ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿ ಮದನಿ ಕೇರಳದಲ್ಲಿ ನೆಲೆಸಲು ಅನುಮತಿಸಿದ ಸುಪ್ರೀಂ ಕೋರ್ಟ್

ವಿಚಾರಣಾ ಪ್ರಕ್ರಿಯೆಗೆ ಮದನಿಯ ಹಾಜರಾತಿಯ ಅಗತ್ಯ ಇನ್ನು ಮುಂದೆ ಇಲ್ಲ ಎನ್ನುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠ ಜಾಮೀನು ಷರತ್ತುಗಳನ್ನು ಸಡಿಲಿಸಿದೆ.
Abdul Nasser Maudany and Supreme court
Abdul Nasser Maudany and Supreme court

ಬೆಂಗಳೂರು ಸ್ಫೋಟ ಪ್ರಕರಣದ ವಿಚಾರಣೆ ಪ್ರಕ್ರಿಯೆಯಲ್ಲಿ ಆರೋಪಿ ಅಬ್ದುಲ್ ನಜೀರ್ ಮದನಿ ಅವರ ಉಪಸ್ಥಿತಿ ಅಗತ್ಯ ಇಲ್ಲದಿರುವುದರಿಂದ ಆತ  ಬೆಂಗಳೂರಿನಲ್ಲಿ ಇರುವ ಬದಲು ಕೇರಳಕ್ಕೆ ಪ್ರಯಾಣ ಕೈಗೊಳ್ಳಲು ಹಾಗೂ ಅಲ್ಲಿಯೇ ವಾಸಿಸಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ [ಅಬ್ದುಲ್‌ ನಜೀರ್‌ ಮದನಿ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕ ಮದನಿ ಅವರಿಗೆ ವಿಧಿಸಲಾಗಿದ್ದ ಜಾಮೀನು ಷರತ್ತುಗಳನ್ನು ಸಡಿಲಿಸಿ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದರೇಶ್‌ ಅವರನ್ನೊಳಗೊಂಡ ಪೀಠ ಆದೇಶ ನೀಡಿದೆ.

ಜುಲೈ 2014 ರಲ್ಲಿ ಮದನಿ ಅವರ ಆರೋಗ್ಯದ ತೊಂದರೆಗಳನ್ನು ಗಮನಿಸಿ ಸುಪ್ರೀಂ ಕೋರ್ಟ್‌ ಜಾಮೀನು ನೀಡಿತ್ತು. ಆಗ ವಿಧಿಸಿದ್ದ ಷರತ್ತು ಸಡಿಲಗೊಳಿಸುವಂತೆ ಮದನಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಮದನಿ ಬೆಂಗಳೂರಿನಲ್ಲಿಯೇ ಇರಬೇಕು, ನಗರ  ತೊರೆದು ಹೋಗಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಅಂದಿನಿಂದ ಅವರು ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

ಮದನಿ ಪರ ಇಂದು ಹಾಜರಿದ್ದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಅವರು ತಮ್ಮ ಕಕ್ಷಿದಾರರ ವಿಚಾರಣೆ ಮುಕ್ತಾಯಗೊಳಿಸುವಂತೆ ತಿಳಿಸಿದರು. ಅದಕ್ಕೆ ನ್ಯಾಯಾಲಯ ಸಮ್ಮತಿಸಿತು.

ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಒಬ್ಬರು ಮೃತಪಟ್ಟು 20 ಮಂದಿ ಗಾಯಗೊಂಡಿದ್ದರು. ಪೊಲೀಸರು ಸಲ್ಲಿಸಿರುವ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಮದನಿಯನ್ನು 31ನೇ ಆರೋಪಿ ಎಂದು ಪಟ್ಟಿ ಮಾಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com