ರಾಹುಲ್‌ ಗಾಂಧಿ ಪೌರತ್ವ ವಿಚಾರ: ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಸುಬ್ರಮಣಿಯನ್‌ ಸ್ವಾಮಿ

ರಾಹುಲ್‌ ಅವರು ಬ್ರಿಟನ್‌ನಲ್ಲಿ 2003ರಲ್ಲಿ ನೊಂದಾಯಿಸಿದ್ದ ಬ್ಯಾಕ್‌ಆಪ್ಸ್‌ ಲಿಮಿಟೆಡ್ ಹೆಸರಿನ ಕಂಪನಿಯ ನಿರ್ದೇಶಕರು ಮತ್ತು ಕಾರ್ಯದರ್ಶಿಯಾಗಿದ್ದರು. ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಘೋಷಿಸಿದ್ದರು ಎನ್ನುವುದು ಸ್ವಾಮಿ ವಾದ.
Rahul Gandhi and Subramanian Swamy
Rahul Gandhi and Subramanian Swamy
Published on

ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಲು ಕೋರಿರುವ ತಮ್ಮ ಮನವಿಯನ್ನು ನಿರ್ಧರಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಕೋರಿ ಭಾರತೀಯ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಮುಂದಿನ ವಾರ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ವಕೀಲ ಸತ್ಯ ಸಬರ್ವಾಲ್ ಮೂಲಕ ಸುಬ್ರಮಣಿಯನ್‌ ಸ್ವಾಮಿ ಅವರ ಅರ್ಜಿ ಸಲ್ಲಿಕೆಯಾಗಿದೆ.

ರಾಹುಲ್‌ ಗಾಂಧಿ ಅವರು ಬ್ರಿಟನ್‌ನಲ್ಲಿ 2003 ರಲ್ಲಿ ನೊಂದಾಯಿಸಿರುವ ಬ್ಯಾಕ್‌ಆಪ್ಸ್‌ ಲಿಮಿಟೆಡ್ ಹೆಸರಿನ ಕಂಪನಿಯ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಸ್ವಾಮಿ 2019 ರಲ್ಲಿ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಅಕ್ಟೋಬರ್ 10, 2005 ಮತ್ತು ಅಕ್ಟೋಬರ್ 31, 2006 ರಂದು ಸಲ್ಲಿಸಿದ ಕಂಪನಿಯ ವಾರ್ಷಿಕ ರಿಟರ್ನ್ಸ್‌ನಲ್ಲಿ ಗಾಂಧಿಯವರು ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಘೋಷಿಸಿದ್ದರು ಎಂದು ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಮುಂದುವರೆದು, ಫೆಬ್ರವರಿ 17, 2009 ರಂದು ದಾಖಲಿಸಿರುವ ಕಂಪನಿಯ ವಿಸರ್ಜನೆಯ ಅರ್ಜಿಯಲ್ಲಿ ರಾಹುಲ್‌ ಗಾಂಧಿಯವರ ರಾಷ್ಟ್ರೀಯತೆಯನ್ನು ಮತ್ತೆ ಬ್ರಿಟಿಷ್ ಎಂದೇ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ. ಇದು ಭಾರತದ ಸಂವಿಧಾನ ಮತ್ತು ಭಾರತೀಯ ಪೌರತ್ವ ಕಾಯಿದೆ, 1955ರ ಅನುಚ್ಛೇದ 9 ಅನ್ನು ಉಲ್ಲಂಘಿಸುತ್ತದೆ ಎನ್ನುವುದು ಸ್ವಾಮಿ ಅವರ ವಾದ.

ಸ್ವಾಮಿ ಅವರ ಪತ್ರದ ಹಿನ್ನೆಲೆಯಲ್ಲಿ ಗೃಹ ಇಲಾಖೆಯು ಏಪ್ರಿಲ್ 29, 2019 ರಂದು ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದು ಹದಿನೈದು ದಿನಗಳೊಳಗೆ ಈ ವಿಷಯದಲ್ಲಿ "ವಾಸ್ತವ ಸ್ಥಿತಿಯನ್ನು ತಿಳಿಸುವಂತೆ" ಕೇಳಿಕೊಂಡಿತ್ತು.

ಇದೀಗ, ಸುಬ್ರಮಣಿಯನ್‌ ಸ್ವಾಮಿ ಅವರು ತಾವು ಗೃಹ ಇಲಾಖೆಗೆ ಪತ್ರ ಬರೆದು ಐದು ವರ್ಷಗಳಿಗಿಂತ ಹೆಚ್ಚು ಸಮಯವೇ ಸಂದಿದ್ದರೂ ಈ ಕುರಿತು ಯಾವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನುವ ಬಗ್ಗೆ ಗೃಹ ಇಲಾಖೆಯಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ ಎಂದು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Kannada Bar & Bench
kannada.barandbench.com