ಆರೋಗ್ಯ ಸಚಿವಾಲಯ ಪ್ರಸ್ತಾಪಿಸಿದ ನೀಟ್-ಎಂಡಿಎಸ್ ಕೌನ್ಸೆಲಿಂಗ್ ವೇಳಾಪಟ್ಟಿಗೆ ಸುಪ್ರೀಂ ಕೋರ್ಟ್ ಅಸ್ತು

ಕೌನ್ಸೆಲಿಂಗ್ ವೇಳಾಪಟ್ಟಿ ನಿಗದಿಪಡಿಸುವಲ್ಲಿ ಉಂಟಾದ ವಿಳಂಬ ಉದ್ದೇಶಪೂರ್ವಕವಾದುದಲ್ಲ ಎಂದು ಆರೋಗ್ಯ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಆರೋಗ್ಯ ಸಚಿವಾಲಯ ಪ್ರಸ್ತಾಪಿಸಿದ ನೀಟ್-ಎಂಡಿಎಸ್ ಕೌನ್ಸೆಲಿಂಗ್ ವೇಳಾಪಟ್ಟಿಗೆ ಸುಪ್ರೀಂ ಕೋರ್ಟ್ ಅಸ್ತು

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮತ್ತು ದಂತ ವಿಜ್ಞಾನ ಸ್ನಾತಕೋತ್ತರ (ಎಂಡಿಎಸ್) ಕೋರ್ಸ್‌ಗಳಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಕೌನ್ಸೆಲಿಂಗ್ ವೇಳಾಪಟ್ಟಿ ನಿಗದಿಪಡಿಸುವಲ್ಲಿ ಉಂಟಾದ ವಿಳಂಬ ಉದ್ದೇಶಪೂರ್ವಕವಾದುದಲ್ಲ ಎಂದು ಆರೋಗ್ಯ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ಇದೇ ವೇಳೆ ತಿಳಿಸಿದೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಹಾಗೂ ಎಂ ಆರ್‌ ಶಾ ಅವರಿದ್ದ ಪೀಠ ಅಫಿಡವಿಟ್ ಸ್ವೀಕರಿಸಿ ಪ್ರಕರಣವನ್ನು ಬುಧವಾರ ಮುಕ್ತಾಯಗೊಳಿಸಿತು.

ಪ್ರವೇಶ ಪರೀಕ್ಷೆಯನ್ನು 16 ಡಿಸೆಂಬರ್ 2020ರಂದು ನಡೆಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಅರ್ಜಿಯಲ್ಲಿ ಹೇಳಲಾಗಿತ್ತು. ಅದರ ನಂತರ 31 ಡಿಸೆಂಬರ್ 2020ರಂದು ಫಲಿತಾಂಶಗಳನ್ನು ಘೋಷಿಸಲಾಯಿತು. ಆದರೆ ಫಲಿತಾಂಶಗಳ ಘೋಷಣೆಯ ನಂತರವೂ ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ವಿವರಿಸಲಾಗಿದೆ.

"ಕೌನ್ಸೆಲಿಂಗ್ ವೇಳಾಪಟ್ಟಿಯ ಬಗ್ಗೆ ಮಾಹಿತಿ ಪಡೆಯಲು ಅರ್ಜಿದಾರರು ಪ್ರತಿವಾದಿಗಳೊಂದಿಗೆ ಸಂಪರ್ಕ ಸಾಧಿಸಲು ಹರಸಾಹಸಪಟ್ಟರೂ ಇಂದಿನವರೆಗೂ ಕೌನ್ಸೆಲಿಂಗ್‌ ಬಗ್ಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ" ಎಂದು ವಕೀಲರಾದ ತಾನ್ವಿ ದುಬೆ ಮತ್ತು ಚಾರು ಮಾಥುರ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿತ್ತು.

ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಜುಲೈ 2ರಂದು ನೋಟಿಸ್ ನೀಡಿತ್ತು. ತರುವಾಯ, ಕೇಂದ್ರ ಸರ್ಕಾರ ಒಂದು ನಿರ್ಧಾರಕ್ಕೆ ಬಾರದೇ ವಿಳಂಬ ಧೋರಣೆ ಅನುಸರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈ ವಾರದೊಳಗೆ ಅದನ್ನು ಪೂರ್ಣಗೊಳಿಸುವಂತೆ ಸೂಚಿಸಿತ್ತು.

Also Read
ನೀಟ್‌ ನಂತರ ತಮಿಳುನಾಡಿನ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯಕ್ಕೆ ಇಳಿಕೆ

"ನೀವು ಸುಮ್ಮನೆ ವಿಳಂಬ ಮಾಡಿದ್ದೀರಿ. ಈಗ ಹೇಳಿಕೆ ನೀಡಿ. ಆರೋಗ್ಯ ಸಚಿವಾಲಯ ಬರೀ ವಿಳಂಬ ಧೋರಣೆ ಅನುಸರಿಸುತ್ತಿದೆ. ಇವು ಆನ್ವಯಿಕ ಕೋರ್ಸ್‌ಗಳಾಗಿದ್ದು ಈ ವೈದ್ಯರು ರೋಗಿಗಳ ಸೇವೆಯಲ್ಲಿ ತೊಡಗುತ್ತಾರೆ” ಎಂದು ನ್ಯಾ. ಚಂದ್ರಚೂಡ್‌ ಹೇಳಿದ್ದರು.

ನಂತರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ “ಅಸ್ತಿತ್ವದಲ್ಲಿರುವ ಮೀಸಲಾತಿ ನೀತಿಗಳ ಪ್ರಕಾರ 4 ವಾರಗಳಲ್ಲಿ ಕೌನ್ಸೆಲಿಂಗ್ ನಡೆಸಲಾಗುವುದು”‌ ಎಂದು ಜುಲೈ ಮೂರನೇ ವಾರದಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

Related Stories

No stories found.
Kannada Bar & Bench
kannada.barandbench.com