ಕಾಂಗ್ರೆಸ್‌ನ ಮಹಿಳಾ ನಾಯಕಿಯೊಬ್ಬರ ಘನತೆಗೆ ಧಕ್ಕೆ ತಂದ ಆರೋಪದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರಿಗೆ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಅಬಾಧಿತವಾಗಿ ಮುಂದುವರೆಸಿದೆ.[ಬಿ ವಿ ಶ್ರೀನಿವಾಸ್ ವರ್ಸಸ್ ಅಸ್ಸಾಂ ರಾಜ್ಯ].
ಶ್ರೀನಿವಾಸ್ ಅವರು ತನಿಖೆಗೆ ಸಹಕರಿಸಿದ್ದಾರೆ ಎಂಬುದನ್ನು ಪರಿಗಣಿಸಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಅರವಿಂದ್ ಕುಮಾರ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ನೇತೃತ್ವ ತ್ರಿಸದಸ್ಯ ಪೀಠವು ಆದೇಶ ಮಾಡಿದೆ. ಕಳೆದ ಮೇನಲ್ಲಿ ಸುಪ್ರೀಂ ಕೋರ್ಟ್ ಶ್ರೀನಿವಾಸ್‌ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ತಮ್ಮ ವಿರುದ್ಧದ ಎಫ್‌ಐಆರ್ ವಜಾ ಮಾಡಲು ಗುವಾಹಟಿ ಹೈಕೋರ್ಟ್ ನಿರಾಕರಿಸಿದ್ದ ಅರ್ಜಿಯನ್ನು ಪ್ರಶ್ನಿಸಿ ಶ್ರೀನಿವಾಸ್ ಮೇಲ್ಮನವಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಆದೇಶ ಮಾಡಿದೆ.
ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ಮಾಜಿ ಸಹೋದ್ಯೋಗಿ ಹಾಗೂ ಅಸ್ಸಾಂ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ನೀಡಿದ ದೂರಿನ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಶ್ರೀನಿವಾಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಆರೋಪಿತ ಅಪರಾಧಗಳನ್ನು ನಿರೂಪಿಸಲು ದೂರು ವಿಫಲವಾಗಿದೆ. ಛತ್ತೀಸ್‌ಗಢದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಲು ವ್ಯಾಪ್ತಿ ಹೊಂದಿಲ್ಲ ಎಂಬುದು ಶ್ರೀನಿವಾಸ್ ವಾದವಾಗಿದೆ.