ಸಿಎ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ವಿನಾಯಿತಿ ಕೋರಬಾರದು: ಸುಪ್ರೀಂ ಕೋರ್ಟ್

ಅರ್ಜಿದಾರರ ಅಹವಾಲುಗಳಿಗೆ ಸಂಬಂಧಿಸಿದಂತೆ ವಿಸ್ತೃತವಾದ ಉತ್ತರವನ್ನೊಳಗೊಂಡ ಮಾಧ್ಯಮ ಹೇಳಿಕೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಐಸಿಎಐಗೆ ನ್ಯಾಯಾಲಯ ಸೂಚಿಸಿದೆ.
CA Exams 2020
CA Exams 2020
Published on

ಚಾರ್ಟರ್ಡ್‌ ಅಕೌಂಟೆಂಟ್‌ ಪರೀಕ್ಷೆಗಳಲ್ಲಿ (ಸಿಎ ಪರೀಕ್ಷೆ) ಭಾಗಿಯಾಗುವ ವಿದ್ಯಾರ್ಥಿಗಳಿಗೆ ರಕ್ಷಣೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಹಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಲೇವಾರಿ ಮಾಡಿರುವ ಸುಪ್ರೀಂ ಕೋರ್ಟ್‌, “ವೃತ್ತಿಪರ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ವಿನಾಯಿತಿ ಕೋರಬಾರದು” ಎಂದು ಸ್ಪಷ್ಟವಾಗಿ ಹೇಳಿದೆ.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ದಿನೇಶ್‌ ಮಹೇಶ್ವರಿ ಮತ್ತು ಸಂಜೀವ್‌ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಬುಧವಾರ ಪ್ರಕರಣವನ್ನು ವಿಲೇವಾರಿ ಮಾಡಿತು.

ಅರ್ಜಿದಾರರ ವಕೀಲರೊಂದಿಗೆ ಚರ್ಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಭಾರತೀಯ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಸಂಸ್ಥೆಯು (ಐಸಿಎಐ) ವಿವರಿಸಿತು. ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವ ಸ್ಥಿತಿಯಲ್ಲಿ ಐಸಿಎಐ ಇಲ್ಲ ಎಂದು ಹೇಳಿದ್ದು, ಸಿಎ ಪರೀಕ್ಷೆಗಳು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗಳಿಗಿಂತ (ನೀಟ್‌) ಭಿನ್ನ ಎಂದು ಹೇಳಿದೆ.

“ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳಿಗೆ ನಾವು ಬದ್ಧವಾಗಿದ್ದೇವೆ. ಅವರ ಪ್ರಕಾರ ಪ್ರತ್ಯೇಕ ಕೊಠಡಿಗಳು ಇರಬೇಕು. ಆದರೆ, ಈ ಪರೀಕ್ಷೆಯು 18 ದಿನಗಳ ವರೆಗೆ ನಡೆಯುವುದರಿಂದ ನಾವು 5 ಲಕ್ಷ ವಿದ್ಯಾರ್ಥಿಗಳ ಬದುಕನ್ನು ತೊಂದರೆಗೆ ದೂಡಲಾಗದು. ಕೋವಿಡ್‌ ಸೋಂಕಿರಿಗೆ ಅನುವು ಮಾಡುವ ಮೂಲಕ ಅಪಾಯವನ್ನು ಆಹ್ವಾನಿಸಲಾಗದು” ಎಂದು ಐಸಿಎಐ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ರಾಮ್‌ಜಿ ಶ್ರೀನಿವಾಸನ್‌ ವಾದಿಸಿದರು.

ಹದಿನೆಂಟು ದಿನಗಳ ಸುದೀರ್ಘ ಪರೀಕ್ಷೆಯಾಗಿರುವುದರಿಂದ ಸಾರಿಗೆ ಮತ್ತು ವಸತಿ ವ್ಯವಸ್ಥೆ ಮಾಡಲಾಗದು ಎಂದಿರುವ ಶ್ರೀನಿವಾಸನ್‌ ಅವರು “ಆನ್‌ಲೈನ್‌ನಲ್ಲಿ ಮೂರು ಗಂಟೆಗಳ ವರೆಗೆ ವಿವರಣಾತ್ಮಕ ಉತ್ತರ ಬರೆಯಲು ನಾವು ಒಪ್ಪಿಗೆ ಸೂಚಿಸಲಾಗದು. ಇದು ಟಿಕ್‌ ಮಾರ್ಕ್‌ ಪರೀಕ್ಷೆಯಲ್ಲ” ಎಂದು ವಾದ ಮಂಡನೆ ಮಾಡಿದರು.

ಈ ವೇಳೆ ಅರ್ಜಿದಾರರ ಉದ್ದೇಶಿಸಿ ನ್ಯಾಯಪೀಠವು ಹೀಗೆ ಹೇಳಿತು:

“ಇದಕ್ಕೆ (ಅರ್ಜಿದಾರರ ಮನವಿಗೆ) ಹೇಗೆ ಅನುಮತಿಸಲಾಗುತ್ತದೆ? ನ್ಯಾಯಾಲಯಗಳು ಈ ಬಗೆಯ ಮನವಿಗಳಿಗೆ ಅನುಮತಿ ನೀಡುತ್ತಿವೆ ಎಂದ ಮಾತ್ರಕ್ಕೆ ನಿಮಗೆ ಇಷ್ಟ ಬಂದದ್ದನ್ನೆಲ್ಲಾ ಕೇಳುತ್ತಿರುವ ಹಾಗಿಲ್ಲ. ನಿಮ್ಮ ಬೇಡಿಕೆಗಳು ವಿವೇಚನೆಯಿಂದಿರಲಿ.”
ಸುಪ್ರೀಂ ಕೋರ್ಟ್‌

ಅರ್ಜಿದಾರರ ಪರ ವಕೀಲರಾದ ಬಾನ್ಸುರಿ ಸ್ವರಾಜ್‌ ಅವರಿಗೆ “ತಮ್ಮ ವಾದವು ನಮಗೆ ಒಪ್ಪಿಗೆಯಾಗಲಿಲ್ಲ. ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳ ಕೈಗಳು ಬೆವರುತ್ತವೆ ಎಂದು ಹೇಳುತ್ತೀರಿ. ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮಾಡಬೇಕೆಂದರೆ ಅದೆಲ್ಲಾ ಸಾಮಾನ್ಯ” ಎಂದು ಪೀಠ ಹೇಳಿತು.

Also Read
[ಕೋವಿಡ್ -19] ಭೌತಿಕ ಪರೀಕ್ಷೆ ನಡೆಸಲು ಕಾನೂನು ಕಾಲೇಜುಗಳಿಗೆ ಅನುವು ಮಾಡಿಕೊಟ್ಟ ಬಿಸಿಐ

ಅರ್ಜಿದಾರರ ಅಹವಾಲುಗಳಿಗೆ ಸಂಬಂಧಿಸಿದಂತೆ ವಿಸ್ತೃತವಾದ ಉತ್ತರವನ್ನೊಳಗೊಂಡ ಮಾಧ್ಯಮ ಹೇಳಿಕೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಐಸಿಎಐಗೆ ನ್ಯಾಯಾಲಯ ಸೂಚಿಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಸಿಎ ಪರೀಕ್ಷೆಯಲ್ಲಿ ಯಾವೆಲ್ಲಾ ಸೌಲಭ್ಯ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದೆ. ಪ್ರಸಕ್ತ ಸುತ್ತಿನ ಸಿಎ ಪರೀಕ್ಷೆಯು ನವೆಂಬರ್‌ 21ರಿಂದ ಆರಂಭವಾಗಲಿದೆ.

Kannada Bar & Bench
kannada.barandbench.com