ಶುದ್ಧ ಕುಡಿಯುವ ನೀರು ಪೂರೈಕೆ: ಸಮಗ್ರ ಪ್ರಮಾಣೀಕೃತ ಕಾರ್ಯವಿಧಾನ ಸಿದ್ಧಪಡಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

“ಸೌಲಭ್ಯಗಳ ನಿರ್ವಹಣೆಗಾಗಿ ಎಸ್‌ಒಪಿ ಸಿದ್ಧಪಡಿಸಬೇಕು ಮತ್ತು ಈ ಆದೇಶ ಪ್ರಕಟಿಸಿದ ದಿನದಿಂದ ಎರಡು ತಿಂಗಳ ಒಳಗೆ ಎಸ್‌ಒಪಿಯನ್ನು, ಪರಿಶೀಲನೆಗಾಗಿ, ಆದೇಶ ಪಾಲನೆಯ ಮುಂದಿನ ಹೆಜ್ಜೆಯಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
High Court of Karnataka
High Court of Karnataka
Published on

ರಾಜ್ಯದ ಎಲ್ಲ ಜಿಲ್ಲೆ ಹಾಗೂ ಗ್ರಾಮಗಳಲ್ಲಿ ನಾಗರಿಕರಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಸಮಗ್ರವಾದ ಪ್ರಮಾಣೀಕೃತ ಕಾರ್ಯವಿಧಾನವೊಂದನ್ನು (ಎಸ್‌ಒಪಿ) ಸಿದ್ಧಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ವಕೀಲ ಎಲ್‌ ರಮೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ನೇತೃತ್ವದ ವಿಭಾಗೀಯ ಪೀಠ ಪ್ರಕಟಿಸಿದ್ದು ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿದೆ.

“ಜನರ ಬಳಕೆಗೆ ಯೋಗ್ಯವಾದ ಕುಡಿಯುವ ನೀರನ್ನು ಪೂರೈಸುವುದು ರಾಜ್ಯ ಸರ್ಕಾರದ ಮೂಲಭೂತ ಕರ್ತವ್ಯ” ಎಂದು ನೆನಪಿಸಿರುವ ನ್ಯಾಯಾಲಯವು “ನೀರಿನ ಮೂಲಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಹೋದರೆ ನೀರು ಕಲುಷಿತವಾಗುತ್ತದೆ ಎಂಬ ಅರ್ಜಿದಾರರ ವಾದ ಸಮಂಜಸ” ಎಂದಿದೆ.

“ನೀರು ಸರಬರಾಜಿನ ಮೂಲಸೌಕರ್ಯ ವ್ಯವಸ್ಥೆಯು ಶುದ್ಧೀಕರಣ ಘಟಕಗಳು, ಭೂಗತ ಮತ್ತು ಓವರ್‌ ಹೆಡ್ ಟ್ಯಾಂಕ್‌ಗಳು, ಪೈಪ್‌ಲೈನ್‌ಗಳು, ಬೋರ್‌ವೆಲ್‌ಗಳು ಮತ್ತು ರಿವರ್ಸ್ ಆಸ್ಮೋಸಿಸ್ (ಆರ್‌ಒ) ಸ್ಥಾವರಗಳು ಒಳಗೊಂಡಿದೆ. ಈ ಎಲ್ಲಾ ಸೌಲಭ್ಯಗಳಿಗೆ ಸಕಾಲಿಕ ಮತ್ತು ವೈಜ್ಞಾನಿಕ ನಿರ್ವಹಣೆಯ ಅಗತ್ಯವಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಸೌಲಭ್ಯಗಳ ನಿರ್ವಹಣೆಗಾಗಿ ಎಸ್‌ಒಪಿ ಸಿದ್ಧಪಡಿಸಬೇಕು ಮತ್ತು ಈ ಆದೇಶ ಪ್ರಕಟಿಸಿದ ದಿನದಿಂದ ಎರಡು ತಿಂಗಳ ಒಳಗೆ ಎಸ್‌ಒಪಿಯನ್ನು, ಪರಿಶೀಲನೆಗಾಗಿ ಮತ್ತು ಆದೇಶ ಪಾಲನೆಯ ಮುಂದಿನ ಹೆಜ್ಜೆಯಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ತಾಕೀತು ಮಾಡಿದೆ.

“ತುಮಕೂರು ಸೇರಿದಂತೆ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪದೇ ಪದೇ ಎದುರಾಗುವ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಅರ್ಜಿದಾರರು ಕೋರಿದ್ದರು.

Kannada Bar & Bench
kannada.barandbench.com