ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಉತ್ತರ ಭಾಗದಲ್ಲಿ ವಾಯು ಮಾಲಿನ್ಯಕ್ಕೆ ಗಣನೀಯ ಕೊಡುಗೆ ನೀಡುವ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರ ಕೃಷಿತ್ಯಾಜ್ಯ ಸುಡುವಿಕೆಯನ್ನು ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಗೋಧಿ ಮತ್ತು ಭತ್ತದಂತಹ ಧಾನ್ಯಗಳನ್ನು ಕೊಯ್ಲು ಮಾಡಿದ ನಂತರ ಹೊಲಗಳಲ್ಲಿ ಉಳಿಯುವ ತ್ಯಾಜ್ಯವಸ್ತುವಿಗೆ (ಕೂಳೆ) ರೈತರು ಬೆಂಕಿ ಹಚ್ಚುವುದನ್ನು ಕೃಷಿತ್ಯಾಜ್ಯ ಸುಡುವಿಕೆ ಎನ್ನುತ್ತಾರೆ. ಮುಂದಿನ ಬೆಳೆಗಳಿಗೆ ಹೊಲಗಳನ್ನು ಹಸನುಮಾಡಲು ಕೂಳೆಯನ್ನು ಸುಡಲಾಗುತ್ತದೆ. ಜಮೀನನ್ನು ಹದಗೊಳಿಸುವ ಸುಲಭದ ಮತ್ತು ಅಗ್ಗದ ಮಾರ್ಗ ಇದಾಗಿದೆ. ಆದರೆ ಇದರಿಂದ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತದೆ.
ಕೃಷಿ ತ್ಯಾಜ್ಯ ಸುಡುವಿಕೆಯಿಂದ ಉಂಟಾಗುವ ಅಪಾಯಕಾರಿ ವಾತಾವರಣಕ್ಕೆ ದೆಹಲಿ ನಿರಂತರವಾಗಿ ತನ್ನನ್ನು ಒಡ್ಡಿಕೊಳ್ಳುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ವಿಭಾಗೀಯ ಪೀಠ ಕೃಷಿ ತ್ಯಾಜ್ಯ ಸುಡುವಿಕೆಯೇ ವಾಯುಮಾಲಿನ್ಯಕ್ಕೆ ಏಕೈಕ ಕಾರಣ ಅಲ್ಲದಿದ್ದರೂ ಅದು ಗಮನಾರ್ಹ ಕೊಡುಗೆ ನೀಡುತ್ತದೆ ಎಂದಿತು.
ಹಾಗಾಗಿ ಒಂದಲ್ಲಾ ಒಂದು ರೀತಿಯಲ್ಲಿ ಕೃಷಿ ತ್ಯಾಜ್ಯ ಸುಡುವುದನ್ನು ಸ್ಥಗಿತಗೊಳಿಸಬೇಕು ಈಗ ಇರುವಂತೆ ದೆಹಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಅದು ತಿಳಿಸಿತು.
ಕೃಷಿತ್ಯಾಜ್ಯ ಸುಡುವಿಕೆ ತಪ್ಪಿಸುವ ಹೊಣೆಯನ್ನು ಸ್ಥಳೀಯ ಪೊಲೀಸ್ ಠಾಣಾಧಿಕಾರಿಗೆ (ಎಸ್‌ಎಚ್‌ಒ) ವಹಿಸಬೇಕು. ರಾಜ್ಯ ಮುಖ್ಯ ಕಾರ್ಯದರ್ಶಿ ಇದರ ಮೇಲುಸ್ತುವಾರಿ ವಹಿಸಿಕೊಳ್ಳಬೇಕು ಎಂದು ಮಧ್ಯಂತರ ಪರಿಹಾರವಾಗಿ ನ್ಯಾಯಾಲಯ ನಿರ್ದೇಶನ ನೀಡಿದೆ.
ಭತ್ತದ ಕೂಳೆಯನ್ನು ಸುಡುವ ಬದಲು ಎಥೆನಾಲ್ ತಯಾರಿಸಲು ಬಳಸಬೇಕು ಎಂಬ ಸಲಹೆಯೊಂದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ವಿವಿಧ ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.
ವಕೀಲೆ ಅಪರಾಜಿತಾ ಸಿಂಗ್, ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ವಾದ ಮಂಡಿಸಿದರು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 10ರಂದು ನಡೆಯಲಿದೆ.