ಇಮೇಲ್‌ ಮೂಲಕ ಸಮನ್ಸ್‌ ಜಾರಿ, ಇಲಾಖೆಗಳಿಗೆ ಮಾಹಿತಿ ಲಗತ್ತಿಸುವಿಕೆ: ಹೈಟೆಕ್‌ ಹಾದಿಯಲ್ಲಿ ಕರ್ನಾಟಕ ಹೈಕೋರ್ಟ್‌

ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ವಿಳಾಸವನ್ನು ದಾಖಲಿಸಿಕೊಂಡು ಇಲಾಖಾ ಪ್ರಕರಣಗಳ ಮಾಹಿತಿಯನ್ನು ಅವರಿಗೆ ಲಗತ್ತಿಸುವ ಮೂಲಕ ತತ್‌ಕ್ಷಣದಲ್ಲಿ ಪ್ರಕರಣಗಳ ಸ್ಥಿತಿಗತಿ ತಿಳಿಸುವ ಮಹತ್ವದ ಬದಲಾವಣೆಗೆ ನಾಂದಿ.
Karnataka High Court
Karnataka High Court

ಸರ್ಕಾರ ದಾವೆದಾರನಾಗಿರುವ ಪ್ರಕರಣಗಳಲ್ಲಿ ಕಾಲಮಿತಿಯಲ್ಲಿ ಪ್ರತಿಕ್ರಿಯೆ ಸಲ್ಲಿಸುವುದನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ನಾಗರಿಕ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಅಡಿಯ ನಿಯಮಗಳ ಬದಲಾವಣೆಗೆ ಕರ್ನಾಟಕ ಹೈಕೋರ್ಟ್‌ ಒಪ್ಪಿಗೆ ನೀಡಿದೆ.

ಪೂರ್ಣ ನ್ಯಾಯಾಲಯವು ನಿಯಮಗಳಿಗೆ ಹಸಿರು ನಿಶಾನೆ ತೋರಿದ ಬಳಿಕ ರಿಜಿಸ್ಟ್ರಾರ್‌ ಜನರಲ್‌ ಅವರು ಅದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಿದ್ದು, ಆನಂತರ ಸರ್ಕಾರವು ನಿಯಮಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸಲಿದೆ.

ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌, ಆರ್‌ ದೇವದಾಸ್‌, ಬಿ ಎಂ ಶ್ಯಾಮ್‌ ಪ್ರಸಾದ್‌, ಎಸ್‌ ಸುನಿಲ್‌ ದತ್‌ ಯಾದವ್‌, ಮೊಹಮ್ಮದ್‌ ನವಾಜ್‌, ನರೇಂದ್ರ ಪ್ರಸಾದ್‌, ಎಸ್‌ ಆರ್‌ ಕೃಷ್ಣ ಕುಮಾರ್‌, ಅಶೋಕ್‌ ಎಸ್‌. ಕಿಣಗಿ ಮತ್ತು ಸೂರಜ್‌ ಗೋವಿಂದರಾಜ್‌ ಅವರನ್ನು ಒಳಗೊಂಡ ತಾತ್ಕಾಲಿಕ ಕರಡು ಸಮಿತಿಯು ನಿಯಮಗಳನ್ನು ಪ್ರಸ್ತಾಪಿಸಿತ್ತು.

ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ವಿಳಾಸವನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿಕೊಂಡು ಆಯಾ ಇಲಾಖಾವಾರು ಪ್ರಕರಣಗಳ ಮಾಹಿತಿಯನ್ನು ಅವರಿಗೆ ಲಗತ್ತಿಸುವ (ಟ್ಯಾಗ್‌) ಮೂಲಕ ತತ್‌ಕ್ಷಣದಲ್ಲಿ ಪ್ರಕರಣಗಳ ಸ್ಥಿತಿಗತಿ ತಿಳಿಸುವ ಮಹತ್ವದ ಬದಲಾವಣೆಗೆ ನಾಂದಿ ಹಾಡಲಾಗಿದೆ.

ಸರ್ಕಾರವು ನ್ಯಾಯಾಲಯದ ಮುಂದಿರುವ ಅತಿ ದೊಡ್ಡ ದಾವೆದಾರನಾಗಿದ್ದು, ನ್ಯಾಯಾಲಯಗಳಿಂದ ಹರಿದು ಬರುವ ಮಾಹಿತಿಯಿಂದವಿವಿಧ ಇಲಾಖೆಗಳು ಹೊರೆಗೆ ಸಿಲುಕುತ್ತವೆ. ಇದನ್ನು ತಪ್ಪಿಸಿ ಈ ರೀತಿ ಸರ್ಕಾರಿ ಇಲಾಖೆಗಳ ಇ - ಜೋಡಣೆ ಮುಖೇನ ನ್ಯಾಯಾಲಯದ ಮಾಹಿತಿ ಸರಾಗವಾಗಿ ತಲುಪಿಸುವುದರಿಂದ ಇಲಾಖೆಗಳು ಪ್ರತಿಕ್ರಿಯಿಸಲು ಉಂಟಾಗುವ ವಿಳಂಬಕ್ಕೆ ತಡೆ ಬೀಳಲಿದೆ. ಸರ್ಕಾರದ ವಕೀಲರಿಂದ ಸಮಸ್ಯೆ ತಿಳಿದುಕೊಳ್ಳುವುದು ತಪ್ಪಲಿದ್ದು, ಇತರೆ ಇಲಾಖೆಗಳ ನಡುವಿನ ಸಂವಹನವು ತ್ವರಿತಗೊಳ್ಳಲಿದೆ.

ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಕ್ಕೆ ಒಳಪಡಿಸಿ, ಮಾಹಿತಿ ಲಗತ್ತಿಸುವ (ಟ್ಯಾಗಿಂಗ್)‌ ಕಲ್ಪನೆಯು ಹೈಕೋರ್ಟ್‌ನಿಂದ ಮೂಡಿಬಂದಿದ್ದು, ಕಾರ್ಯಾಂಗವು ಅದನ್ನು ಜಾರಿಗೊಳಿಸಲು ಒಪ್ಪಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಪ್ರಕರಣಗಳ ಸಂಬಂಧ ಜೋಡಣೆ ಮತ್ತು ಡಿಜಿಟಲ್‌ ಪ್ರಕರಣ ಡೈರಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನವನ್ನು ಜಾರಿಗೊಳಿಸಲು ಇ-ಆಡಳಿತದ ಪ್ರಧಾನ ಕಾರ್ಯದರ್ಶಿ ವಿ ಪೊನ್ನುರಾಜ್‌ ಅವರು ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಸರ್ಕಾರದ 650 ವಿವಿಧ ಇಲಾಖೆ/ಸಂಸ್ಥೆಗಳು ಹೈಕೋರ್ಟ್‌ ಜೊತೆ ನೋಂದಾಯಿಸಿಕೊಂಡಿವೆ.

ದಾವೆ ಹೂಡಿದವರು ಪಕ್ಷಕಾರರ ಇಮೇಲ್‌ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ. ಯಾವುದೇ ಪ್ರತಿಕ್ರಿಯೆಯನ್ನು ತ್ವರಿತವಾಗಿ ಮತ್ತು ವಿಳಂಬವಿಲ್ಲದೆ ತಲುಪಿಸಬಹುದಾಗಿದೆ. ಈ ಹಿಂದೆ, ನಿರ್ದಿಷ್ಟ ಇಲಾಖೆಯ ಪತ್ತೆ ಮತ್ತು ಅಧಿಕಾರಿಗೆ ಇಮೇಲ್‌ ಮೂಲಕ ಪ್ರತಿಕ್ರಿಯೆ ಕಳುಹಿಸಲು ಹರಸಾಹಸಪಡಬೇಕಿತ್ತು.

ಖಾಸಗಿ ಕೊರಿಯರ್‌ ಸಂಸ್ಥೆಯ ಮೂಲಕ ಹೈಕೋರ್ಟ್‌ ಸಮನ್ಸ್‌ ಜಾರಿ ಮಾಡಲಿದ್ದು, ಖಾಸಗಿ ಕೊರಿಯರ್‌ಗಳನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ಈಗಾಗಲೇ ಹೈಕೋರ್ಟ್‌ ಜಾರಿ ಮಾಡಿದೆ. ಇಮೇಲ್‌ ಮೂಲಕ ಸಮನ್ಸ್ ಜಾರಿ ಮಾಡುವ ಪ್ರಕ್ರಿಯೆಯನ್ನು ನ್ಯಾಯಾಲಯವು ಆರಂಭಿಸಿದ್ದು, ಇದು ವಿಳಂಬಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ.

Related Stories

No stories found.
Kannada Bar & Bench
kannada.barandbench.com