
ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖಿಸದೆ ಅಥವಾ ಭಾರತದ ಹೆಸರನ್ನು ತೆಗೆದುಕೊಳ್ಳದೆ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸುವುದು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 152 ರ ಅಡಿಯಲ್ಲಿ ಮೇಲ್ನೋಟಕ್ಕೆ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಸೆಕ್ಷನ್ 152 ಬಿಎನ್‌ಎಸ್ ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳ ಕುರಿತದ್ದಾಗಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರ ಪೀಠವು, "ಯಾವುದೇ ಘಟನೆಯನ್ನು ಉಲ್ಲೇಖಿಸದೆ ಅಥವಾ ಭಾರತದ ಹೆಸರನ್ನು ತೆಗೆದುಕೊಳ್ಳದೆ ಪಾಕಿಸ್ತಾನಕ್ಕೆ ಬೆಂಬಲ ನೀಡುವುದು ಮೇಲ್ನೋಟಕ್ಕೆ ಸೆಕ್ಷನ್ 152 ಬಿಎನ್‌ಎಸ್ ಅಡಿಯಲ್ಲಿ ಅಪರಾಧವಾಗುವುದಿಲ್ಲ... ಯಾವುದೇ ದೇಶವನ್ನು ಬೆಂಬಲಿಸುವುದು ಭಾರತದ ನಾಗರಿಕರಲ್ಲಿ ಕೋಪ ಅಥವಾ ಅಸಾಮರಸ್ಯವನ್ನು ಉಂಟುಮಾಡಬಹುದು ಎಂದು ತೋರಿಸುವ ಸಂದೇಶವನ್ನು ಪೋಸ್ಟ್ ಮಾಡುವುದು ಸೆಕ್ಷನ್ 196 ಬಿಎನ್‌ಎಸ್ ಅಡಿಯಲ್ಲಿ ಶಿಕ್ಷಾರ್ಹವಾಗಬಹುದು, ಇದು ಏಳು ವರ್ಷಗಳವರೆಗಿನ ಶಿಕ್ಷೆಗೆ ಕಾರಣವಾಗಬಹುದು, ಆದರೆ ಖಂಡಿತವಾಗಿಯೂ ಅದಕ್ಕೆ ಬಿಎನ್‌ಎಸ್ ಸೆಕ್ಷನ್ 152ರ ಅಂಶಗಳು ಅನ್ವಯಿಸುವುದಿಲ್ಲ," ಎಂದಿದೆ.
ಬಿಎನ್‌ಎಸ್‌ನ ಸೆಕ್ಷನ್ 152 ಹೊಸದಾಗಿ ಪರಿಚಯಿಸಲಾದ ನಿಬಂಧನೆಯಾಗಿದ್ದು, ಐಪಿಸಿಯಲ್ಲಿ ಇದಕ್ಕೆ ಯಾವುದೇ ಸಮಾನಾಂತರವಾದ ಸೆಕ್ಷನ್ ಇಲ್ಲ. ಹಾಗಾಗಿ, ಇದನ್ನು ಎಚ್ಚರಿಕೆಯಿಂದ ಅನ್ವಯಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಮಾತನಾಡುವ ಶಬ್ದಗಳು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಬರುತ್ತವೆ. ಇವು ದೇಶದ ಸಾರ್ವಭೌಮತ್ವಕ್ಕೆ ಸ್ಪಷ್ಟವಾಗಿ ಬೆದರಿಕೆ ಹಾಕದ ಹೊರತು ಅಥವಾ ಪ್ರತ್ಯೇಕತಾವಾದವನ್ನು ಉತ್ತೇಜಿಸದ ಹೊರತು ಅವುಗಳನ್ನು ಸಂಕುಚಿತವಾಗಿ ಅರ್ಥೈಸಬಾರದು ಎಂದು ನ್ಯಾಯಾಲಯ ಒತ್ತಿ ಹೇಳಿದೆ.
"ಸೆಕ್ಷನ್ 152 ಬಿಎನ್‌ಎಸ್‌ನ ಅಂಶಗಳನ್ನು ಅನ್ವಯಿಸಲು, ಮಾತನಾಡುವ ಶಬ್ದಗಳು ಅಥವಾ ಲಿಖಿತ ಪದಗಳು, ಚಿಹ್ನೆಗಳು, ಗೋಚರವಾಗುವಂತಹ ಅಭಿವ್ಯಕ್ತಿಗಳು, ಪ್ರತ್ಯೇಕತೆಯನ್ನು ಉತ್ತೇಜಿಸುವ ಎಲೆಕ್ಟ್ರಾನಿಕ್ ಸಂವಹನ, ಸಶಸ್ತ್ರ ದಂಗೆ, ವಿಧ್ವಂಸಕ ಚಟುವಟಿಕೆಗಳು ಅಥವಾ ಪ್ರತ್ಯೇಕತೆಯ ಭಾವನೆಯನ್ನು ಪ್ರೋತ್ಸಾಹಿಸುವ ಅಥವಾ ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಉದ್ದೇಶವಿರಬೇಕು," ಎಂದು ನ್ಯಾಯಪೀಠವು ವಿವರಿಸಿದೆ.
ಇನ್‌ಸ್ಟಾಗ್ರಾಮ್ ರೀಲ್ ಅನ್ನು ಪೋಸ್ಟ್ ಮಾಡಿದ್ದಕ್ಕಾಗಿ ಬಂಧಿಸಲ್ಪಟ್ಟ 18 ವರ್ಷದ ಯುವಕ ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. "ಚಾಹೆ ಜೋ ಹೋ ಜಾಯ್ ಸ್ಪೋರ್ಟ್ ತೋ ಬಸ್... ಪಾಕಿಸ್ತಾನ್ ಕಾ ಕರೇಂಗೆ (ಏನೇ ಆಗಲಿ, ನಾವು... ಪಾಕಿಸ್ತಾನವನ್ನು ಮಾತ್ರ ಬೆಂಬಲಿಸುತ್ತೇವೆ)" ಎಂದು ಯುವಕ ರೀಲ್ಸ್ ಮಾಡಿದ್ದ.
ಅರ್ಜಿದಾರರ ಪರ ವಕೀಲರು, ಪ್ರಶ್ನಾರ್ಹ ಪೋಸ್ಟ್‌ನಲ್ಲಿ ಭಾರತದ ಧ್ವಜವನ್ನು ಪ್ರದರ್ಶಿಸುವುದಾಗಲಿ ಅಥವಾ ಭಾರತದ ಬಗ್ಗೆ ಉಲ್ಲೇಖಿಸುವುದಾಗಲಿ ಮಾಡಿಲ್ಲ. ದೇಶದೆಡೆಗೆ ಅಗೌರವ ತೋರಿಸುವ ಯಾವುದೇ ಚಿತ್ರವನ್ನು ಪ್ರದರ್ಶಿಸದ ಕಾರಣ ದೇಶದ ಘನತೆ ಅಥವಾ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿಲ್ಲ ಎಂದು ವಾದಿಸಿದರು. ಮತ್ತೊಂದು ದೇಶಕ್ಕೆ ಬೆಂಬಲ ವ್ಯಕ್ತಪಡಿಸುವುದು, ಆ ದೇಶವು ಭಾರತಕ್ಕೆ ಪ್ರತಿಕೂಲವೆಂದು ಪರಿಗಣಿಸಲ್ಪಟ್ಟಿದ್ದರೂ ಸಹ, ಸೆಕ್ಷನ್ 152 ಬಿಎನ್‌ಎಸ್ ಅನ್ನು ಅನ್ವಯಿಸಲು ಅಗತ್ಯವಾದ ಅವಶ್ಯಕತೆಗಳನ್ನು ಪೂರೈಸುವುದಿಲ್ಲ ಎಂದು ವಾದಮಂಡಿಸಿದರು.
ಅರ್ಜಿದಾರರ ಜಾಮೀನು ಅರ್ಜಿಯನ್ನು ವಿರೋಧಿಸಿದ ರಾಜ್ಯದ ವಕೀಲರು, ಇನ್‌ಸ್ಟಾಗ್ರಾಮ್ ಪೋಸ್ಟ್ ಪ್ರತ್ಯೇಕತಾವಾದವನ್ನು ಉತ್ತೇಜಿಸಿದ್ದು, ಈ ಕುರಿತ ಅಪರಾಧಕ್ಕೆ ಅವರನ್ನು ಹೊಣೆಗಾರರನ್ನಾಗಿಸುತ್ತದೆ ಎಂದು ವಾದಿಸಿದರು.
ಅಂತಿಮವಾಗಿ ಪೀಠವು ತನ್ನ ಆದೇಶದಲ್ಲಿ "ಪೊಲೀಸ್ ಅಧಿಕಾರಿಗಳು ನಾಗರಿಕರಾಗಿರುವುದರಿಂದ ಸಂವಿಧಾನವನ್ನು ಪಾಲಿಸಲು ಬದ್ಧರಾಗಿರುತ್ತಾರೆ. ಎಲ್ಲಾ ನಾಗರಿಕರಿಗೆ ನೀಡಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಲು ಮತ್ತು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸುವ ಮೊದಲು, ಅದನ್ನು ವಿವೇಚನೆಯುಳ್ಳ ವ್ಯಕ್ತಿಯ ದೃಷ್ಟಿಕೋನದಿಂದ ನೋಡಬೇಕು. ಈ ನಿರ್ಧಾರವು ವಿವೇಚನೆ ಹೊಂದಿರುವ, ಸ್ಥಿರ ಮನಸ್ಸಿನ, ದೃಢ ಮತ್ತು ಧೈರ್ಯಶಾಲಿ ವ್ಯಕ್ತಿಗಳ ಮಾನದಂಡಗಳನ್ನು ಆಧರಿಸಿರಬೇಕೇ ಹೊರತು ದುರ್ಬಲ ಮತ್ತು ಚಂಚಲ ಮನಸ್ಸಿನ ಜನರ ಮಾನದಂಡಗಳನ್ನು ಆಧರಿಸಿರಬಾರದು ಎಂದು ಸುಪ್ರೀಂ ಕೋರ್ಟ್ ಅವಲೋಕಿಸಿದೆ," ಎಂದು ದಾಖಲಿಸಿತು.
ಇದೇ ವೇಳೆ ಪೀಠವು, ಭಾರತದ ನಾಗರಿಕರ ನಡುವೆ ಸಾಮರಸ್ಯವನ್ನು ಕೆಡಿಸುವ ಯಾವುದೇ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡದಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿತು. ಅರ್ಜಿದಾರರ ಪರವಾಗಿ ವಕೀಲ ಸಂತೋಷ್ ಕುಮಾರ್ ಗುಪ್ತಾ ವಾದಿಸಿದರು. ಸರ್ಕಾರದ ಪರವಾಗಿ ವಕೀಲ ಅನೀಶ್ ಕುಮಾರ್ ಉಪಾಧ್ಯಾಯ ಅವರು ವಾದಿಸಿದರು.