ಉತ್ತರ ಪ್ರದೇಶದ ವಾರಾಣಸಿ ನಗರದ ಹೃದಯ ಭಾಗದಲ್ಲಿರುವ ಗ್ಯಾನವಪಿ ಮಸೀದಿಗೆ ಸೇರಿದ್ದು ಎಂದು ಮುಸ್ಲಿಂ ಸಮುದಾಯವರು ಹೇಳುತ್ತಿರುವ ಪ್ರಾಚೀನ ದೇವಾಲಯದಲ್ಲಿ ಸಂಪ್ರದಾಯಬದ್ಧವಾಗಿ ನಡೆಯುತ್ತಿದ್ದ ಧಾರ್ಮಿಕ ಚಟುವಟಿಗಳನ್ನು ಪುನಾರಂಭಿಸುವಂತೆ ಕೋರಿ ಶೃಂಗಾರ ಗೌರಿ ದೇವತೆಯ ಹೆಸರಿನಲ್ಲಿ ವಾರಾಣಸಿಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ದೇವತೆಯ ವಾದಮಿತ್ರರು (ನೆಕ್ಸ್ಟ್ ಫ್ರೆಂಡ್ಸ್) ಎನ್ನಲಾದ ಹತ್ತು ಮಂದಿಯ ಮೂಲಕ ದಾವೆ ಹೂಡಲಾಗಿದೆ.
ಪ್ರತಿವಾದಿಗಳ ಪರವಾಗಿ ಅಂಜುಮಾನ್ ಇಂತಜಾಮಿಯಾ ಮಸೀದಿಯ ನಿರ್ವಹಣಾ ಸಮಿತಿ ಗುರುವಾರ ವಿಚಾರಣೆಗೆ ಹಾಜರಾಗಿದ್ದು, ಪ್ರತ್ಯುತ್ತರ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದೆ.
ಮೊಘಲ್ ಅರಸ ಔರಂಗಜೇಬ್ ಆಡಳಿತದ ವೇಳೆ 1669ರಲ್ಲಿ ಆತನ ಸೂಚನೆಯ ಮೇರೆಗೆ ಪ್ರಾಚೀನ ದೇವಾಲಯದಲ್ಲಿರುವ ಜ್ಯೋತಿರ್ಲಿಂಗವನ್ನು ಭಂಜಿಸಲಾಗಿದೆ. ಅದಾಗ್ಯೂ ಶೃಂಗಾರ ಗೌರಿ ಮತ್ತು ಗಣೇಶನ ಮೂರ್ತಿಗಳು ಅಲ್ಲೇ ಇವೆ. ಪ್ರಾಚೀನ ಆದಿ ವಿಶೇಶ್ವರ ದೇವಾಲಯದ ಒಂದು ಭಾಗವನ್ನು ಧ್ವಂಸಗೊಳಿಸಿ ಗ್ಯಾನವಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ವಕೀಲರಾದ ಹರಿಶಂಕರ್ ಜೈನ್ ಮತ್ತು ಪಂಕಜ್‌ಕುಮಾರ್ ವರ್ಮಾ ಮೂಲಕ ಸಲ್ಲಿಸಲಾದ ಮನವಿಯಲ್ಲಿ ವಿವರಿಸಲಾಗಿದೆ.
“ಆಕ್ಷೇಪಾರ್ಹವಾದ ಸ್ವತ್ತಿನಲ್ಲಿ ಗ್ಯಾನವಪಿ ಹಿಂದೆ ಈಶಾನ್ಯ ಭಾಗದ ಮೂಲೆಯಲ್ಲಿ ಶೃಂಗಾರ ಗೌರಿ ಮೂರ್ತಿ ಈಗಲೂ ಇದೆ. ಆಗ ಭಕ್ತರು ದಿನನಿತ್ಯವೂ ಪೂಜೆ ಸಲ್ಲಿಸುವ ಮೂಲಕ ಆರಾಧನೆ ನಡೆಸುತ್ತಿದ್ದರು. ಆದರೆ, 1990ರ ಅಯೋಧ್ಯಾ ಚಳವಳಿಯ ಸಂದರ್ಭದಲ್ಲಿ ಮುಸ್ಲಿಮರನ್ನು ಓಲೈಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ದಿನನಿತ್ಯ ಪೂಜೆ ನಡೆಸುವುದಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಬಂಧಗಳನ್ನು ವಿಧಿಸಿತ್ತು. 1993ರಲ್ಲಿ ಶೃಂಗಾರ ಗೌರಿ ಮತ್ತು ಇತರೆ ದೇವರುಗಳನ್ನು ಪೂಜಿಸುವುದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಕಠಿಣವಾದ ನಿರ್ಬಂಧಗಳನ್ನು ರಾಜ್ಯ ಸರ್ಕಾರ ವಿಧಿಸಿತ್ತು” ಎಂದು ಫಿರ್ಯಾದುದಾರರು ಹೇಳಿದ್ದಾರೆ.
“ಭಾರತದ ಸಂವಿಧಾನದ 25ನೇ ವಿಧಿಯ ಅನ್ವಯ ಖಾತರಿಪಡಿಸಲಾಗಿರುವ ಮೂಲಭೂತ ಹಕ್ಕುಗಳ ಪ್ರಕಾರ ಇಡೀ ಪ್ರದೇಶದ ಸುಮಾರು ಹತ್ತು ಮೈಲಿ ವ್ಯಾಪ್ತಿಯಲ್ಲಿ ಶಿವ ಹಾಗೂ ಇತರೆ ದೇವರುಗಳಿಗೆ ಪೂಜೆ, ದರ್ಶನ, ಆರತಿ ಮಾಡಲು ಫಿರ್ಯಾದುದಾರರು ಮತ್ತು ಭಕ್ತರು ಹಕ್ಕುದಾರರಾಗಿದ್ದಾರೆ. ಇದಕ್ಕೆ ಅಡ್ಡಿಪಡಿಸುವ ಯಾವುದೇ ಹಕ್ಕನ್ನು ಬೇರೆ ಯಾರೂ ಹೊಂದಿಲ್ಲ” ಎಂದು ವಾದಿಸಲಾಗಿದೆ.
ಸದರಿ ಸ್ಥಳವು ಮುಸ್ಲಿಮರಿಗೆ ಸೇರಿದ್ದಲ್ಲ. ಅಲ್ಲದೇ 1950ರ ಜನವರಿ 26ಕ್ಕೂ ಮುನ್ನ ಉಂಟು ಮಾಡಲಾದ ಅಡೆತಡೆಗಳು ಸಂವಿಧಾನದ 13(1)ನೇ ವಿಧಿಯ ಅನ್ವಯ ಅನೂರ್ಜಿತ ಎಂದು ಹೇಳಲಾಗಿದೆ. “ಪೂಜಾ ವಸ್ತುಗಳು ಇಲ್ಲದೇ ಮೂರ್ತಿ ಪೂಜೆ ಮಾಡುವವರು ಪೂಜೆಯನ್ನು ಪೂರ್ಣಗೊಳಿಸಲಾಗದು. ಇದರಿಂದ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯಲಾಗದು. ಪೂಜೆ ಮಾಡುವುದಕ್ಕೆ ಯಾವುದೇ ತೆರನಾದ ಸಮಸ್ಯೆ ಉಂಟು ಮಾಡುವುದು ಸಂವಿಧಾನದ 25ನೇ ವಿಧಿ ನೀಡಿರುವ ಧಾರ್ಮಿಕ ಹಕ್ಕನ್ನು ನಿರಾಕರಿಸಿದಂತಾಗುತ್ತದೆ” ಎಂದು ಹೇಳಲಾಗಿದೆ.
ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿಗೆ ವಕ್ಫ್ ಕಾಯಿದೆ ಸೆಕ್ಷನ್ 89ರ ಅಡಿ ನೋಟಿಸ್ ಜಾರಿಗೊಳಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳು ಯಾವುದೇ ಪ್ರತ್ಯುತ್ತರ ನೋಟಿಸ್ ನೀಡಿಲ್ಲ. ಅಲ್ಲದೇ ನೋಟಿಸ್‌ಗೆ ಸಂಬಂಧಿಸಿದಂತೆ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಫಿರ್ಯಾದುದಾರರು ಹೇಳಿದ್ದಾರೆ.
ವಾರಾಣಸಿಯ ಹೃದಯ ಭಾಗದಲ್ಲಿರುವ ಅವಿಮುಕ್ತೇಶ್ವರ ಪ್ರದೇಶವು ಫಿರ್ಯಾದುದಾರರ ದೇವರಾದ ಆದಿ ವಿಶೇಶ್ವರನಿಗೆ ಸೇರಿದ್ದು ಎಂದು ಘೋಷಿಸಬೇಕು.
ಸದರಿ ಪ್ರದೇಶದಲ್ಲಿ ಇರುವ ಹಾಲಿ ಕಟ್ಟಡ ಧ್ವಂಸಗೊಳಿಸಿ, ಆ ಸಂರಚನೆಯನ್ನು ತೆರವುಗೊಳಿಸಿ, ಹೊಸ ದೇವಾಲಯ ನಿರ್ಮಾಣ ಮಾಡುವುದಕ್ಕೆ ಪ್ರತಿವಾದಿಗಳಾಗಲಿ, ಅವರ ಅಣತಿಯಂತೆ ನಡೆದುಕೊಳ್ಳುವವರಾಗಲಿ ಯಾವುದೇ ರೀತಿಯಲ್ಲೂ ಮೂಗು ತೂರಿಸಬಾರದು, ತಗಾದೆ ತೆಗೆಯಬಾರದು ಅಥವಾ ಸಮಸ್ಯೆ ಉಂಟು ಮಾಡಬಾರದು ಎಂದು ಆದೇಶಿಸಬೇಕು.
ಸದರಿ ಪ್ರದೇಶದಲ್ಲಿ ಭಕ್ತರಿಗೆ ದೇವರ ದರ್ಶನ ಮತ್ತು ಪೂಜೆ ಕಾರ್ಯಕ್ರಮ ನಡೆಸುವುದನ್ನು ಪುನಾರಂಭಿಸಲು ಕಾಶಿ ವಿಶ್ವನಾಥ ದೇವಾಲಯದ ಟ್ರಸ್ಟಿಗಳ ಮಂಡಳಿ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಬೇಕು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಿರ್ದೇಶಿಸಬೇಕು.