ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿದ್ದ ಪಿಐಎಲ್: ವಕೀಲರಿಗೆ ₹1 ಲಕ್ಷ ದಂಡ ವಿಧಿಸಿದ ಸುಪ್ರೀಂ

ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ದೋಷಿ ಎಂದು ಘೋಷಿಸಿದ ನಂತರ ರಾಹುಲ್ ಗಾಂಧಿ ಅವರನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಲೋಕಸಭೆಯಿಂದ ಅನರ್ಹಗೊಳಿಸಲಾಗಿತ್ತು. ಶಿಕ್ಷೆಯನ್ನು ನಂತರ ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು.
ರಾಹುಲ್ ಗಾಂಧಿ ಮತ್ತು ಸುಪ್ರೀಂ ಕೋರ್ಟ್
ರಾಹುಲ್ ಗಾಂಧಿ ಮತ್ತು ಸುಪ್ರೀಂ ಕೋರ್ಟ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಗೆ ಮರುನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದ ವಕೀಲರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ₹1 ಲಕ್ಷ ದಂಡ ವಿಧಿಸಿದೆ.

ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ನೇತೃತ್ವದ ವಿಭಾಗೀಯ ಪೀಠವು ವಕೀಲ ಅಶೋಕ್ ಪಾಂಡೆ ಸಲ್ಲಿಸಿದ್ದ ಅರ್ಜಿಯು ಕ್ಷುಲ್ಲಕವಾಗಿದ್ದು, ನ್ಯಾಯಾಂಗದ ಸಮಯವನ್ನು ವ್ಯರ್ಥಗೊಳಿಸುವ ಯತ್ನ ಎಂದಿದೆ.

ಲೋಕಸಭೆಯ ಸದಸ್ಯರಾಗಿ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಪಾಂಡೆ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

2019 ರಲ್ಲಿ ಕರ್ನಾಟಕದ ಕೋಲಾರ ಕ್ಷೇತ್ರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ರಾಹುಲ್‌ ಅವರು ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಸೂರತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಳೆದ ವರ್ಷ ಮಾರ್ಚ್‌ನಲ್ಲಿ ಲೋಕಸಭೆಯಿಂದ ಅನರ್ಹಗೊಳಿಸಿತ್ತು.

ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು "ಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆ" ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ನೀರವ್ ಮೋದಿ ಮತ್ತು ಲಲಿತ್ ಮೋದಿಯಂತಹ ದೇಶಭ್ರಷ್ಟರೊಂದಿಗೆ ಹೋಲಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಸೂರತ್ ನ್ಯಾಯಾಲಯವು ರಾಹುಲ್‌ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರಿಂದಾಗಿ ನಿಯಮಗಳನ್ವಯ ಅವರ ಲೋಕಸಭಾ ಸದಸ್ಯತ್ವವು ತಾನಾಗಿಯೇ ರದ್ದುಗೊಂಡಿತ್ತು.

ಆ ನಂತರದ ಬೆಳವಣಿಗೆಗಳಲ್ಲಿ, ಸತ್ರ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್ ರಾಹುಲ್‌ ಶಿಕ್ಷೆಯನ್ನು ತಡೆಹಿಡಿಯಲು ನಿರಾಕರಿಸಿದ್ದವು. ನಂತರ ಅವರು ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ 2023 ರಲ್ಲಿ, ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಅವರ ಶಿಕ್ಷೆಯನ್ನು ತಡೆಹಿಡಿದಿತ್ತು. ಮಾನಹಾನಿ ಅಪರಾಧಕ್ಕಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಸೂಚಿಸಲಾದ ಗರಿಷ್ಠ ಶಿಕ್ಷೆಯನ್ನು ವಿಧಿಸಲು ವಿಚಾರಣಾ ನ್ಯಾಯಾಲಯವು ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ ಎಂದು ಹೇಳಿತ್ತು. ಸರ್ವೋಚ್ಚ ನ್ಯಾಯಾಲಯದ ತಡೆಯಾಜ್ಞೆಯು ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವದ ಪುನರ್‌ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿತ್ತು.

Related Stories

No stories found.
Kannada Bar & Bench
kannada.barandbench.com