ಅತ್ಯಾಚಾರಿಗಳ ಪುರುಷತ್ವ ಹರಣ: ಪ್ರತಿಕ್ರಿಯೆಗಾಗಿ ಕೇಂದ್ರಕ್ಕೆ 6 ವಾರಗಳ ಗಡುವು ವಿಧಿಸಿದ ಸುಪ್ರೀಂ

ಈ ಸಂಬಂಧ ದೇಶದಲ್ಲಿರುವ ವಿವಿಧ ಸಾಮಾಜಿಕ ವರ್ಗಗಳು, ಮಹಿಳಾ ವಕೀಲರಿಂದ ಸಲಹೆ ಪಡೆಯುವುದಕ್ಕಾಗಿ, ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯನ್ನು ಅರ್ಜಿದಾರರು ಹಂಚಿಕೊಳ್ಳಬಹುದು ಎಂದು ಪೀಠ ಹೇಳಿದೆ.
Supreme Court
Supreme Court
Published on

ಭಾರತದಲ್ಲಿ ಮಹಿಳೆಯರು, ಮಕ್ಕಳು ಹಾಗೂ ತೃತೀಯಲಿಂಗಿಗಳ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳಿಗೆ ಕಡಿವಾಣ ಹಾಕುವುದಕ್ಕಾಗಿ ಅತ್ಯಾಚಾರಿಗಳಿಗೆ ರಾಸಾಯನಿಕ ಪುರುಷತ್ವ ಹರಣ ಶಿಕ್ಷೆ ವಿಧಿಸುವುದು ಸೇರಿದಂತೆ, ದೇಶಾದ್ಯಂತ ಮಹಿಳೆಯರ ಸುರಕ್ಷತೆಗೆ ವಿವಿಧ ಮಾರ್ಗಸೂಚಿಗಳು ಹಾಗೂ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿದಂತೆ ಕೇಂದ್ರ ಸರ್ಕಾರ  6 ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್‌ ಗಡುವು ವಿಧಿಸಿದೆ [ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ಸಂಘ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ ದೇಶದಲ್ಲಿರುವ ವಿವಿಧ ಸಾಮಾಜಿಕ ವರ್ಗಗಳು, ಮಹಿಳಾ ವಕೀಲರಿಂದ ಸಲಹೆ ಪಡೆಯುವುದಕ್ಕಾಗಿ, ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯನ್ನು ಅರ್ಜಿದಾರರು ಹಂಚಿಕೊಳ್ಳಬಹುದು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಸಲಹೆ ನೀಡಿದೆ.  

Also Read
ಅತ್ಯಾಚಾರಿಗಳ ಪುರುಷತ್ವ ನಾಶ, ಜಾಮೀನು ರಹಿತ ಆದೇಶಕ್ಕೆ ಮನವಿ: ಕೇಂದ್ರ, ರಾಜ್ಯಗಳ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಕರ್ನಾಟಕ ಮಹಿಳಾ ವಕೀಲರ ಒಕ್ಕೂಟ ಇತ್ತೀಚೆಗೆ ಬೆಂಗಳೂರಿನ ವಕೀಲರ ಸಂಘದಲ್ಲಿ (ಎಎಬಿ) ಮಹಿಳಾ ವಕೀಲರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಕೋರಿದ್ದು ಅಂತಹ ಸಂಸ್ಥೆಗಳಿಂದಲೂ ಸಲಹೆ ಪಡೆಯುವಂತೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಾಲಯ ಇದೇ ವೇಳೆ ತಿಳಿಸಿತು.

ಪ್ರಕರಣದಲ್ಲಿ ವಿಸ್ತೃತವಾದ ವಿಚಾರಗಳಿದ್ದು ಅವುಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಹುದಾದಂತಹ ಕೆಲವು ಸಮಸ್ಯೆಗಳಿವೆ ಎಂದು ಪೀಠ ನುಡಿಯಿತು.

ಭಾರತದಲ್ಲಿ ಮಹಿಳೆಯರು, ಮಕ್ಕಳು ಹಾಗೂ ತೃತೀಯಲಿಂಗಿಗಳ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ನಿಭಾಯಿಸಲು ವಿವಿಧ ಕ್ರಮ  ಕೈಗೊಳ್ಳಬೇಕು ಎಂದು ಕೋರಿ ಸರ್ವೋಚ್ಚ ನ್ಯಾಯಾಲಯ ಮಹಿಳಾ ವಕೀಲರ ಸಂಘ (SCWLA) ಅರ್ಜಿ ಸಲ್ಲಿಸಿತ್ತು.

ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಘೋರ ಅಪರಾಧಗಳು ಹೆಚ್ಚಿರುವುದನ್ನು ಮನವಿ ಪ್ರಸ್ತಾಪಿಸಿತ್ತು.

ಅತ್ಯಾಚಾರದಂತಹ ಲೈಂಗಿಕ ಅಪರಾಧಗಳಿಗೆ ಶಿಕ್ಷೆಯಾಗಿ ರಾಸಾಯನಿಕವಾಗಿ ಪುರುಷತ್ವ ನಾಶ. ಮಹಿಳೆಯರ ವಿರುದ್ಧದ ಪೈಶಾಚಿಕ ಕೃತ್ಯಗಳಿಗೆ ಜಾಮೀನು ದೊರೆಯದಂತಹ ನಿಯಮ ಜಾರಿಗೊಳಿಸುವಂತೆ ಅದು ಮನವಿ ಮಾಡಿತ್ತು.

ಆನ್‌ಲೈನ್‌ನಲ್ಲಿನ ಅಶ್ಲೀಲತೆ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸೆನ್ಸಾರ್‌ ಮಾಡದ ಅಶ್ಲೀಲತೆಗೆ ಸಂಪೂರ್ಣ ನಿಷೇಧ ವಿಧಿಸಬೇಕು. ಅಂತಹ ವಸ್ತುವಿಷಯಗಳು ಸುಲಭವಾಗಿ ದೊರೆಯುತ್ತಿರುವುದು ದೇಶದಲ್ಲಿ ಅಪರಾಧ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮನವಿ ಆತಂಕ ವ್ಯಕ್ತಪಡಿಸಿತ್ತು.  

ಇದಲ್ಲದೆ, ಕೆಲಸದ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳ ಆರೋಪ ಹೊತ್ತಿರುವ ಶಾಸಕರು ಖುಲಾಸೆಯಾಗುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

Also Read
ಆರ್‌ ಜಿ ಕರ್ ಪ್ರಕರಣ: ಗಲ್ಲುಶಿಕ್ಷೆ ಕೋರಿದ್ದ ಮನವಿಯ ನಿರ್ವಹಣೆ ಕುರಿತು ತೀರ್ಪು ಕಾಯ್ದಿರಿಸಿದ ಕಲ್ಕತ್ತಾ ಹೈಕೋರ್ಟ್

ಡಿಸೆಂಬರ್ 16, 2024 ರಂದು ಪ್ರಕರಣದ ವಿಚಾರಣೆ ನಡೆದಾಗ ಸುಪ್ರೀಂ ಕೋರ್ಟ್‌ ಪ್ರತಿವಾದಿಗಳ ಪ್ರತಿಕ್ರಿಯೆ ಕೇಳಿತ್ತು. ಮಹಿಳಾ ಸಂಘದ ಪರ ಹಿರಿಯ ವಕೀಲ ಮಹಾಲಕ್ಷ್ಮಿ ಪಾವನಿ  ಅವರು ಕೆಲವು ಪ್ರತಿವಾದಿಗಳು ಇನ್ನೂ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಾಗಿದೆ ಎಂದು ಸೋಮವಾರ  ನ್ಯಾಯಾಲಯಕ್ಕೆ ತಿಳಿಸಿದರು.

ಮಹಿಳೆಯರ ವಿರುದ್ಧದ ಅಪರಾಧಗಳನ್ನು ಶಿಕ್ಷಿಸಲು ಕಠಿಣ ಕಾನೂನುಗಳಿದ್ದರೂ ಅವುಗಳು ಜಾರಿಯಾಗುತ್ತಿಲ್ಲ ಹೀಗಾಗಿ ಕಾನೂನು ಮಧ್ಯಸ್ಥಿಕೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 24, 2025ರಂದು ನಡೆಯಲಿದೆ.

Kannada Bar & Bench
kannada.barandbench.com