
ದೇಶದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾದ ಪ್ರಸಕ್ತ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್ಎಟಿ) ಫಲಿತಾಂಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ದೆಹಲಿ ಹೈಕೋರ್ಟ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ.
ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆತಂಕ ಇರುವುದರಿಂದ, ಸಾಧ್ಯವಾದಷ್ಟು ಬೇಗ ಪ್ರಕರಣದ ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ವಿದ್ಯಾರ್ಥಿಗಳಿಗೆ ಮಂಡಳಿ ಪರೀಕ್ಷೆಗಳು ನಡೆಯುತ್ತಿದ್ದು ಸಿಎಲ್‌ಎಟಿ ಪ್ರವೇಶ ಪರೀಕ್ಷೆಯ ಅನಿಶ್ಚಿತತೆಯಿಂದಾಗಿ ಅವರಲ್ಲಿ ಬಹಳಷ್ಟು ಒತ್ತಡವಿದೆ. ಎನ್‌ಎಲ್‌ಯು ಒಕ್ಕೂಟ ಅಫಿಡವಿಟ್ ಸಲ್ಲಿಸಲಿ. ವಿಚಾರಣೆಯು ತ್ವರಿತ ಹಾಗೂ ಸರಾಗವಾಗಿ ನಡೆಯುವಂತೆ ತಾನು ಸುಗಮಗೊಳಿಸುವುದಾಗಿ ನ್ಯಾಯಾಲಯವು ವಿವರಿಸಿತು.
ಪ್ರಕರಣ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದ್ದು ಎರಡು ರೀತಿಯ ಸವಾಲುಗಳನ್ನು ಒಳಗೊಂಡಿರುವುದರಿಂದ ಎರಡು ಹಂತಗಳಲ್ಲಿ ತಾನು ವಿಚಾರಣೆ ನಡೆಸುವುದಾಗಿ ಅದು ಹೇಳಿದೆ.
ಸುಪ್ರೀಂ ಕೋರ್ಟ್ ಸೂಚನೆಯ ಪ್ರಕಾರ ಅರ್ಜಿಗಳನ್ನು ಒಗ್ಗೂಡಿಸಿ ಆಲಿಸಲಾಗುತ್ತಿದ್ದು ಪರೀಕ್ಷೆ ಆಯೋಜಿಸುವ ಎನ್‌ಎಲ್‌ಯು ಒಕ್ಕೂಟಕ್ಕೆ ಇಂದು ಪ್ರಕರಣಕ್ಕೆ ಸಂಬಂಧಿಸಿದ ನೋಟಿಸ್ ನೀಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 7 ರಂದು ನಡೆಯಲಿದೆ.
ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಗೊಂದಲಗಳಿಗೆ ಸಂಬಂಧಿಸಿದಂತೆ ದೆಹಲಿ , ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಪದವಿ ಪ್ರವೇಶಾತಿ ಪರೀಕ್ಷೆ ಮಾತ್ರವಲ್ಲದೆ ಸಿಎಲ್‌ಎಟಿ ಪಿಜಿ ಪರೀಕ್ಷೆಗಳ ಉತ್ತರಗಳಲ್ಲೂ ದೋಷ ಕಂಡುಬಂದಿದ್ದು ವಿವಾದಕ್ಕೆ ಸಿಲುಕಿತ್ತು. ಸ್ನಾತಕೋತ್ತರ ಪರೀಕ್ಷೆಯ ಫಲಿತಾಂಶಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅಲ್ಲದೆ ಏಕಸದಸ್ಯ ಪೀಠ ತಜ್ಞರ ಪಾತ್ರ ನಿರ್ವಹಿಸಿದ್ದು ಫಲಿತಾಂಶದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಎನ್‌ಎಲ್‌ಯುಗಳ ಒಕ್ಕೂಟವೂ ಅರ್ಜಿ ಸಲ್ಲಿಸಿತ್ತು. ಈ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ಆಲಿಸುವಂತೆ ಸುಪ್ರೀಂ ಕೋರ್ಟ್ ಈಚೆಗೆ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು.