ಗಡಿಯಾರ ಚಿಹ್ನೆ ಇರುವ ಯಾವುದೇ ಚುನಾವಣಾ ಜಾಹೀರಾತುಗಳಲ್ಲಿ ಚಿಹ್ನೆ ಹಂಚಿಕೆ ವಿವಾದ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ ಎಂಬುದನ್ನು ಸಾರುವಂತಹ ಹಕ್ಕು ನಿರಾಕರಣೆ ಪ್ರದರ್ಶಿಸುವಂತೆ ತಾನು ಈ ಹಿಂದೆ ನೀಡಿದ್ದ ಆದೇಶವನ್ನು ಪಾಲಿಸುವ ಬಗ್ಗೆ ಮುಚ್ಚಳಿಕೆ ಬರೆದುಕೊಡುವಂತೆ ಎನ್‌ಸಿಪಿಯ ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ [ಶರದ್ ಪವಾರ್ ಮತ್ತು ಅಜಿತ್ ಅನಂತರಾವ್ ಪವಾರ್ ಇನ್ನಿತರರ ನಡುವಣ ಪ್ರಕರಣ].
ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ದೀಪಂಕರ್ ದತ್ತಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಚಿಹ್ನೆ ಹಂಚಿಕೆ ವಿವಾದ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ ಎಂಬುದನ್ನು ಸಾರುವಂತಹ ಹಕ್ಕು ನಿರಾಕರಣೆ ಇಲ್ಲದೆ ಅಜಿತ್ ಪವಾರ್ ಅವರು ಗಡಿಯಾರದ ಚಿಹ್ನೆ ಬಳಸಿಕೊಂಡು ಮತದಾರರ ಮನಸ್ಸಿನಲ್ಲಿ 'ದೊಡ್ಡ ಪ್ರಮಾಣದ ಗೊಂದಲ' ಮೂಡಿಸಿದ್ದಾರೆ ಎಂದು ಶರದ್ ಪವಾರ್ ಬಣ ದೂರಿತ್ತು.
ನಿಜವಾದ ಎನ್‌ಸಿಪಿ ಯಾರದ್ದು ಎಂಬ ಕುರಿತಂತೆ ಕಾನೂನು ಸಮರ ನಡೆಯತ್ತಿರುವಾಗಲೇ ತುತ್ತೂರಿ ಊದುವ ವ್ಯಕ್ತಿಯ ಚಿಹ್ನೆಯನ್ನು ಶರದ್ ಪವಾರ್ ಬಣಕ್ಕೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು
ಎರಡೂ ಬಣಗಳಿಗೆ ಮುಜುಗರವಾಗದಂತೆ ತಾನು ಈ ಹಿಂದೆ ನೀಡಿದ್ದ ಸೂಚನೆಗಳನ್ನು ಪಾಲಿಸುವಂತೆ ಇಂದು ನ್ಯಾಯಾಲಯ ಅಜಿತ್ ಪವಾರ್ ಹಾಗೂ ಶರದ್ ಪವಾರ್ ಬಣಗಳಿಗೆ ಸೂಚಿಸಿದೆ.
“ಪ್ರಸ್ತುತ ಹಾಗೂ ಚುನಾವಣೆಯ ಕೊನೆಯವರೆಗೂ ತಾನು ನೀಡಿರುವ ನಿರ್ದೇಶನ ಉಲ್ಲಂಘಿಸುವುದಿಲ್ಲ ಎಂದು ಹೊಸದಾಗಿ ಮುಚ್ಚಳಿಕೆ ಬರೆದುಕೊಡಿ. ನ್ಯಾಯಾಲಯದ ನಿರ್ದೇಶನ ಪಾಲಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ. ದಯವಿಟ್ಟು ನೀವೇ ಮುಜುಗರದ ಸನ್ನಿವೇಶ ತಂದುಕೊಳ್ಳಬೇಡಿ” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಗಡಿಯಾರದ ಬದಲು ಹೊಸ ಚಿಹ್ನೆಯನ್ನು ಅಜಿತ್ ಪವಾರ್ ಬಣಕ್ಕೆ ನೀಡಬೇಕೆಂದು ಶರದ್ ಪವಾರ್ ಬಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೋಟಿಸ್ ನೀಡಿದೆ.
ಶರದ್ ಪವಾರ್ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಅಜಿತ್ ಪವಾರ್ ಬಣ ಹಕ್ಕು ನಿರಾಕರಣೆ ಇಲ್ಲದೆ ಗಡಿಯಾರ ಚಿಹ್ನೆ ದುರುಪಯೋಗಪಡಿಸಿಕೊಂಡು ಮತದಾರರ ದಿಕ್ಕು ತಪ್ಪಿಸುತ್ತಿದೆ. ಆ ಮೂಲಕ ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಯಾವುದು ನಿಜವಾದ ಬಣ ಎಂಬ ಕುರಿತು ಅಂತಿಮ ತೀರ್ಪು ನೀಡುವಾಗ ಗಡಿಯಾರ ಚಿಹ್ನೆಯನ್ನು ಅಜಿತ್ ಪವಾರ್ ಬಣಕ್ಕೆ ನೀಡಬಾರದು ಎಂದರು.
ಅಜಿತ್ ಪವಾರ್ ಬಣವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಬಲ್ಬೀರ್ ಸಿಂಗ್ ಅವರು ಶರದ್ ಪವಾರ್ ಬಣದ ಆರೋಪಗಳನ್ನು ನಿರಾಕರಿಸಿದರು. ಸಿಂಘ್ವಿ ಜಾಹೀರಾತು ಚಿತ್ರಗಳ ಆಯ್ದ ಭಾಗವನ್ನಷ್ಟೇ ತೋರಿಸುತ್ತಿದ್ದಾರೆ ಎಂದರು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 4 ರಂದು ನಡೆಯಲಿದೆ.