ಟೂಲ್‌ಕಿಟ್‌ ಪ್ರಕರಣ: ಪರಿಸರ ಕಾರ್ಯಕರ್ತ ಶುಭಂ ಕರ್‌ ಚೌಧರಿಗೆ ಟ್ರಾನ್ಸಿಟ್‌ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್‌

ನ್ಯಾಯದಾನ ದೃಷ್ಟಿಯಿಂದ ಅರ್ಜಿದಾರರಿಗೆ ಪರಿಹಾರ ಕಲ್ಪಿಸಲಾಗಿದ್ದು, ಜಾಮೀನು ಪಡೆಯಲು ಸೂಕ್ತ ಸಂಸ್ಥೆಯ ಮೆಟ್ಟಿಲೇರಲು ಅವಕಾಶ ಮಾಡಿಕೊಡಲಾಗಿದೆ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಹೇಳಿದೆ.
High Court of Bombay at Goa
High Court of Bombay at Goa

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಸೈಬರ್‌ ಅಪರಾಧ ವಿಭಾಗದ ಪೊಲೀಸರು ದಾಖಲಿಸಿರುವ ಟೂಲ್‌ಕಿಟ್‌ ಪ್ರಕರಣದಲ್ಲಿ ಪರಿಸರ ಕಾರ್ಯಕರ್ತ ಶುಭಂ ಕರ್‌ ಚೌಧರಿ ಅವರಿಗೆ ಗೋವಾದಲ್ಲಿರುವ ಬಾಂಬೆ ಹೈಕೋರ್ಟ್‌ ಪೀಠವು ಬುಧವಾರ 10 ದಿನಗಳ ಟ್ರಾನ್ಸಿಟ್‌ ಜಾಮೀನು ಮಂಜೂರು ಮಾಡಿದೆ.

“ನ್ಯಾಯದಾನದ ದೃಷ್ಟಿಯಿಂದ ಪ್ರಕರಣದ ಅರ್ಹತೆಯನ್ನು ಪರಿಶೀಲಿಸದೇ ಸಂಬಂಧಪಟ್ಟ ನ್ಯಾಯಿಕ ಸಂಸ್ಥೆಯಿಂದ ಸೂಕ್ತ ಪರಿಹಾರ ಪಡೆಯಲು ಅರ್ಜಿದಾರರಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಅವರಿಗೆ ಟ್ರಾನ್ಸಿಟ್‌ ಜಾಮೀನು ನೀಡಲಾಗಿದೆ” ಎಂದು ನ್ಯಾಯಮೂರ್ತಿ ಎಂ ಎಸ್‌ ಜವಲ್ಕರ್‌ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ.

ತಾನು ಉತ್ಸುಕ ಪರಿಸರವಾದಿಯಾಗಿ ಸುಸ್ಥಿರ ಪರಿಸರ ಪರಿಹಾರಗಳು ಮತ್ತು ನೀತಿ ನಿರೂಪಣೆಗೆ ಪರಿಸರ ಸಂಬಂಧಿತ ಮಾರ್ಗ ಸೂಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದಾಗಿ ಚೌಧರಿ ವಾದಿಸಿದ್ದಾರೆ. ಎಕ್ಸ್ಟಿಂಕ್ಷನ್‌ ರೆಬೆಲಿಯನ್‌ ಎಂಬ ಜನಪ್ರಿಯ ಪರಿಸರ ಸಂಸ್ಥೆಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದು, ಸದ್ಯ ದಕ್ಷಿಣ ಏಷ್ಯಾ ಸಂಪರ್ಕ ಅಧಿಕಾರಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಸಹ ಆರೋಪಿಗಳಾದ ನಿಕಿತಾ ಜೇಕಬ್‌, ಶಂತನು ಮುಲುಕ್‌ ಮತ್ತು ದಿಶಾ ರವಿ ಅವರು ಆರೋಪಿಸಲಾದ ಟೂಲ್‌ಕಿಟ್‌ ಸೃಷ್ಟಿಸಿದ್ದು, ಅದರಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಚೌಧರಿ ಪ್ರಾಥಮಿಕ ವಾದ ಮಂಡಿಸಿದ್ದಾರೆ. “ತಪ್ಪಾಗಿ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದ್ದು, ಎಫ್‌ಐಆರ್‌ನಲ್ಲಿ ಆರೋಪಿಸಲಾದ ಅಪರಾಧಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ” ಎಂದು ಚೌಧರಿ ಹೇಳಿದ್ದಾರೆ.

Also Read
ದಿಶಾ ರವಿ ಪ್ರಕರಣದ ಆದೇಶದಿಂದ ಹೈಕೋರ್ಟ್‌ಗಳು, ಸುಪ್ರೀಂಕೋರ್ಟ್ ಪಾಠ ಕಲಿಯಬೇಕಿದೆ: ಮಾಜಿ ಅಟಾರ್ನಿ ಜನರಲ್ ರೋಹಟ್ಗಿ

ಔರಂಗಬಾದ್‌ ಪೀಠದ ಆದೇಶಕ್ಕೆ ಬದ್ಧವಾಗಿದ್ದು, ಏನನ್ನೂ ಹೇಳಬಯಸುವುದಿಲ್ಲ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ. ಬಂಧನ ಆತಂಕದ ಹಿನ್ನೆಲೆಯಲ್ಲಿ ಚೌಧರಿ ಅವರು ಪ್ರಕರಣ ಪ್ರಸ್ತಾಪಿಸಿದ್ದಾರೆ ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ. ಕಳೆದ ವರ್ಷದ ಆಗಸ್ಟ್‌ನಿಂದ ಗೋವಾದ ನಿವಾಸಿಯಾಗಿರುವ ಚೌಧರಿ ಅವರು ಯಾವುದೇ ಕ್ರಿಮಿನಲ್‌ ಹಿನ್ನೆಲೆ ಹೊಂದಿಲ್ಲ. ಅವರು ಗೌರವಾನ್ವಿತ ಕುಟುಂಬಕ್ಕೆ ಸೇರಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

“ವಾಸ್ತವಿಕ ವಿಚಾರಗಳು ಮತ್ತು ಸನ್ನಿವೇಶಗಳ ಹಿನ್ನೆಲೆಯಲ್ಲಿ ಬಂಧನದ ಆತಂಕಕ್ಕೆ ಕಾರಣಗಳು ಸಮರ್ಥಿಸಲ್ಪಟ್ಟಿವೆ. ನವದೆಹಲಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅಲ್ಲಿರುವ ಸಂಬಂಧಿತ ನ್ಯಾಯಾಲಯದಲ್ಲಿ ಸಿಆರ್‌ಪಿಸಿಯ ಸೆಕ್ಷನ್ 438ರ ಅಡಿಯಲ್ಲಿ ನಿರೀಕ್ಷಿತ ಜಾಮೀನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಹೀಗಾಗಿ ಅರ್ಜಿದಾರರು ಟ್ರಾನ್ಸಿಟ್‌ ಜಾಮೀನಿಗೆ ಅರ್ಹರಾಗಿದ್ದು, ಜಾಮೀನು ಪಡೆಯಲು ಸಂಬಂಧಿತ ನ್ಯಾಯಾಲಯವನ್ನು ಸಂಪರ್ಕಿಸಬಹುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಒಂದೊಮ್ಮೆ ದೆಹಲಿ ಪೊಲೀಸರು ಚೌಧರಿ ಅವರನ್ನು ಬಂಧಿಸಿದರೆ ರೂ. 50,000 ಬಾಂಡ್‌ ಮತ್ತು ಒಬ್ಬರ ಭದ್ರತೆ ಒದಗಿಸಿ ಜಾಮೀನು ಪಡೆಯಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಬಾಂಬೆ ಹೈಕೋರ್ಟ್‌ನ ಪ್ರಧಾನ ಪೀಠವು ಈಚೆಗೆ ನಿಕಿತಾ ಜೇಕಬ್‌ ಅವರಿಗೆ ಮೂರು ವಾರಗಳ ಟ್ರಾನ್ಸಿಟ್‌ ಜಾಮೀನು ಮಂಜೂರು ಮಾಡಿತ್ತು. ಆ ಬಳಿಕ ಅವರು ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಸೆಷನ್ಸ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಶಂತನು ಮುಲುಕ್‌ಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠವು 10 ದಿನಗಳ ಟ್ರಾನ್ಸಿಟ್‌ ಜಾಮೀನು ನೀಡಿತ್ತು. ಅದನ್ನು ಮಾರ್ಚ್‌ 9ರ ವರೆಗೆ ವಿಸ್ತರಿಸಲಾಗಿದೆ ಎಂದು ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಸೆಷನ್ಸ್‌ ನ್ಯಾಯಾಲಯ ಹೇಳಿತ್ತು. ಜಾಮೀನು ನಿಯಮ ಉಲ್ಲಂಘಿಸುವ ಯಾವುದೇ ಸ್ಪಷ್ಟ ಕಾರಣಗಳು ಇಲ್ಲ ಎಂದು 22 ವರ್ಷದ ಬೆಂಗಳೂರಿನ ದಿಶಾ ರವಿ ಅವರಿಗೆ ದೆಹಲಿ ಸೆಷನ್ಸ್‌ ನ್ಯಾಯಾಲಯವು ಜಾಮೀನು ನೀಡಿತ್ತು.

Related Stories

No stories found.
Kannada Bar & Bench
kannada.barandbench.com