ಎಫ್ಐಆರ್ ವಿಳಂಬವಾದಾಗ ನ್ಯಾಯಾಲಯಗಳು ಎಚ್ಚರಿಕೆಯಿಂದ ಸಾಕ್ಷ್ಯ ಪರಿಶೀಲಿಸಬೇಕು ಎಂದ ಸುಪ್ರೀಂ: ಕೊಲೆ ಆರೋಪಿಗಳ ಖುಲಾಸೆ

ಹೈಕೋರ್ಟ್, 1989ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ ಎಂದ ಸುಪ್ರೀಂ ಕೋರ್ಟ್‌ ಪೀಠ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿತು.
ಎಫ್ಐಆರ್ ವಿಳಂಬವಾದಾಗ ನ್ಯಾಯಾಲಯಗಳು ಎಚ್ಚರಿಕೆಯಿಂದ ಸಾಕ್ಷ್ಯ ಪರಿಶೀಲಿಸಬೇಕು ಎಂದ ಸುಪ್ರೀಂ: ಕೊಲೆ ಆರೋಪಿಗಳ ಖುಲಾಸೆ
A1

ಸುಮಾರು ನಾಲ್ಕು ದಶಕಗಳ ಹಿಂದಿನ ಅಂದರೆ 1989ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಖುಲಾಸೆಗೊಳಿಸಿದೆ [ಹರಿಲಾಲ್ ಮತ್ತು ಛತ್ತೀಸ್‌ಗಢ ಸರ್ಕಾರ ನಡುವಣ ಪ್ರಕರಣ].

ಛತ್ತೀಸ್‌ಗಢ ಹೈಕೋರ್ಟ್‌, 1989ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಸೆಪ್ಟೆಂಬರ್ 5ರಂದು ನೀಡಿದ ತೀರ್ಪಿನಲ್ಲಿ ಶಿಕ್ಷೆಯನ್ನು ರದ್ದುಪಡಿಸಿರುವುದಾಗಿ ಹೇಳಿದೆ.

ಕೊಲೆಯಾದ ಮರುದಿನ ಎಫ್ಐಆರ್‌ ದಾಖಲಾಗಿರುವುದನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯ ಎಫ್‌ಐಆರ್ ದಾಖಲಿಸುವಲ್ಲಿ ವಿವರಿಸಲಾಗದ ವಿಳಂಬ ಇದ್ದರೆ, ಪ್ರಕರಣವನ್ನು ವಿಶ್ಲೇಷಿಸುವಲ್ಲಿ ನ್ಯಾಯಾಲಯಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ಬುದ್ಧಿಮಾತು ಹೇಳಿತು.

 ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ಇದು ವಿಳಂಬವಾಗಿ ದಾಖಲಾದ ಎಫ್‌ಐಆರ್ ಎಂಬ ಅಂಶವನ್ನು ನಿರ್ಲಕ್ಷಿಸಲಾಗದು.

  • ಎಫ್‌ಐಆರ್ ವಿಳಂಬವಾದಾಗ, ಸರಿಯಾದ ವಿವರಣೆ ಇಲ್ಲದಿದ್ದಲ್ಲಿ, ನ್ಯಾಯಾಲಯಗಳು ಜಾಗೃತವಾಗಿರಬೇಕು.

  • ಪ್ರಾಸಿಕ್ಯೂಷನ್ ತನ್ನ ವಾದವನ್ನು ಒಪ್ಪಗೊಳಿಸದಂತೆ ಮಾಡಲು ಪುರಾವೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು.

  • ವಿಳಂಬ ಹೆಚ್ಚಿದಂತೆಲ್ಲಾ ಕಲ್ಪನೆ ಮತ್ತು ಊಹೆಗೆ ಆಸ್ಪದ ನೀಡಿದಂತಾಗುತ್ತದೆ.

  • ಘಟನೆಗೆ ಯಾರೂ ಸಾಕ್ಷಿಯಾಗದಿರುವ ಸಂಭವನೀಯತೆ ಹೆಚ್ಚಿರುವ ಸಂದರ್ಭದಲ್ಲಿ, ಅಂದರೆ ರಾತ್ರಿ ಹೊತ್ತು ಮುಕ್ತ ಸ್ಥಳ ಇಲ್ಲವೇ  ಸಾರ್ವಜನಿಕ ರಸ್ತೆಯಲ್ಲಿ ಕೃತ್ಯಗಳು ನಡೆದಾಗ ಎಚ್ಚರ ವಹಿಸಬೇಕು.

ಕೊಲೆ ಪ್ರಕರಣದ ಆರೋಪಿಗಳಿಬ್ಬರಿಗೆ 1991ರಲ್ಲಿ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು 2010ರಲ್ಲಿ ಛತ್ತೀಸ್‌ಗಢ ಹೈಕೋರ್ಟ್‌ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಈ ಅವಲೋಕನಗಳನ್ನು ಮಾಡಿದೆ.

Kannada Bar & Bench
kannada.barandbench.com