ಅವಮಾನಿಸುವ ಉದ್ದೇಶವಿರದೆ ವಾಗ್ವಾದದಲ್ಲಿ ಹಠಾತ್ ಜಾತಿ ಹೆಸರು ತಂದರೆ ಎಸ್‌ಸಿ/ಎಸ್‌ಟಿ ಕಾಯಿದೆ ಅನ್ವಯಿಸದು: ಹೈಕೋರ್ಟ್‌

ದುಷ್ಕರ್ಮಿಗಳು ಸಂತ್ರಸ್ತರನ್ನು ಅವಮಾನಿಸುವ ಉದ್ದೇಶದಿಂದ ಜಾತಿ ಹೆಸರು ಬಳಕೆ ಮಾಡಿದರೆ ಮಾತ್ರ ಎಸ್‌ಸಿ/ಎಸ್‌ಟಿ ಕಾಯಿದೆ ಅನ್ವಯಿಸುತ್ತದೆ ಎಂದು ನ್ಯಾಯಾಲಯವು ಒತ್ತಿ ಹೇಳಿದೆ.
Orissa High Court
Orissa High Court

ವಾಗ್ವಾದದ ವೇಳೆ ಜಾತಿಯ ಹೆಸರಿನಲ್ಲಿ ಅವಮಾನಿಸುವ ಯಾವುದೇ ಉದ್ದೇಶ ಇಲ್ಲದೇ ಹಠಾತ್‌ ಆಗಿ ಜಾತಿಯ ಹೆಸರಿನ ಬಳಕೆ ಮಾಡಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ನಿಯಂತ್ರಣ) ಕಾಯಿದೆ ಅನ್ವಯಿಸುವುದಿಲ್ಲ ಎಂದು ಈಚೆಗೆ ಒಡಿಶಾ ಹೈಕೋರ್ಟ್‌ ಹೇಳಿದೆ [ಅಜಯ್‌ ಪಟ್ನಾಯಕ್‌ ಅಲಿಯಾಸ್‌ ಅಜಯ್‌ ಕುಮಾರ್‌ ಮತ್ತು ಇತರರು ವರ್ಸಸ್‌ ಒಡಿಶಾ ರಾಜ್ಯ ಮತ್ತು ಇತರರು].

ದುಷ್ಕರ್ಮಿಗಳು ಸಂತ್ರಸ್ತರನ್ನು ಅವಮಾನಿಸುವ ಉದ್ದೇಶದಿಂದ ಜಾತಿ ಹೆಸರು ಬಳಕೆ ಮಾಡಿದರೆ ಮಾತ್ರ ಎಸ್‌ಸಿ/ಎಸ್‌ಟಿ ಕಾಯಿದೆ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ಆರ್‌ ಕೆ ಪಟ್ನಾಯಕ್‌ ಅವರ ನೇತೃತ್ವದ ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ ಹೇಳಿದೆ.

“ಯಾವುದೇ ವ್ಯಕ್ತಿಯನ್ನು ಜಾತಿಯ ಹೆಸರಿನಿಂದ ಅವಮಾನಿಸಿದರೆ ಅಥವಾ ವಾಗ್ವಾದದ ಸಂದರ್ಭದಲ್ಲಿ ಜಾತಿಯ ಹೆಸರು ಬಳಕೆ ಮಾಡಿದರೆ ನ್ಯಾಯಾಲಯದ ದೃಷ್ಟಿಯಲ್ಲಿ ಅದು ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಅಪರಾಧವನ್ನಾಗಿ ಪರಿಗಣಿಸಲು ಸಾಕಾಗದು. ದುಷ್ಕರ್ಮಿಗಳು ಸಂತ್ರಸ್ತರನ್ನು ಅವರು ಎಸ್‌ಸಿ, ಎಸ್‌ಟಿ ಜಾತಿಗೆ ಸೇರಿದವರು ಎನ್ನುವ ಕಾರಣದಿಂದ ಅವಮಾನಿಸುವ ಉದ್ದೇಶದಿಂದಲೇ ಜಾತಿಯ ಹೆಸರು ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದರೆ ಮಾತ್ರ ಎಸ್‌ಸಿ/ಎಸ್‌ಟಿ ಕಾಯಿದೆ ಅನ್ವಯಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ 3ರ ಅಡಿ ಆರೋಪಗಳನ್ನು ವಜಾ ಮಾಡುವಂತೆ ಕೋರಿ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮಾನ್ಯ ಮಾಡಿತು. 2017ರಲ್ಲಿ ಅರ್ಜಿದಾರರು ಇತರರೊಂದಿಗೆ ವಾಗ್ವಾದ ನಡೆಸಿದ್ದರಿಂದ ಪ್ರಕರಣ ದಾಖಲಾಗಿತ್ತು.

Related Stories

No stories found.
Kannada Bar & Bench
kannada.barandbench.com