ಅದಾನಿ ಪವರ್ ಪ್ರಕರಣ ವಿಚಾರಣೆಗೆ ಪಟ್ಟಿ ಮಾಡಲು ಹಿಂದೇಟು: ಹುಬ್ಬೇರಿಸಿದ ಸುಪ್ರೀಂ ಕೋರ್ಟ್

"ಸಹಾಯಕ ರಿಜಿಸ್ಟ್ರಾರ್ ಅವರು ಪಟ್ಟಿ ಮಾಡದಂತೆ ಆದೇಶವಿದೆ ಎಂಬುದಾಗಿ ಹೇಳಿದ್ದಾರೆ. ಇದರ ಹಿಂದೆ ಸರ್ಕಾರದ ಕೈವಾಡವಿದ್ದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ" ಎಂದು ಹಿರಿಯ ನ್ಯಾಯವಾದಿ ದುಶ್ಯಂತ್ ದವೆ ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್
ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್

ಅದಾನಿ ಪವರ್‌ ಕಂಪೆನಿಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿ ವಿಚಾರಣೆಗೆ ಪಟ್ಟಿ ಮಾಡದಿರುವುದು ಸರ್ವೋಚ್ಚ ನ್ಯಾಯಾಲಯದ ಹುಬ್ಬೇರುವಂತೆ ಮಾಡಿದೆ (ಜೈಪುರ ವಿದ್ಯುತ್ ವಿತರಣ್‌ ನಿಗಮ್ ಲಿಮಿಟೆಡ್ ಮತ್ತು ಅದಾನಿ ಪವರ್ ರಾಜಸ್ಥಾನ್ ಲಿಮಿಟೆಡ್ ನಡುವಣ ಪ್ರಕರಣ).

ಜೈಪುರ ವಿದ್ಯುತ್ ವಿತರಣ್‌ ನಿಗಮ್ ಲಿಮಿಟೆಡ್ ಪರವಾಗಿ ಹಾಜರಾದ ಹಿರಿಯ ವಕೀಲ ದುಶ್ಯಂತ್ ದವೆ ಅವರು ಈ ವಿಚಾರವನ್ನು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠದೆದುರು ಪ್ರಸ್ತಾಪಿಸಿದರು.

ಅದಾನಿ ಪವರ್‌ ವಿರುದ್ಧದ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲು ರಿಜಿಸ್ಟ್ರಿ ವಿಫಲವಾದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ನ್ಯಾಯಾಲಯ ನ್ಯಾಯಾಂಗ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು. ಜೊತೆಗೆ ಹೈಕೋರ್ಟ್‌ಗಳಲ್ಲಿ ಇಂತಹ ವಿಳಂಬಗಳು ನಡೆಯದು ಎಂದು ಒತ್ತಿ ಹೇಳಿದರು. ಪ್ರಕರಣ ಪಟ್ಟಿ ಮಾಡದಂತೆ ಸೂಚನೆಗಳು ಬಂದಿವೆ ಎಂದು ಸಹಾಯಕ ರಿಜಿಸ್ಟ್ರಾರ್ ಹೇಳಿರುವುದನ್ನು ಪ್ರಸ್ತಾಪಿಸಿದರು.

"ಅದನ್ನು ಪಟ್ಟಿ ಮಾಡದಂತೆ ತನಗೆ ನಿರ್ದೇಶನವಿದೆ ಎಂದು ಸಹಾಯಕ ರಿಜಿಸ್ಟ್ರಾರ್ ಬಹಳ ಧೈರ್ಯದಿಂದ ಹೇಳುತ್ತಾರೆ" ಎಂಬುದಾಗಿ ದವೆ ವಿವರಿಸಿದರು.

"ಯಾಕೆ? ಯಾರ ಆಜ್ಞೆಯ ಮೇರೆಗೆ? ಹಾಗೆ ನಿರ್ದೇಶಿಸಿದ್ದು ಯಾರು?" ಎಂದು ಪೀಠ ಪ್ರಶ್ನಿಸಿತು. ಆಗ ದವೆ "ನನಗೆ ಗೊತ್ತಿಲ್ಲ. ನ್ಯಾಯಾಲಯ ಕೊಟ್ಟರೂ ರಿಜಿಸ್ಟ್ರಿ ಕೊಡುವುದಿಲ್ಲ ಎಂಬಂತಾಗಿದೆ. ಉಚ್ಚ ನ್ಯಾಯಾಲಯದಲ್ಲಿ ಇದು ನಡೆಯುವುದಿಲ್ಲ. ಸರ್ಕಾರ ಇದನ್ನು ಮಾಡಿದ್ದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ... ಆದರೆ ರಿಜಿಸ್ಟ್ರಿ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದಾಗ, ಅದನ್ನು ಗಂಭೀರವಾಗಿ ಪರಿಗಣಿಸಬೇಕಲ್ಲವೇ? ತಾವು ನ್ಯಾಯಾಂಗ ಆದೇಶ ಹೊರಡಿಸಬೇಕು" ಎಂದು ದವೆ ಹೇಳಿದರು.

"ನಾವು ಅದನ್ನು ಪತ್ತೆ ಹಚ್ಚುತ್ತೇವೆ ನೀವು 2 ಗಂಟೆಗೆ ಬನ್ನಿ" ಎಂದು ನ್ಯಾ. ಬೋಸ್ ಪ್ರತಿಕ್ರಿಯಿಸಿದಾಗ ಪ್ರಕರಣವನ್ನು ಇಂದೇ ಪರಿಗಣಿಸುವಂತೆ ದವೆ ಮನವಿ ಮಾಡಿದರು.

"ಇದನ್ನು ಇಂದೇ ಪಟ್ಟಿ ಮಾಡಲು ನಿರ್ದೇಶಿಸಬೇಕು. ಏಕೆಂದರೆ ಅತೀವ ಸಂಕಷ್ಟದ ಪ್ರಕರಣ ಇದಾಗಿದ್ದು ನ್ಯಾಯಾಲಯ ಇಂದೇ ಇದನ್ನು ಪಟ್ಟಿ ಮಾಡಲಿ. ಇಂಥದ್ದೇ ಪ್ರಕರಣವೊಂದರಲ್ಲಿ ನ್ಯಾ. ಓಕಾ ಅವರು ರಿಜಿಸ್ಟ್ರಿಗೆ ನೋಟಿಸ್‌ ನೀಡುವಂತಾಗಿತ್ತು. ಇದು ಸಂಸ್ಥೆಯಾಗಿ ನಮ್ಮ ಬಗ್ಗೆ ಬಹಳ ಕೆಟ್ಟ ಮಾತುಗಳು ಕೇಳಿ ಬರುವಂತೆ ಮಾಡುತ್ತದೆ" ಎಂದರು.

ಆಗ ಪೀಠವು "ನಾವು ಅದನ್ನು ನೋಡಿಕೊಳ್ಳುತ್ತೇವೆ" ಎಂದು ದವೆ ಅವರಿಗೆ ಭರವಸೆ ನೀಡಿತು. ನಂತರ ನಾಳೆ ಉಳಿದ ಪ್ರಕರಣಗಳಿಗಿಂತಲೂ ಮೊದಲಿಗೆ ಈ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಅದು ತಿಳಿಸಿತು.

ಈ ಮಧ್ಯೆ ನ್ಯಾಯಾಲಯದಲ್ಲಿದ್ದ ಮತ್ತೊಬ್ಬ ಕಕ್ಷಿದಾರರು ಕೂಡ ತಾವು ಇದೇ ಬಗೆಯ ಸಮಸ್ಯೆ ಎದುರಿಸುತ್ತಿರುವುದಾಗಿ ತಿಳಿಸಿದರು. ಅವರ ಪ್ರಕರಣ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಬುಧವಾರ ಈ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಮುಖ್ಯ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡಿದ್ದರೂ ಅದಾನಿ ಪವರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪಟ್ಟಿ ಮಾಡಲಾಗಿದೆ ಎಂದು ಜೈಪುರ ವಿದ್ಯುತ್ ವಿತರಣ್‌ ನಿಗಮ್ ಲಿಮಿಟೆಡ್ ಮಾಡಿದ ಆರೋಪಗಳಿಗೆ ಇಂದು ಉಲ್ಲೇಖಿಸಲಾದ ಅದಾನಿ ಪ್ರಕರಣ ಸಂಬಂಧಿಸಿದೆ.

Related Stories

No stories found.
Kannada Bar & Bench
kannada.barandbench.com