[ಸುನಂದಾ ಪುಷ್ಕರ್‌ ಪ್ರಕರಣ] ಶಶಿ ತರೂರ್‌ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಕಲ್ಪಿತ ಮನೋಭ್ರಾಂತಿ: ವಿಕಾಸ್‌ ಪಹ್ವಾ

ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಹಾಗೂ ಸುನಂದಾ ಪುಷ್ಕರ್‌ ಪತಿ ಶಶಿ ತರೂರ್‌ ಅವರ ಹೆಸರನ್ನು ಕೈಬಿಡುವ ಸಂಬಂಧ ಹಿರಿಯ ವಕೀಲ ವಿಕಾಸ್‌ ಪಹ್ವಾ ಅವರು ವಾದಿಸಿದರು.
[ಸುನಂದಾ ಪುಷ್ಕರ್‌ ಪ್ರಕರಣ] ಶಶಿ ತರೂರ್‌ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಕಲ್ಪಿತ ಮನೋಭ್ರಾಂತಿ: ವಿಕಾಸ್‌ ಪಹ್ವಾ
Sunanda Pushkar and Shashi Tharoor

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಸಾವಿಗೆ ಸಂಬಂಧಿಸಿದಂತೆ ಅವರ ವಿರುದ್ಧ ದೆಹಲಿಯ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸಿದ್ದ ಹಿರಿಯ ವಕೀಲ ವಿಕಾಸ ಪಹ್ವಾ ಅವರು ಶಶಿ ತರೂರ್‌ ಅವರು ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಕಲ್ಪಿತ ಮನೋಭ್ರಾಂತಿ ಎಂದಿದ್ದಾರೆ (ರಾಜ್ಯ ವರ್ಸಸ್‌ ಶಶಿ ತರೂರ್‌).

ಪ್ರಕರಣದ ಏಕೈಕ ಆರೋಪಿಯಾದ ಶಶಿ ತರೂರ್‌ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 498ಎ (ಹಿಂಸೆ), 306 (ಆತ್ಮಹತ್ಯೆಗೆ ಪ್ರಚೋದನೆ) ಅಥವಾ ಪರ್ಯಾಯವಾಗಿ ಸೆಕ್ಷನ್‌ 302 (ಕೊಲೆ)ರ ಅಡಿ ದೂರು ದಾಖಲಿಸಲು 2019ರ ಆಗಸ್ಟ್‌ನಲ್ಲಿ ದೆಹಲಿ ಪೊಲೀಸರು ಮುಂದಾಗಿದ್ದರು. ಶಶಿ ತರೂರ್‌ ಅವರ ಹೆಸರನ್ನು ಕೈಬಿಡುವ ಸಂಬಂಧ ಹಿರಿಯ ವಕೀಲ ವಿಕಾಸ್‌ ಪಹ್ವಾ ಅವರು ರೋಸ್‌ ಅವೆನ್ಯೂನ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯಲ್‌ ಎದುರು ಪ್ರಾಸಿಕ್ಯೂಷನ್‌ ಕಡೆಯಿಂದ ತರೂರ್‌ ಅಕ್ರಮ ಸಂಬಂಧ ಹೊಂದಿದ್ದರು ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ಸಲ್ಲಿಕೆಯಾಗಿಲ್ಲ ಎಂದರು.

“ಅಕ್ರಮ ಸಂಬಂಧ ಎಂದು ಹೇಳಲು ಏನು ಸಾಕ್ಷ್ಯವಿದೆ? ಇದು ಪತ್ರವೊಂದಕ್ಕೆ ಉಲ್ಲೇಖಿಸಿ ಹೇಳುತ್ತಿರುವುದಾಗಿದೆ… ಮತ್ತೊಬ್ಬರ ಕಂಪ್ಯೂಟರ್‌ನಿಂದ ಕರಡು ಪತ್ರ ಸಂಗ್ರಹಿಸಲಾಗಿದೆ. ಕರಡು ಪತ್ರವನ್ನು ಕಳುಹಿಸಲಾಗಿದೆ ಅಥವಾ ಸ್ವೀಕರಿಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ.. ತರೂರ್‌ ಅವರ ಪತ್ನಿಗೆ ಕೆಲವು ಅನುಮಾನಗಳಿದ್ದವು ಎಂದು ಅವರು ಹೇಳಬಹುದು. ಅದನ್ನು ಮೀರಿ ಮುಂದಡಿ ಇಟ್ಟಾಗ ಅವರು ಸಾಕ್ಷಿ ಒದಗಿಸಬೇಕು” ಎಂದು ಪಹ್ವಾ ಹೇಳಿದರು.

ಅಕ್ರಮ ಸಂಬಂಧ ಹೊಂದಿದ್ದ ಮಾತ್ರಕ್ಕೆ ಆತ್ಮಹತ್ಯೆಗೆ ಪ್ರಚೋದನೆ ಎಂದು ಹೇಳಲಾಗದು ಎಂದು ಪ್ರಕರಣದ ಕಾನೂನುಗಳನ್ನು ಆಧರಿಸಿ ವಾದಿಸಿದ ಪಹ್ವಾ, ಐಪಿಸಿಯ ಸೆಕ್ಷನ್‌ 498ಎ ಅನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಗಮನಹರಿಸುವಂತೆ ಕೋರಿದರು.

“ಮಾಧ್ಯಮಗಳಲ್ಲಿ ನಡೆವ ಕೆಟ್ಟ ಪ್ರಚಾರವು ಸಂಕಷ್ಟವನ್ನು ಹೆಚ್ಚಿಸುತ್ತದೆ. ನನ್ನ ಪ್ರಕರಣದಲ್ಲಿ ಅದು ಸತ್ಯವಾಗಿದೆ. ಸೆಕ್ಷನ್‌ 498ಎ ಸಂಚಕಾರ ತರುವ ಅಸ್ತ್ರವಾಗಬಾರದು... ಮುಗ್ಧ ಜನರು ಆಧಾರರಹಿತ ಆರೋಪಗಳಿಂದ ನೋವು ಅನುಭವಿಸಬಾರದು” ಎಂದರು.

Also Read
ರೈತರ ಪ್ರತಿಭಟನೆಗಳ ತಪ್ಪು ವರದಿಗಾರಿಕೆ ಆರೋಪ: ಎಫ್‌ಐಆರ್‌ ವಜಾ ಕೋರಿ ಸುಪ್ರೀಂ ಮೆಟ್ಟಿಲೇರಿದ ತರೂರ್‌, ರಾಜ್‌ದೀಪ್

ಸದರಿ ಪ್ರಕರಣದಲ್ಲಿ ಸಾವಿಗೆ ಕಾರಣ ಪತ್ತೆ ಮಾಡಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದಿರುವ ಪಹ್ವಾ ಅವರು “ಪುತ್ರನಾದಿಯಾಗಿ ಎಲ್ಲರೂ ಹೇಳುತ್ತಿರುವುದು ಪುಷ್ಕರ್‌ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂದು. ಸೆಕ್ಷನ್‌ 306ರ ಅಡಿ ಯಾವುದೇ ಪ್ರಕರಣವು ಸೆಕ್ಷನ್‌ 309ರ ಅಡಿ ಅರ್ಹತೆ ಗಿಟ್ಟಿಸಬೇಕು. ಆತ್ಮಹತ್ಯೆ ನಡೆದಿಲ್ಲ ಎಂದಾದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ಏಕೆ. ಮೊದಲಿಗೆ ಅವರು ಆತ್ಮಹತ್ಯೆ ಎಂದು ಸಾಬೀತುಪಡಿಸಲು ವಿಫಲರಾಗಿದ್ದಾರೆ. ಬಳಿಕ ಪ್ರಚೋದನೆ ಸಾಬೀತುಪಡಿಸಲು ಸೋತಿದ್ದಾರೆ” ಎಂದಿದ್ದಾರೆ. ಏಪ್ರಿಲ್‌ 9ಕ್ಕೆ ವಿಚಾರಣೆ ಮುಂಡೂಲಾಗಿದೆ.

ಜನವರಿ 17, 2014ರಂದು ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಸುನಂದಾ ಪುಷ್ಕರ್‌ ಶವವಾಗಿ ಪತ್ತೆಯಾಗಿದ್ದರು. ಪ್ರಕರಣದ ಏಕೈಕ ಆರೋಪಿ ತರೂರ್‌ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

Related Stories

No stories found.
Kannada Bar & Bench
kannada.barandbench.com