ಏರ್ ಟಿಕೆಟ್ ಮರುಪಾವತಿ: ಡಿಜಿಸಿಎ ಶಿಫಾರಸಿಗೆ ಸುಪ್ರೀಂ ಸಮ್ಮತಿ; ಏಜೆಂಟರು ಟಿಕೆಟ್‌ ಕಾಯ್ದಿರಿಸಿದ್ದರೆ ಅವರಿಗೇ ಪಾವತಿ

ಟ್ರಾವೆಲ್ ಏಜೆಂಟರ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಏಜೆಂಟರಿಗೇ ಹಣವನ್ನು ಮರುಪಾವತಿ ಮಾಡಲಾಗುವುದು, ನೇರವಾಗಿ ಪ್ರಯಾಣಿಕರಿಗೆ ನೀಡಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಿಮಾನಯಾನ ಟಿಕೆಟ್ ಮರುಪಾವತಿ
ವಿಮಾನಯಾನ ಟಿಕೆಟ್ ಮರುಪಾವತಿ

ಕೋವಿಡ್- 19 ಲಾಕ್‌ಡೌನ್ ಸಮಯದಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳಿಗಾಗಿ ಪ್ರಯಾಣಿಕರಿಗೆ ವಿಮಾನ ಪ್ರಯಾಣ ದರ ಮರುಪಾವತಿ ಮಾಡುವ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನೀಡಿದ ಎಲ್ಲ ಶಿಫಾರಸುಗಳನ್ನು ಸುಪ್ರೀಂಕೋರ್ಟ್ ಗುರುವಾರ ಅಂಗೀಕರಿಸಿದೆ.

 ನ್ಯಾಯಮೂರ್ತಿಗಳಾದ ಆರ್ ಸುಭಾಷ್ ರೆಡ್ಡಿ, ಅಶೋಕ್ ಭೂಷಣ್ ಮತ್ತು ಎಂ ಆರ್ ಶಾ
ನ್ಯಾಯಮೂರ್ತಿಗಳಾದ ಆರ್ ಸುಭಾಷ್ ರೆಡ್ಡಿ, ಅಶೋಕ್ ಭೂಷಣ್ ಮತ್ತು ಎಂ ಆರ್ ಶಾ

ಕಳೆದ ವಾರ ನಡೆದ ವಿಚಾರಣೆ ವೇಳೆ, ‘ಲಾಕ್‌ಡೌನ್ ಸಮಯದಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಟ್ರಾವೆಲ್ ಏಜೆಂಟರು ಕ್ರೆಡಿಟ್ ಶೆಲ್ (ಪ್ರಯಾಣಿಕರಿಗೆ ಹಣದ ಬದಲಿಗೆ ಮತ್ತೆ ಬುಕ್ಕಿಂಗ್ ಅವಕಾಶ ಕಲ್ಪಿಸಲು ನೀಡುವ ಸೌಲಭ್ಯ) ಪಡೆಯಲಾಗದು’ ಎಂಬ ಕೇಂದ್ರದ ನಿಲುವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸ್ಪಷ್ಟಪಡಿಸಿದ್ದರು.

ಏಜೆಂಟರು ಮತ್ತು ಪ್ರಯಾಣಿಕರ ನಡುವಿನ ಒಪ್ಪಂದದ ಕಟ್ಟುಪಾಡುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದೂ ಕೂಡ ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿತ್ತು.

Also Read
ಲಾಕ್‌ಡೌನ್ ಸಮಯದಲ್ಲಿ ವಿಮಾನಯಾನ ರದ್ದು: ಟಿಕೆಟ್ ಮರುಪಾವತಿ ವಿಧಾನ ಕುರಿತು ಸ್ಪಷ್ಟನೆ ನೀಡಿದ ಡಿಜಿಸಿಎ

"ನಾವು ಎರಡು ಅಂಗಗಳನ್ನಷ್ಟೇ ಗುರುತಿಸಬಹುದು ಏಕೆಂದರೆ ಅವು ಗುರುತಿಸಬಹುದಾದವುಗಳು. ಆ ಎರಡು ಅಂಗಗಳೆಂದರೆ ಪ್ರಯಾಣಿಕರು ಮತ್ತು ವಿಮಾನಯಾನ ಸಂಸ್ಥೆಗಳು. ಪ್ರಯಾಣಿಕರು ಹಣವನ್ನು ಮರಳಿ ಪಡೆಯುತ್ತಾರೆಯೇ ಅಥವಾ ವರ್ಗಾಯಿಸಬಹುದಾದ ಟಿಕೆಟ್ ಪಡೆಯುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಯತ್ನಿಸಿದ್ದೇವೆ."

"ಏಜೆಂಟರ ಮುಂದೆ ಟಿಕೆಟ್ ಒಪ್ಪಿಸುವ ಮೂಲಕ ಪ್ರಯಾಣಿಕರು ತಮ್ಮ ಹಣವನ್ನು ಮರಳಿ ಪಡೆದರೆ ನಮಗೆ ಯಾವುದೇ ಸಮಸ್ಯೆ ಇಲ್ಲ." ಎಂದು ಮೆಹ್ತಾ ತಿಳಿಸಿದರು.

ಟ್ರಾವೆಲ್ ಏಜೆಂಟರ ಪರವಾಗಿ ಹಾಜರಾದ ಹಿರಿಯ ವಕೀಲ ಪಲ್ಲವ್ ಸಿಸೋಡಿಯಾ ಅವರು ಪ್ರಯಾಣಿಕರು ಹಣವನ್ನು ಪಾವತಿಸಿದ್ದು ವಿಮಾನಯಾನ ಸಂಸ್ಥೆಗೆ ಅಲ್ಲ, ಏಜೆಂಟರಿಗೆ ಎಂದು ಸೂಚಿಸಿದರು. ಏಜೆಂಟರು ವಿಮಾನಯಾನ ಸಂಸ್ಥೆಗೆ ಮುಂಚಿತವಾಗಿ ಪಾವತಿಸಿದ ಅನೇಕ ಉದಾಹರಣೆಗಳಿವೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಗೋ ಏರ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅರವಿಂದ ದಾತರ್, “ವಿಮಾನಯಾನ ಸಂಸ್ಥೆಗಳು ಭಾರಿ ನಷ್ಟ ಎದುರಿಸುತ್ತಿವೆ ಮತ್ತು ‘ನಿಷ್ಕ್ರಿಯ ದುಡಿಯುವ ಬಂಡವಾಳ’ ಹೊಂದಿದ್ದು, ಇದರ ಜೊತೆಗೆ ಮರುಪಾವತಿ ಹೊಣೆಯ ಹೊರೆಯನ್ನೂ ಹೊರಬೇಕಿದೆ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿ ಭೂಷಣ್, "ಆದರೆ ಅದು ನಿಮ್ಮ ವಿಮಾನಯಾನ ಸಂಸ್ಥೆಯ ಸಮಸ್ಯೆ, ಪ್ರಯಾಣಿಕರ ಹಣವನ್ನು ನೀವು ಹೇಗೆ ಹಿಡಿದಿಟ್ಟುಕೊಳ್ಳಬಹುದು?" ಎಂದು ಕೇಳಿದರು.

ಹಿರಿಯ ವಕೀಲ ಆರ್ಯಮಾ ಸುಂದರಂ ಅವರು, 'ವಿಮಾನಯಾನ ಸಂಸ್ಥೆಗಳು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದರಿಂದ ಪ್ರಯಾಣಿಕರ ಹಕ್ಕುಗಳಿಗೆ ಧಕ್ಕೆಯಾಗಬಾರದು' ಎಂದು ವಾದಿಸಿದರು.

ಆಗ ದಾತರ್, "ನಾವು ಮರುಪಾವತಿ ಮಾಡುವುದಿಲ್ಲ ಎಂದು ಹೇಳುತ್ತಿಲ್ಲ, ಆದರೆ 2021ರ ಮಾರ್ಚ್ 31ರೊಳಗೆ ಎಂಬುದು ಅವಾಸ್ತವಿಕ ಗಡವಾಗಿದೆ. ಇದರಿಂದ ವಿನಾಯ್ತಿ ನೀಡಬೇಕೆಂದಷ್ಟೇ ನಾವು ಕೋರುತ್ತಿದ್ದೇವೆ” ಎಂದರು.

ಗೋ ಏರ್ ಮರುಪಾವತಿಗಾಗಿ ₹ 300 ಕೋಟಿ ವಿನಿಯೋಗಿಸಬೇಕಿದ್ದು ಈಗಾಗಲೇ ₹ 40 ಕೋಟಿಯಷ್ಟು ಟಿಕೆಟ್ ಹಣವನ್ನು ಹಿಂತಿರುಗಿಸಲಾಗಿದೆ ಎಂದು ಅವರು ಹೇಳಿದರು.

ಲಾಕ್‌ಡೌನ್ ಸಮಯದಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳಿಗೆ ವಿಮಾನಯಾನ ಶುಲ್ಕವನ್ನು ಮರುಪಾವತಿಸುವುದನ್ನು ನೇರವಾಗಿ ಪ್ರಯಾಣಿಕರಿಗೆ ನೀಡಿದರೆ ಟ್ರಾವೆಲ್ ಏಜೆಂಟರು ತಮಗೆ ಆಗುವ ನಷ್ಟ ಹೇಗೆ ಸರಿದೂಗಿಸಿಕೊಳ್ಳುತ್ತಾರೆ ಎಂಬ ಕುರಿತು ಹೆಚ್ಚುವರಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಹಿಂದೆ ಕೇಂದ್ರಕ್ಕೆ ಸೂಚಿಸಿತ್ತು.

ಇದಕ್ಕೆ ಪ್ರತಿಕ್ರಿಯೆಯಾಗಿ, ಲಾಕ್‌ಡೌನ್ ಅವಧಿಯಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಮಾತ್ರ ಕ್ರೆಡಿಟ್ ಶೆಲ್ ಸೌಲಭ್ಯ ಅನ್ವಯಿಸುತ್ತದೆ. ಟ್ರಾವೆಲ್ ಏಜೆಂಟರಿಗೆ ಅಂತಹ ಯಾವುದೇ ಕ್ರೆಡಿಟ್ ಶೆಲ್ ನೀಡಲಾಗುವುದಿಲ್ಲ ಎಂದು ಡಿಜಿಸಿಎ ಸುಪ್ರೀಂಕೋರ್ಟ್‌ಗೆ ತಿಳಿಸಿತು.

ಭಾರತ ಮೂಲದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಮಾತ್ರ ವಿಮಾನ ಟಿಕೆಟ್ ಮರುಪಾವತಿ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಭಾರತದಲ್ಲಿಯೇ ಕಾರ್ಯ ನಿರ್ವಹಿಸುತ್ತಿರಲಿ ಅಥವಾ ಅಂತರರಾಷ್ಟ್ರೀಯವಾಗಿ ಸೇವೆ ಸಲ್ಲಿಸುತ್ತಿರಲಿ, ಭಾರತ ಮೂಲದ್ದಲ್ಲದ ವಿಮಾನ ಟಿಕೆಟ್‌ಗಳಿಗೆ ಮರುಪಾವತಿ ದೊರೆಯುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com