪ್ರಿಲ್ 30ರೊಳಗೆ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಬೇಕಿದೆ. "ನಮಗೆ ಇಬ್ಬರು ಸುಂದರ ಹೆಣ್ಣುಮಕ್ಕಳಿದ್ದು, ಅವರಿಗೆ ವಿಭಿನ್ನ ಅಗತ್ಯಗಳಿವೆ. ಆದರೆ, ಅವರ ಅಗತ್ಯಗಳನ್ನು ಪೂರೈಸುವಂತಹ ಮನೆ ಸಿಗುವುದೇ ನಮಗೆ ಕಷ್ಟಕರವಾಗಿದೆ. ಪ್ರತಿಯೊಂದು ಸಾರ್ವಜನಿಕ ಸ್ಥಳವೂ ಒಂದೇ ತೆರನಾಗಿದೆ. ಬಹಳ ಸಮಯದಿಂದ, ನಮ್ಮ ಸಮಾಜವು ಅಂಗವಿಕಲರನ್ನು ಅಜ್ಞಾನ ಮತ್ತು ದಮನಗಳ ಪರದೆಯ ಹಿಂದೆ ಇರಿಸಿದೆ" ಎಂದು ಅವರು ಹೇಳಿದರು.
ಮಿಷನ್ ಆಕ್ಸೆಸಿಬಿಲಿಟಿ ಆಯೋಜಿಸಿದ್ದ "ಅಂಗವೈಕಲ್ಯ ಹಕ್ಕುಗಳು ಮತ್ತು ಅದರಾಚೆಗೆ" ಎಂಬ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ಅವರ ಪತ್ನಿ ಕಲ್ಪನಾ ದಾಸ್ ಅವರು ಪ್ರಿಯಾಂಕಾ ಮತ್ತು ಮಾಹಿ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದಾರೆ. ಈ ಹೆಣ್ಣುಮಕ್ಕಳು ನೆಮಲಿನ್ ಮಯೋಪತಿ ಎಂಬ ಖಾಯಿಲೆಯನ್ನು ಹೊಂದಿದ್ದಾರೆ. ಅಂಗವಿಕಲತೆಗೆ ಕಾರಣವಾಗುವ ಈ ಅಪರೂಪದ ಆನುವಂಶಿಕ ಸ್ಥಿತಿಯಿಂದಾಗಿ ತಮ್ಮ ಕುಟುಂಬ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚಂದ್ರಚೂಡ್ ಅವರು ವಿವರಿಸಿದರು.
ತಾವು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ವಿಕಲಚೇತನರೇ ನಡೆಸುವ 'ಮಿಟ್ಟಿ ಕೆಫೆ'ಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಆರಂಭಿಸಿದ ಅನುಭವವನ್ನು ಅವರು ಈ ವೇಳೆ ಹಂಚಿಕೊಂಡರು.
"ವೈಕಲ್ಯತೆ ಎನ್ನುವುದು ಒಂದು ತೊಡಕು ಅಲ್ಲ ಎನ್ನುವುದನ್ನು ತೋರಿಸುವ ಪ್ರಯತ್ನ ನಮ್ಮದಾಗಿತ್ತು. ಅವರು ಸೇವೆಯನ್ನು ಸ್ವೀಕರಿಸುವವರು ಮಾತ್ರವೇ ಅಲ್ಲದೆ ಸೇವೆಯನ್ನು ನೀಡುವವರಾಗಿಯೂ ಸಹ, ಘನತೆಯ ಜೀವನ ನಡೆಸುವ ಶಕ್ತಿಯನ್ನು ಹೊಂದಿದ್ದಾರೆ" ಎಂದು ಚಂದ್ರಚೂಡ್ ಅವರು ಹೇಳಿದರು.
ಈ ಪ್ರಯತ್ನವು ರಾಷ್ಟ್ರಪತಿಯವರಿಗೆ ರಾಷ್ಟ್ರಪತಿ ಭವನದಲ್ಲಿ 'ಮಿಟ್ಟಿ ಕೆಫೆ' ಆರಂಭಿಸಲು ಪ್ರೇರಣೆಯಾಯಿತು ಎಂದು ಅವರು ನೆನೆದರು.
ನ್ಯಾಯಾಂಗದಲ್ಲಿ ಅಂಗವೈಕಲ್ಯತೆಯ ಕುರಿತಾದ ಪ್ರಕರಣಗಳನ್ನು ಆದ್ಯತೆಯ ಪ್ರಕರಣಗಳಾಗಿ ಪರಿಗಣಿಸಬೇಕು ಎಂದು ಚರ್ಚೆಯ ವೇಳೆ ಚಂದ್ರಚೂಡ್ ಅವರು ಸಲಹೆ ನೀಡಿದರು.
ನ್ಯಾಯಾಂಗದಲ್ಲಿ ಅಂಗವೈಕಲ್ಯತೆಯ ಕುರಿತಾದ ಪ್ರಕರಣಗಳ ವಿಚಾರದಲ್ಲಿ ಉಂಟಾಗಿರುವ ರಚನಾತ್ಮಕ ಬದಲಾವಣೆಗಳನ್ನು ಸಹ ಅವರು ಹಂಚಿಕೊಂಡರು. ಅಂಧ ಅಭ್ಯರ್ಥಿಗಳಿಗೆ ನ್ಯಾಯಾಂಗದಲ್ಲಿ ಅವಕಾಶ ನಿರಾಕರಿಸುತ್ತಿದ್ದ ದಿನಗಳು ಮುಗಿದಿದ್ದು ಅವರನ್ನು ಒಳಗೊಳ್ಳುವ ಪ್ರಕ್ರಿಯೆಗಳಿಗೆ ಚಾಲನೆ ದೊರೆತಿರುವುದನ್ನು ವಿವರಿಸಿದರು. ಇದು ಕೇವಲ ಒಂದು ಪ್ರತ್ಯೇಕ ಉದಾಹರಣೆಯಾಗದೆ ಒಂದು ಚಳವಳಿಯ ರೂಪ ತಳೆದಿರುವ ಬಗ್ಗೆ ಭರವಸೆ ವ್ಯಕ್ತಪಡಿಸಿರು.
"ಒಂದು ಪ್ರತ್ಯೇಕ ಪ್ರಕರಣವಾಗಿ ಆರಂಭವಾದ ಘಟನೆಯು ಇಂದು ಒಂದು ಚಳವಳಿಯಾಗಿ ಮಾರ್ಪಡುತ್ತಿದೆ. ಅಂಗವೈಕಲ್ಯವುಳ್ಳ ವ್ಯಕ್ತಿಗಳು ಹೊಂದಿರುವುದು ವಿನಾಯಿತಿಗಳನ್ನಲ್ಲ, ಬದಲಿಗೆ ಹಕ್ಕುಗಳನ್ನು" ಎಂದು ಅವರು ಸ್ಪಷ್ಟಪಡಿಸಿದರು.
ಇಂದಿನ ದಿನಗಳಲ್ಲಿ ಉದ್ಯೋಗವೆನ್ನುವುದು ಸಾರ್ವಜನಿಕ ವಲಯದಿಂದ ಖಾಸಗಿ ವಲಯಗಳೆಡೆಗೆ ಪಲ್ಲಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಕಾಯಿದೆಯ ಬಗ್ಗೆ ಮರು ವಿಮರ್ಶೆ ನಡೆಸುವ ಅಗತ್ಯವಿದೆ. ಸ್ವಯಂ ಪ್ರೇರಣೆಯಿಂದ ಕಾಯಿದೆಯ ಅನುಪಾಲನೆಯನ್ನು ಮಾಡುವ ಬಗ್ಗೆ, ನಿರ್ಬಂಧಗಳನ್ನು ಸೇರಿಸುವ ಬಗ್ಗೆ, ನಿರ್ದಿಷ್ಟ ಸಮಯ ಮಿತಿಯನ್ನು ನಿಗದಿಪಡಿಸುವ ಬಗ್ಗೆ ಗಮಹರಿಸಬೇಕಿದೆ ಎಂದರು.
ಆಧುನಿಕ ಜೀವನವು ಮಾನಸಿಕ ಆರೋಗ್ಯದ ಮೇಲೆ ಉಂಟು ಮಾಡಿರುವ ಪರಿಣಾಮಗಳ ಬಗ್ಗೆಯೂ ಅವರು ಬೆಳಕು ಚೆಲ್ಲಿದರು. "ನಗರ ಪ್ರದೇಶದ ವಾತಾವರಣದಲ್ಲಿ ಮಾನಸಿಕ ಆರೋಗ್ಯವು ತೀವ್ರ ಒತ್ತಡಕ್ಕೆ ಗುರಿಯಾಗಿರುವುದನ್ನು ಒಪ್ಪಿಕೊಳ್ಳಬೇಕಾದ ಅಗತ್ಯವು ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ವಕೀಲಿಕೆ ವೃತ್ತಿಯಲ್ಲಿ ಈ ಒತ್ತಡವು ಮತ್ತೂ ಹೆಚ್ಚಿದೆ. ನೀವು ಇಂದು ಕಾನೂನು ಸಂಸ್ಥೆಗಳನ್ನು (ಲಾ ಫರ್ಮ್) ಸೇರಿಕೊಂಡರೆ ಬಹುತೇಕವಾಗಿ ಎಲ್ಲ ದಿನಗಳಂದು ಕೆಲಸ ನಿರ್ವಹಿಸಬೇಕಾಗುತ್ತದೆ. ಕಾರ್ಮಿಕರನ್ನು ಅಧಿಕವಾಗಿ ಹೊಂದಿರುವ ನಮ್ಮ ಅರ್ಥವ್ಯವಸ್ಥೆಯಲ್ಲಿ ನೀವು ವಾರಂಪ್ರತಿ 70 ಗಂಟೆಗಳಿಗೂ ಅಧಿಕ ಕೆಲಸ ಮಾಡಬೇಕು ಎಂದು ಹೇಳುವುದು ಉತ್ತಮ ನಡೆಯಲ್ಲ. ಕೆಲಸ ಬಿಡುವ ಪ್ರತಿಯೊಬ್ಬರ ಸ್ಥಾನವನ್ನು ತುಂಬಲು ಕೆಲಸಕ್ಕಾಗಿ ಕಾಯುತ್ತಿರುವ ಮತ್ತೊಬ್ಬರಿರುತ್ತಾರೆ," ಎಂದು ಅವರು ಹೇಳಿದರು.
ಸಮಾಜವು ವಿಕಲಚೇತನರ ಹಕ್ಕುಗಳನ್ನು ಎತ್ತಿ ಹಿಡಿಯವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ಅಗತ್ಯತೆಯನ್ನು ಒತ್ತಿಹೇಳಿದ ಚಂದ್ರಚೂಡ್ ಅವರು, ಬದಲಾವಣೆಗೆ ನ್ಯಾಯಾಲಯವು ಒಂದು ವೇದಿಕೆಯಾಗಿದ್ದು, ಸಮಾಜದ ಪಾತ್ರವನ್ನು ನಾವು ನಗಣ್ಯಗೊಳಿಸಲಾಗದು ಎಂದರು .
ಮಿಷನ್ ಆಕ್ಸೆಸಿಬಿಲಿಟಿಯ ಸಹ-ಸಂಸ್ಥಾಪಕ ವಕೀಲ ರಾಹುಲ್ ಬಜಾಜ್ ಅವರು ಸ್ವಾಗತ ಭಾಷಣ ಮಾಡಿದರು.