[ವಲಸೆ ಕಾರ್ಮಿಕರ ಬಿಕ್ಕಟ್ಟು] ‘ಒಂದು ದೇಶ, ಒಂದು ಪಡಿತರ’ ಯೋಜನೆ ಅನುಷ್ಠಾನಕ್ಕೆ ರಾಜ್ಯಗಳಿಗೆ ಸೂಚಿಸಿದ ಸುಪ್ರೀಂಕೋರ್ಟ್

ಅಸಂಘಟಿತ ವಲಯದ ಕಾರ್ಮಿಕರ ಹಾಗೂ ವಲಸೆ ಕಾರ್ಮಿಕರ ನೋಂದಣಿಗಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ ಅಂತರ್ಜಾಲ ತಾಣವೊಂದನ್ನು ರೂಪಿಸುವಂತೆ ಸೂಚಿಸಿದ ನ್ಯಾಯಾಲಯ.
[ವಲಸೆ ಕಾರ್ಮಿಕರ ಬಿಕ್ಕಟ್ಟು] ‘ಒಂದು ದೇಶ, ಒಂದು ಪಡಿತರ’ ಯೋಜನೆ ಅನುಷ್ಠಾನಕ್ಕೆ ರಾಜ್ಯಗಳಿಗೆ ಸೂಚಿಸಿದ ಸುಪ್ರೀಂಕೋರ್ಟ್
Migrants, Supreme Court

ಯಾವೆಲ್ಲಾ ರಾಜ್ಯಗಳು ಈವರೆಗೆ ‘ಒಂದು ದೇಶ, ಒಂದು ಪಡಿತರ’ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲವೋ ಆ ಎಲ್ಲ ರಾಜ್ಯಗಳು ಜುಲೈ 31, 2021ರೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ. ವಲಸೆ ಕಾರ್ಮಿಕರ ಸಮಸ್ಯೆಗಳು ಮತ್ತು ದುಃಖದುಮ್ಮಾನಗಳ ಕುರಿತು ಸ್ವಯಂಪ್ರೇರಣೆಯಿಂದ ದಾಖಲಿಸಿಕೊಂಡಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ನಿರ್ದೇಶನ ನೀಡಿದೆ.

ನ್ಯಾ. ಅಶೋಕ್‌ ಭೂಷಣ್‌ ಹಾಗೂ ನ್ಯಾ. ಎಂ ಆರ್‌ ಶಾ ಅವರಿದ್ದ ವಿಭಾಗೀಯ ಪೀಠವು ವಲಸೆ ಕಾರ್ಮಿಕರಿಗೆ ಪಡಿತರವನ್ನು ನೀಡಲು ರಾಜ್ಯಗಳು ಯೋಜನೆಯೊಂದನ್ನು ರೂಪಿಸಬೇಕು ಎಂದು ಹೇಳಿತು. ಅಲ್ಲದೆ, ಕೇಂದ್ರ ಸರ್ಕಾರವು ರಾಷ್ಟ್ರೀಯ ಮಾಹಿತಿ ಕೇಂದ್ರದೊಂದಿಗೆ (ಎನ್‌ಐಸಿ) ಸಮಾಲೋಚಿಸಿ ಅಸಂಘಟಿತ ಹಾಗೂ ವಲಸೆ ಕಾರ್ಮಿಕರ ನೋಂದಣಿಗಾಗಿ ಅಂತರ್ಜಾಲ ತಾಣವೊಂದನ್ನು ರೂಪಿಸುವಂತೆಯೂ ಸೂಚಿಸಿತು. ಇದನ್ನೂ ಸಹ ಜುಲೈ 31, 2021ರ ಒಳಗೆ ಪೂರೈಸುವಂತೆ ನ್ಯಾಯಾಲಯವು ನಿರ್ದೇಶಿಸಿತು.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಒತ್ತು ನೀಡಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಣೆಯಿಂದ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಸಾಮಾಜಿಕ ಕಾರ್ಯಕರ್ತರಾದ ಹರ್ಷ ಮಂದರ್‌, ಅಂಜಲಿ ಭಾರಧ್ವಾಜ್‌ ಮತ್ತು ಜಗದೀಪ್‌ ಚೊಕ್ಕಾರ್‌ ಅವರು ವಲಸೆ ಕಾರ್ಮಿಕರು ಹಾಗೂ ಪ್ರಯಾಣಿಸಲಾಗದೆ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ಆಹಾರ ಭದ್ರತೆ, ಪಡಿತರದ ಖಾತರಿ ಒದಗಿಸಲು ಕೋರಿ ತುರ್ತು ಅರ್ಜಿಯನ್ನು ಸಲ್ಲಿಸಿದ್ದರು.

Also Read
[ವಲಸೆ ಬಿಕ್ಕಟ್ಟು] 8 ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಪುನಾರಂಭಕ್ಕೆ, ಸಾರಿಗೆ ವ್ಯವಸ್ಥೆಗೆ ಸುಪ್ರೀಂನಲ್ಲಿ ಮನವಿ

ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯದ ಅನೇಕ ಆದೇಶಗಳ ತರುವಾಯವೂ ಸಹ ಈವರೆಗೆ ಅಸಂಘಟಿತ ಹಾಗೂ ವಲಸೆ ಕಾರ್ಮಿಕರ ದತ್ತಾಂಶ ಏಕೆ ಲಭ್ಯವಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪೀಠವು ಪ್ರಶ್ನಿಸಿತು. ಅಲ್ಲದೆ, ಇದಕ್ಕಾಗಿ ಸುಮಾರು ರೂ.417 ಕೋಟಿ ಹಣವನ್ನು ಹಂಚಿಕೆ ಮಾಡಲಾಗಿರುವುದನ್ನು ಗಮನಿಸಿದ ಪೀಠವು ಆಮೆಗತಿಯಲ್ಲಿ ಕೆಲಸವು ಸಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಈ ವೇಳೆ ಯೋಜನೆಯ ಬಗ್ಗೆ ಪೀಠಕ್ಕೆ ಮಾಹಿತಿ ನೀಡಿದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ, ರಾಷ್ಟ್ರೀಯ ಮಾಹಿತಿ ಕೇಂದ್ರವು ಯೋಜನೆಯನ್ನು ಕೈಗೆತ್ತಿಕೊಂಡಿದ್ದು ದತ್ತಾಂಶ ಸಿದ್ಧಪಡಿಸಲು ಇನ್ನೂ ಮೂರ್ನಾಲ್ಕು ತಿಂಗಳ ಸಮಯಾವಕಾಶ ಅಗತ್ಯವಿದೆ ಎಂದರು.

No stories found.
Kannada Bar & Bench
kannada.barandbench.com