ಲೋಕಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರು ತಮ್ಮ ಹಿರಿಯ ಸಹೋದರ ಮತ್ತು ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಿದ್ದು, ಸನ್ ಟಿವಿ ನೆಟ್‌ವರ್ಕ್ ಮತ್ತು ಸಂಯೋಜಿತ ಕಂಪನಿಗಳಲ್ಲಿನ ಷೇರುಗಳ ಹಂಚಿಕೆ ಮತ್ತು ವರ್ಗಾವಣೆಯಲ್ಲಿ ದೊಡ್ಡ ಪ್ರಮಾಣದ ವಂಚನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಸನ್ ಟಿವಿಯ ನಿಯಂತ್ರಣವನ್ನು ತಮ್ಮ ಹಿಡಿತಕ್ಕೆ ಪಡೆಯುವ ಸಲುವಾಗಿ ಕಲಾನಿಧಿ ಮಾರನ್ ಮತ್ತು ಇತರ ಏಳು ಜನರು 2003 ರಿಂದ ಆರಂಭಗೊಂಡು ಅನೇಕ ವಂಚನೆಯ ವಹಿವಾಟುಗಳನ್ನು ನಡೆಸಿದ್ದಾರೆ ಎಂದು ನೋಟಿಸ್‌ನಲ್ಲಿ ದಯಾನಿಧಿ ಆರೋಪಿಸಿದೆ. ಷೇರುಗಳ ಅಕ್ರಮ ಹಂಚಿಕೆ, ಕಂಪನಿಯ ದಾಖಲೆಗಳ ತಿರುಚುವಿಕೆ, ಷೇರು ವರ್ಗಾವಣೆಯ ಕಡಿಮೆ ಮೌಲ್ಯಮಾಪನ ಮತ್ತು ಕಂಪನಿಯ ನಿಧಿಯ ದುರುಪಯೋಗ ಇವುಗಳಲ್ಲಿ ಸೇರಿವೆ.
ದಯಾನಿಧಿ ಅವರು ನೀಡಿರುವ ನೋಟಿಸ್ ಪ್ರಕಾರ, ಸೆಪ್ಟೆಂಬರ್ 15, 2003 ರಂದು ಕಲಾನಿಧಿ ಮಾರನ್ ಅವರಿಗೆ 12 ಲಕ್ಷ ಈಕ್ವಿಟಿ ಷೇರುಗಳನ್ನು ನೀಡಲಾಯಿತು. ತಮ್ಮ ತಂದೆ ಎಸ್ ಎನ್ ಮಾರನ್ ಅವರು ಗಂಭೀರ ಆರೋಗ್ಯ ಪರಿಸ್ಥಿತಿಯಲ್ಲಿ ಇದ್ದಾಗ ಭಾರತಕ್ಕೆ ಮರಳಿ ಕರೆತರಲಾಯಿತು. ಇದಾದ ಕೆಲವು ದಿನಗಳ ನಂತರ - ಸೂಕ್ತ ಮೌಲ್ಯಮಾಪನ ಮಾಡದೆ, ಷೇರುದಾರರ ಅನುಮೋದನೆ ಅಥವಾ ಮೂಲ ಪ್ರವರ್ತಕರ ಒಪ್ಪಿಗೆ ಪಡೆಯದೆ ತಲಾ ₹10 ಮುಖಬೆಲೆಯಲ್ಲಿ ಈ ಪ್ರಮಾಣದ ಷೇರುಗಳನ್ನು ಕಲಾನಿಧಿ ಅವರಿಗೆ ಹಂಚಿಕೆ ಮಾಡಲಾಗಿದೆ. ಈ ಷೇರುಗಳು ಕಂಪನಿಯಲ್ಲಿ 60% ಪಾಲನ್ನು ಪ್ರತಿನಿಧಿಸುತ್ತವೆ. ಈ ಷೇರುಗಳ ಹಂಚಿಕೆ ಸಮಯದಲ್ಲಿ ಅವುಗಳ ನಿಜವಾದ ಮೌಲ್ಯ, ಪ್ರತಿ ಷೇರಿಗೆ ರೂ. 3,000 ಕ್ಕಿಂತ ಹೆಚ್ಚಿತ್ತು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಸನ್ ಟಿವಿ ಮತ್ತು ಸಂಬಂಧಿತ ಸಂಸ್ಥೆಗಳಲ್ಲಿ ತಮ್ಮ ತಂದೆಯ ಷೇರುಗಳನ್ನು ನವೆಂಬರ್ 26, 2003 ರಂದು ತಮ್ಮ ತಾಯಿ ಮಲ್ಲಿಕಾ ಮಾರನ್ ಅವರಿಗೆ ಮರಣ ಪ್ರಮಾಣಪತ್ರ ಮತ್ತು ಕಾನೂನುಬದ್ಧ ಉತ್ತರಾಧಿಕಾರ ಪ್ರಮಾಣಪತ್ರವನ್ನು ನೀಡುವ ಮೊದಲು ಕಾನೂನುಬಾಹಿರವಾಗಿ ವರ್ಗಾಯಿಸಲಾಗಿದೆ ಎಂದು ದಯಾನಿಧಿ ಮಾರನ್ ಅವರು ಆರೋಪಿಸಿದ್ದಾರೆ. ಈ ವರ್ಗಾವಣೆಯು, ಡಿಸೆಂಬರ್ 2005 ರಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಮೌಲ್ಯದಲ್ಲಿ ಕಲಾನಿಧಿ ಮಾರನ್ ಅವರಿಗೆ ಮತ್ತಷ್ಟು ಅನಧಿಕೃತ ಷೇರುಗಳ ವರ್ಗಾವಣೆಗೆ ಅನುಕೂಲ ಮಾಡಿಕೊಟ್ಟಿತು ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.
ದಯಾನಿಧಿ ಅವರು ತಮ್ಮ ನೋಟಿಸ್‌ನಲ್ಲಿ ಇಡೀ ಷೇರು ವರ್ಗಾವಣೆ ಪ್ರಕ್ರಿಯೆಯನ್ನು 15.09.2003 ರಂದು ಇದ್ದಂತೆ ಅದರ ಮೂಲ ಸ್ಥಿತಿಗೆ ತಕ್ಷಣ ಪುನಃಸ್ಥಾಪಿಸುವಂತೆ ಕೋರಿದ್ದಾರೆ. ಅಲ್ಲದೆ, ಕಾನೂನುಬದ್ಧ ಉತ್ತರಾಧಿಕಾರಿಗಳಾದ ಎಸ್ ಎನ್ ಮಾರನ್ ಮತ್ತು ಎಂಕೆ ದಯಾಳು ಅವರಿಗೆ ಮಾಡಲಾದ ಷೇರು ಹಂಚಿಕೆಗಳನ್ನು ರದ್ದುಗೊಳಿಸುವಂತೆ ಮತ್ತು ನೀಡಲಾಗಿರುವ ಲಾಭಾಂಶ ಹಾಗೂ ಇತರ ಆರ್ಥಿಕ ಪ್ರಯೋಜನಗಳನ್ನು ಹಿಂಪಡೆಯುವಂತೆ ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ.
ಇಲ್ಲದೆ ಹೋದರೆ, ಭಾರತೀಯ ದಂಡ ಸಂಹಿತೆ, ಕಂಪನಿಗಳ ಕಾಯಿದೆ, ಸೆಬಿ ಕಾಯಿದೆ ಮತ್ತು ಹಣ ವರ್ಗಾವಣೆ ತಡೆ ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.
ಮುಂದುವರೆದು, ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಈ ಎಲ್ಲ ಆರೋಪಗಳ ಕುರಿತಾಗಿ ಸಂಪೂರ್ಣ ತನಿಖೆ ಕೋರಿ ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ), ಜಾರಿ ನಿರ್ದೇಶನಾಲಯ (ಇಡಿ), ಕಂಪನಿಗಳ ನೋಂದಣಿ ಅಧಿಕಾರಿ, ಸೆಬಿ ಮತ್ತು ಇತರ ನಿಯಂತ್ರಕ ಸಂಸ್ಥೆಗಳನ್ನು ಎಡತಾಕುವುದಾಗಿ ದಯಾನಿಧಿ ಮಾರನ್ ಹೇಳಿದ್ದಾರೆ.
ಸನ್ ಟಿವಿ ಚಾನೆಲ್‌ಗಳು, ಸನ್‌ರೈಸರ್ಸ್ ಹೈದರಾಬಾದ್ (ಐಪಿಎಲ್ ತಂಡ), ಸನ್‌ರೈಸರ್ಸ್ ಈಸ್ಟರ್ನ್ ಕೇಪ್ (ದಕ್ಷಿಣ ಆಫ್ರಿಕಾ) ಮತ್ತು ಸ್ಪೈಸ್‌ಜೆಟ್ ಸೇರಿದಂತೆ ಕಲಾನಿಧಿ ಮಾರನ್ ಒಡೆತನದ ಅಥವಾ ನಿಯಂತ್ರಿಸಲ್ಪಡುವ ಸಂಸ್ಥೆಗಳು ಹೊಂದಿರುವ ಪ್ರಸಾರ, ಪ್ರಕಟಣೆ ಮತ್ತು ವಾಯುಯಾನ ಪರವಾನಗಿಗಳನ್ನು ರದ್ದುಗೊಳಿಸುವಂತೆ ಕೋರಲು ಸಹ ಮುಂದಾಗುವುದಾಗಿ ಅವರು ಹೇಳಿದ್ದಾರೆ.