ಕಳೆದ ಶುಕ್ರವಾರವಷ್ಟೇ ನಾಗರಿಕ ಸೇವೆಯಿಂದ ಸ್ವಯಂ ನಿವೃತ್ತರಾದ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವ ಕುರಿತಾದ ಕಡತ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಅನೂಪ್ ಬರನ್ವಾಲ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].
ಭಾರತೀಯ ಚುನಾವಣಾ ಆಯೋಗದ (ಇಸಿಐ) ನೇಮಕಾತಿಗಳಿಗೆ ತಡೆ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ಬಾಕಿ ಇರುವಾಗಲೇ ಹೇಗೆ ನೇಮಕಾತಿ ಮಾಡಲಾಯಿತು ಎಂಬುದನ್ನು ತಿಳಿಯಬೇಕಿದೆ ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಹೇಳಿತು.
ನ್ಯಾಯಮೂರ್ತಿ ಜೋಸೆಫ್ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರನ್ನು ಉದ್ದೇಶಿಸಿ “….ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಕಡಗಳನ್ನು ನೀವು ಪ್ರಸ್ತುತಪಡಿಸಬೇಕೆಂದು ಬಯಸುತ್ತೇವೆ. ಇದರಿಂದ ನಿಮ್ಮ ತಪ್ಪಿಲ್ಲ ಎಂದು ನಮ್ಮ ಅರಿವಿಗೆ ಬರುತ್ತದೆ. ವಿಆರ್‌ಎಸ್ ವ್ಯವಸ್ಥೆ ಆಧರಿಸಿ ಅವರನ್ನು ನೇಮಿಸಲಾಗಿದೆಯೇ? ನೇಮಕಾತಿ ಪ್ರಕರಣಗಳನ್ನು ಸಂವಿಧಾನ ಪೀಠ ಪರಿಗಣಿಸುತ್ತಿದ್ದು ನೇಮಕಾತಿಗಳಿಗೆ ಮಧ್ಯಂತರ ತಡೆ ನೀಡುವಂತೆ ಪಕ್ಷಕಾರರು ಅರ್ಜಿ ಸಲ್ಲಿಸಿದ್ದಾರೆ. ಹೀಗಿರುವಾಗ, ಎಲ್ಲವೂ ಸರಿಯಾಗಿದೆ ಎನ್ನುವುದಾದರೆ ಇದು (ಆಯುಕ್ತರ ನೇಮಕಾತಿ) ಹೇಗೆ ಸಾಧ್ಯವಾಯಿತು? ಇದು (ಕಡತಗಳನ್ನು ಪ್ರಸ್ತುತ ಪಡಿಸುವುದು) ನಿಮಗೆ ಪ್ರತಿಕೂಲವೇನೂ ಅಲ್ಲ, ಅದರೆ ನಾವು ನಿಮ್ಮನ್ನು ಕೇಳುತ್ತಿದ್ದೇವೆ ಅಷ್ಟೇ” ಎಂದರು.
ಆಗ ನ್ಯಾ. ರಾಯ್ ಲಘುದಾಟಿಯಲ್ಲಿ “ಇದು ಅತಿಜಾಣ್ಮೆಯಲ್ಲದೆ ಹೋದರೂ ನ್ಯಾಯಾಲಯದ ಮನಸ್ಸನ್ನು ಅತಿಯಾಗಿ ಅರ್ಥೈಸಿಕೊಂಡ ಪ್ರಕರಣವಾಗಬಾರದು” ಎಂದರು.
ಬಳಿಕ ನಾಳೆ ಕಡತ ತರುವಂತೆ ಅಟಾರ್ನಿ ಜನರಲ್ ಅವರಿಗೆ ಸೂಚಿಸಿದ ಪೀಠ ಹಾಗೆ ಮಾಡುವುದರಿಂದ ಯಾವುದೇ ಅಪಾಯ ಇಲ್ಲ ಎಂದು ಅಭಯ ನೀಡಿತು.
ಕಳೆದ ಶುಕ್ರವಾರ ಸ್ವಯಂ ನಿವೃತ್ತಿ ಪಡೆದ ಗೋಯೆಲ್ ಅವರನ್ನು ಮರುದಿನವೇ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಮೊನ್ನೆ (ಸೋಮವಾರ) ಅವರು ಅಧಿಕಾರ ವಹಿಸಿಕೊಂಡಿದ್ದರು.
ಸಂವಿಧಾನದ 342 (2) ನೇ ವಿಧಿಯನ್ನು ಉಲ್ಲಂಘಿಸಿ ನೇಮಕಾತಿ ಮಾಡುವ ಅಧಿಕಾರ ಕಾರ್ಯಾಂಗಕ್ಕೆ ಇದೆ ಎಂಬುದನ್ನು ಆಧರಿಸಿ ಭಾರತ ಚುನಾವಣಾ ಆಯೋಗಕ್ಕೆ (ಇಸಿಐ) ಸದಸ್ಯರನ್ನು ನೇಮಿಸುವ ಈಗಿನ ವ್ಯವಸ್ಥೆಯನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ಇಂದು ಕೂಡ ಮುಂದುವರೆಯಿತು.
ನಿನ್ನೆಯ ವಿಚಾರಣೆ ವೇಳೆ ನ್ಯಾಯಾಲಯ “ಮುಖ್ಯ ಚುನಾವಣಾ ಆಯುಕ್ತರು ಅಧಿಕಾರದಲ್ಲಿ ಉಳಿಯಬೇಕಾದರೆ ಅವರು ತಮ್ಮ ಆಣತಿಯಂತೆ ನಡೆದುಕೊಳ್ಳಬೇಕೆಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಒತ್ತಾಯಿಸುತ್ತವೆ, ಇದರಿಂದಾಗಿ ಚುನಾವಣಾ ಆಯೋಗದ ಸ್ವಾತಂತ್ರ್ಯದೊಂದಿಗೆ ರಾಜಿಯಾದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟಿತ್ತು.
ಮುಖ್ಯ ಚುನಾವಣಾ ಆಯುಕ್ತರ ಮೇಲೆ ಅಗಾಧವಾದ ಜವಾಬ್ದಾರಿ ಇದೆ. ಹೀಗಾಗಿ ಅವರು ಮಣಿಸಲಾಗದಂತಹ ವ್ಯಕ್ತಿಯಾಗಬೇಕು ಎಂದು ಚುನಾವಣಾ ಸುಧಾರಣೆ ಜಾರಿಗೆ ತಂದ ಮತ್ತು ಚುನಾವಣಾ ಆಯೋಗವನ್ನು ಬಲಶಾಲಿ ಸಂಸ್ಥೆಯನ್ನಾಗಿ ಮಾಡಿದ ನಿವೃತ್ತ ಸಿಇಸಿ ಟಿ ಎನ್ ಶೇಷನ್ ಅವರ ಹೆಸರನ್ನು ಪ್ರಸ್ತಾಪಿಸುತ್ತಾ ಅದು ಹೇಳಿತ್ತು. ನೇಮಕಾತಿ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಇದ್ದರೆ ವ್ಯವಸ್ಥೆಯಲ್ಲಿ ಗೊಂದಲ ಕಡಿಮೆಯಾಗಲಿದೆ ಎಂದು ಕೂಡ ಅದು ಸಲಹೆ ನೀಡಿತ್ತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಬಲ್ಬೀರ್ ಸಿಂಗ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ನ್ಯಾಯವಾದಿ ಗೋಪಾಲ್ ಶಂಕರನಾರಾಯಣನ್ ಇಂದು ವಾದ ಮಂಡಿಸಿದರು. ನಾಳೆಯೂ (ಗುರುವಾರ) ವಿಚಾರಣೆ ಮುಂದುವರೆಯುವ ಸಾಧ್ಯತೆಯಿದ್ದು ತೀರ್ಪನ್ನು ಕಾಯ್ದಿರಿಸುವ ನಿರೀಕ್ಷೆ ಇದೆ.