ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯೂಎಫ್‌ಐ) ಕಾರ್ಯಕಾರಿ ಸಮಿತಿಗೆ ನಡೆಯಲಿರುವ ಚುನಾವಣೆಗೆ ಗುವಾಹಟಿ ಹೈಕೋರ್ಟ್ ಭಾನುವಾರ ತಡೆ ನೀಡಿದೆ [ಅಸ್ಸಾಂ ರೆಸಲಿಂಗ್ ಅಸೋಸಿಯೇಷನ್ ಮತ್ತಿತರರು ಹಾಗೂ ರೆಸಲಿಂಗ್ ಫೆಡರೇಷನ್ ಆಫ್ ಇಂಡಿಯಾ ಇನ್ನಿತರರ ನಡುವಣ ಪ್ರಕರಣ].
ಅಸ್ಸಾಂ ಕುಸ್ತಿ ಸಂಸ್ಥೆಯನ್ನು ಭಾರತೀಯ ಕುಸ್ತಿ ಒಕ್ಕೂಟದಲ್ಲಿ ಸಂಯೋಜನೆ ಮಾಡಿಲ್ಲ ಇದರಿಂದಾಗಿ ಅಸ್ಸಾಂ ಕುಸ್ತಿ ಸಂಸ್ಥೆ ಚುನಾವಣೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ ಎಂದು ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾನಿ ತಾಗಿಯಾ ಅವರು ಆದೇಶ ನೀಡಿದ್ದಾರೆ.
ಜುಲೈ 11ರಂದು ನಿಗದಿಯಾಗಿದ್ದ ಚುನಾವಣೆ ನಡೆಸದಂತೆ ಡಬ್ಲ್ಯೂಎಫ್‌ಐಗೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಬ್ಲ್ಯುಎಫ್‌ಐ ಮತ್ತು ಕೇಂದ್ರ ಕ್ರೀಡಾ ಸಚಿವಾಲಯದ ಪ್ರತಿಕ್ರಿಯೆಯನ್ನು ಕೂಡ ಕೇಳಿರುವ ಪೀಠ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿದೆ.
ಚುನಾವಣೆಗೆ ಆಕ್ಷೇಪ ವ್ಯಕ್ತಪಡಿಸಿ ಅಸ್ಸಾಂ ಕುಸ್ತಿ ಸಂಸ್ಥೆ ಮತ್ತು ಅಸ್ಸಾಂ ಒಲಿಂಪಿಕ್ ಸಂಘದ ಅಧ್ಯ್ಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹಿಂದಿನ ಕಾರ್ಯಕಾರಿ ಸಮಿತಿ ನೀಡಿದ್ದ ಭರವಸೆ ಮತ್ತು ಶಿಫಾರಸಿನಂತೆ ಅಸ್ಸಾಂ ಕುಸ್ತಿ ಸಂಸ್ಥೆಯನ್ನು ಡಬ್ಲ್ಯೂಎಫ್‌ಐನ ಅಂಗಸಂಸ್ಥೆಯಾಗಿ ಪರಿಗಣಿಸಬೇಕೆಂದು ಅರ್ಜಿದಾರರು ಪ್ರಾರ್ಥಿಸಿದ್ದರು.
ಅಸ್ಸಾಂ ಕುಸ್ತಿ ಸಂಸ್ಥೆಯನ್ನು ಅಂಗಸಂಸ್ಥೆಯನ್ನಾಗಿ ಮಾಡದೆ ಇದ್ದರೆ ಡಬ್ಲ್ಯುಎಫ್‌ಐ ಆಯೋಜಿಸುವ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅಸ್ಸಾಂ ರಾಜ್ಯಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅಸ್ಸಾಂ ಕುಸ್ತಿಪಟುಗಳ ಹಿತಾಸಕ್ತಿ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಂಸ್ಥೆಯನ್ನ ಚುನಾವಣಾ ಅಂಗವಾಗಿ ಪರಿಗಣಿಸುವವರೆಗೆ ಮುಂಬರುವ ಚುನಾವಣೆಗೆ ತಡೆ ನೀಡಬೇಕೆಂದು ಅರ್ಜಿದಾರರು ಪ್ರಾರ್ಥಿಸಿದ್ದರು.
ಡಬ್ಲ್ಯೂಎಫ್‌ಐನ (ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ) ನಿಕಟಪೂರ್ವ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ 2014ರಲ್ಲಿ ಕಾರ್ಯಕಾರಿ ಸಮಿತಿ ಸಭೆಯು ಅಸ್ಸಾಂ ಕುಸ್ತಿ ಸಂಸ್ಥೆಯನ್ನು ಅಂಗಸಂಸ್ಥೆಯಾಗಿ ಪರಿಗಣಿಸುವ ನಿರ್ಣಯ ಅಂಗೀಕರಿಸಿತ್ತು.