

“ರೈತರು ಇಲ್ಲದಿದ್ದರೆ ಸಕ್ಕರೆ ಕಾರ್ಖಾನೆಗಳೇ ಇರುವುದಿಲ್ಲ. ಎಥನಾಲ್, ವಿದ್ಯುತ್ ಉತ್ಪಾದನೆ ಎಲ್ಲದರಲ್ಲೂ ಹಣ ಮಾಡಲು ಬಯಸುವ ಸಕ್ಕರೆ ಕಾರ್ಖಾನೆಗಳು ಲಾಭವನ್ನು ಮಾತ್ರ ರೈತರ ಜೊತೆ ಹಂಚಿಕೊಳ್ಳಲು ಒಪ್ಪುವುದಿಲ್ಲ” ಎಂದು ಕಟುವಾಗಿ ನುಡಿದಿರುವ ಕರ್ನಾಟಕ ಹೈಕೋರ್ಟ್, ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಪಡಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಲು ಮಂಗಳವಾರ ಸ್ಪಷ್ಟವಾಗಿ ನಿರಾಕರಿಸಿದೆ.
ಪ್ರಸಕ್ತ 2025-26ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ದರಕ್ಕಿಂತಲೂ (ಎಫ್‌ಆರ್‌ಪಿ) ಹೆಚ್ಚಿನ ದರ ನಿಗದಿಪಡಿಸಿ ರಾಜ್ಯ ಸರ್ಕಾರವು ನವೆಂಬರ್ 8ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿ ಸೌತ್ ಇಂಡಿಯನ್ ಷುಗರ್ ಮಿಲ್ಸ್ ಅಸೋಸಿಯೇಶನ್ಸ್, ಬಿಜೆಪಿ ನಾಯಕ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಷುಗರ್ಸ್ ಲಿಮಿಟೆಡ್, ರೇಣುಕಾ ಷುಗರ್ಸ್, ಜೆಮ್ ಷುಗರ್ಸ್, ಕೆಪಿಆರ್ ಷುಗರ್ಸ್ ಅಂಡ್ ಅಪರಾಲ್ಸ್ ಲಿಮಿಟೆಡ್ ಮತ್ತು ಗೋದಾವರಿ ಬಯೋ ರಿಫೈನರೀಸ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ರೈತರು ಇಲ್ಲದಿದ್ದರೆ ಸಕ್ಕರೆ ಕಾರ್ಖಾನೆಗಳು ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರೈತರಿಗೆ ಏನನ್ನೂ ನೀಡಲು ಸಕ್ಕರೆ ಕಾರ್ಖಾನೆಗಳಿಗೆ ಇಷ್ಟವಿಲ್ಲ. ಸಕ್ಕರೆ, ಎಥನಾಲ್ ಉತ್ಪಾದನೆಯಿಂದ ಬರುವ ಹಣವನ್ನು ಪರಿಗಣಿಸಬಾರದು ಎಂದು ಸಕ್ಕರೆ ಕಾರ್ಖಾನೆಗಳು ಹೇಳುತ್ತವೆ. ಎಥನಾಲ್, ವಿದ್ಯುತ್ ಉತ್ಪಾದನೆಗೆ ಅದನ್ನು ವರ್ಗಾಯಿಸಿ, ಎಲ್ಲದರಲ್ಲೂ ಹಣ ಮಾಡುತ್ತೀರಿ. ಆದರೆ, ಅದರ ಲಾಭವನ್ನು ಹಂಚಿಕೊಳ್ಳಲು ನಿಮಗೆ ಇಷ್ಟವಿಲ್ಲ” ಎಂದು ಕಿಡಿಕಾರಿತು.
ಅಲ್ಲದೇ, “ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿಲಾಗಿದೆ. ಪಕ್ಷಕಾರರ ವಾದ ಆಲಿಸದೇ ಮಧ್ಯಂತರ ಆದೇಶ ಮಾಡಬಾರದು ಎಂಬುದು ನ್ಯಾಯಾಲಯ ಅಭಿಪ್ರಾಯವಾಗಿದೆ” ಎಂದು ಸ್ಪಷ್ಟವಾಗಿ ಆದೇಶಿಸಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಎಚ್ ಎನ್ ಶಶಿಧರ್ ಅವರು “ರೈತರ ಒತ್ತಡಕ್ಕೆ ಮಣಿದು ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿಗಿಂತ ಹೆಚ್ಚಿನ ದರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇದು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್‌ಆರ್‌ಪಿಗಿಂತ ಹೆಚ್ಚಿದೆ. ಸಕ್ಕರೆ ಕಾರ್ಖಾನೆಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿವೆ. ಕಾರ್ಖಾನೆಗಳು ಎಫ್‌ಆರ್‌ಪಿಯನ್ನೇ ಸರಿಯಾದ ಸಮಯಕ್ಕೆ ಪಾವತಿಸಲಾಗುತ್ತಿಲ್ಲ. ಯಾವುದೇ ಕಾಯಿದೆಯ ಭಾಗವಾಗಿ ಮುಖ್ಯಮಂತ್ರಿ ಘೋಷಣೆ ಮಾಡಿಲ್ಲ. ಕಬ್ಬು ನುರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರ ನಿಗದಿಪಡಿಸಿರುವ ಎಫ್‌ಆರ್‌ಪಿ ಪಾವತಿಸಲು ಅವಕಾಶ ಮಾಡಿಕೊಡಬೇಕು” ಎಂದರು.
ಮುಂದುವರಿದು, “ಕೇಂದ್ರ ಸರ್ಕಾರವು ಎಫ್‌ಆರ್‌ಪಿ ನಿಗದಿಪಡಿಸುವಾಗ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ನೇಮಿಸಿತ್ತು. ಎಫ್‌ಆರ್‌ಪಿ ಮತ್ತು ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ನಡುವಿನ ವ್ಯತ್ಯಾಸದ ಹಣವನ್ನು ರಾಜ್ಯ ಸರ್ಕಾರವೇ ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ಪಾವತಿಸಿಬೇಕು. ಆ ಮೂಲಕ ಕಾರ್ಖಾನೆಗಳ ಮೇಲೆ ಆಗುವ ಹೊರೆಯನ್ನು ತಪ್ಪಿಸಬೇಕು ಎಂದು ಸಿಎಸಿಪಿ ಹೇಳಿದೆ. ಈಗ ರಾಜ್ಯ ಸರ್ಕಾರವು ನಿಗದಿಪಡಿಸಿರುವ ಹಣವನ್ನು ಪಾವತಿಸಬೇಕು. ಇಲ್ಲವಾದಲ್ಲಿ ಇರುವ ದಾಸ್ತಾನನ್ನು ಜಫ್ತಿ ಮಾಡಲಾಗುವುದು ಎಂದು ಕಾರ್ಖಾನೆಗಳ ಮೇಲೆ ಒತ್ತಡ ಹೇರಲಿದೆ. ಎಲ್ಲವನ್ನೂ ಸೇರಿ ಪ್ರತಿ ಟನ್‌ಗೆ 4,300 ರೂಪಾಯಿ ಆಗುತ್ತದೆ. ಈ ಹಣ ಪಾವತಿಸುವುದು ಅತ್ಯಂತ ಕಷ್ಟ. ಎಫ್‌ಆರ್‌ಪಿಯೇ 3,550 ಆಗಿದೆ. ಸರ್ಕಾರದ ಅಧಿಸೂಚನೆಯಿಂದ ಪ್ರತಿ ಟನ್‌ಗೆ 800-900 ರೂಪಾಯಿ ಹೆಚ್ಚಳವಾಗಲಿದೆ. ನಾಳೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾಗಬಹುದು. ಹೀಗಾಗಿ, ಬಲವಂತದ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಬೇಕು” ಎಂದು ಕೋರಿದರು.
ಆಗ ಪೀಠವು “ತಡೆ ನೀಡುವ ಇಚ್ಛೆ ಹೊಂದಿಲ್ಲ. ಪಕ್ಷಕಾರರ ವಾದ ಆಲಿಸಲಾಗುವುದು. ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ. ರೈತರಿಗೆ 200 ರೂಪಾಯಿ ಅತ್ಯಂತ ಮುಖ್ಯ. ಕಬ್ಬು ಖರೀದಿಸುವ ಇಚ್ಛೆ ಇದ್ದರೆ ಹಣ ನೀಡಿ, ಇಲ್ಲವಾದರೆ ಖರೀದಿಸಬೇಡಿ. ಏನು ಪಾವತಿಸಬೇಕು ಅದನ್ನು ರೈತರಿಗೆ ಪಾವತಿಸಿ. ಆನಂತರ ಅದನ್ನು ನೀವು ಹೊಂದಿಸಬಹುದು. ಸಕ್ಕರೆ ಕಾರ್ಖಾನೆಗಳಿಂದ ರೈತರು ಹಣ ವಸೂಲಿ ಮಾಡುವುದೂ ಅಸಾಧ್ಯ” ಎಂದು ಕಟುವಾಗಿ ನುಡಿಯಿತು.
ಪ್ರಕರಣದ ಹಿನ್ನೆಲೆ: ಕೇಂದ್ರ ಸರ್ಕಾರವು 2025-26ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ ಗರಿಷ್ಠ 3,550 ರೂಪಾಯಿ ನಿಗದಿಪಡಿಸಿದೆ. ಆದರೆ, ರಾಜ್ಯ ಸರ್ಕಾರವು ಯಾವುದೇ ಕಾನೂನಿನ ಬೆಂಬಲವಿಲ್ಲದೇ ಎಫ್‌ಆರ್‌ಪಿ ಮೀರಿ ಹೆಚ್ಚುವರಿಯಾಗಿ ಕಬ್ಬಿಗೆ ದರ ನಿಗದಿಪಡಿಸಿದೆ. ಹೀಗಾಗಿ, ರಾಜ್ಯ ಸರ್ಕಾರವು ನವೆಂಬರ್ 8ರಂದು ಕಬ್ಬಿನ ಬೆಲೆ ಹೆಚ್ಚಿಸಿ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಎಫ್‌ಆರ್‌ಪಿ ಮೀರಿ ಕಬ್ಬಿಗೆ ಹೆಚ್ಚುವರಿ ದರ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಪ್ರತಿ ಟನ್ ಕಬ್ಬಿನ ದರವು ಶೇ.9.5, 10.25 ಮತ್ತು 11.25 ಇಳುವರಿಗೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ.