ಇಪ್ಪತ್ತಾರನೇ ವಾರದ ಗರ್ಭಿಣಿಯಾಗಿದ್ದ ವಿಹಾಹಿತ ಮಹಿಳೆಯ ವೈದ್ಯಕೀಯ ಗರ್ಭಪಾತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಭಿನ್ನ ತೀರ್ಪು ಹೊರಬಿದ್ದಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಸರ್ವೋಚ್ಚ ನ್ಯಾಯಾಲಯದ ನಾಲ್ಕನೇ ಸರ್ವ ಮಹಿಳಾ ಪೀಠವಾಗಿದ್ದು, ಪ್ರಕರಣದಲ್ಲಿ ಭಿನ್ನ ತೀರ್ಪನ್ನು ನೀಡಿದೆ.
ಮೂರನೇ ಬಾರಿಗೆ ಗರ್ಭಧರಿಸಿದ್ದ ವಿವಾಹಿತ ಮಹಿಳೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ವೈದ್ಯಕೀಯ ಗರ್ಭಪಾತ ಕಾಯಿದೆ- 1971ರ (ಎಂಟಿಪಿ ಕಾಯಿದೆ) ಅಡಿಯಲ್ಲಿ ಗರ್ಭಪಾತಕ್ಕೆ ಕಾನೂನುಬದ್ಧವಾಗಿ ಅನುಮತಿಸುವ 24 ವಾರಗಳ ಮಿತಿಯನ್ನು ಪ್ರಕರಣ ಮೀರಿತ್ತು.
ಲ್ಯಾಕ್ಟೇಷನಲ್ ಅಮೆನೋರಿಯಾ (ಪ್ರಸವಾನಂತರದ ಬಂಜೆತನ ಎಂದೂ ಕರೆಯುವ ಈ ಸ್ಥಿತಿಯಲ್ಲಿ ಹಾಲುಣಿಸುವ ತಾಯಂದಿರಲ್ಲಿ ಮುಟ್ಟು ಕಾಣಿಸಿಕೊಳ್ಳದೇ ಹೋಗಬಹುದು) ಮತ್ತು ಪ್ರಸವಾನಂತರದ ಖಿನ್ನತೆಯ ಕಾರಣದಿಂದಾಗಿ, ತನಗೆ ಐದು ತಿಂಗಳ ಋತುಸ್ರಾವ ತಪ್ಪಿದ್ದು ಗೊತ್ತಾಗಲಿಲ್ಲ ಎಂದು ಅರ್ಜಿದಾರೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಗರ್ಭಪಾತ ಕೈಗೊಳ್ಳಲು ಕಳೆದ ಸೋಮವಾರ ಏಮ್ಸ್‌ಗೆ ನ್ಯಾಯಮೂರ್ತಿಗಳಾದ ಕೊಹ್ಲಿ ಮತ್ತು ನಾಗರತ್ನ ಅವರಿದ್ದ ಪೀಠ ನಿರ್ದೇಶಿಸಿತ್ತು. ಮಂಗಳವಾರ ಪ್ರಕರಣವನ್ನು ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದೆದರು ಪ್ರಸ್ತಾಪಿಸಿದ ಕೇಂದ್ರ ಸರ್ಕಾರ ಆದೇಶವನ್ನು ಹಿಂಪಡೆಯಬೇಕು, ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕೋರಿತು. ಇಂದಿನ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಕೊಹ್ಲಿ ಮತ್ತು ನಾಗರತ್ನ ಅವರಿದ್ದ ಪೀಠವು ಕೇಂದ್ರ ಸರ್ಕಾರದ ತಂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಕೇಂದ್ರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಮಗುವನ್ನು ನೋಡಿಕೊಳ್ಳಲು ಸರ್ಕಾರ ಸಿದ್ಧ, ಮಹಿಳೆಯು ಗರ್ಭಾವಸ್ಥೆಯಲ್ಲಿಯೇ ಮುಂದುವರಿಯಬೇಕು ಎಂದು ತಿಳಿಸಿದರು.
ಅಂತಿಮವಾಗಿ ಪೀಠ ಭಿನ್ನ ತೀರ್ಪು ನೀಡಿತು. ನ್ಯಾ. ಕೊಹ್ಲಿ ಅವರು ಗರ್ಭಾವಸ್ಥೆ ಅಂತ್ಯಗೊಳಿಸುವ ವಿರುದ್ಧ ತೀರ್ಪು ನೀಡಿದರೆ ಗರ್ಭಾವಸ್ಥೆ ಅಂತ್ಯಗೊಳಿಸುವುದಕ್ಕೆ ಸಂಬಂಧಿಸಿದಂತೆ ಮಹಿಳೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ನ್ಯಾ. ನಾಗರತ್ನ ಅಭಿಪ್ರಾಯಪಟ್ಟರು.
ಅಂತಿಮವಾಗಿ ಪೀಠವು ಪ್ರಕರಣವನ್ನು ವಿಸ್ತೃತ ಪೀಠದ ಮುಂದೆ ಆಲಿಸಲು ಕೋರಿ ಸಿಜೆಐ ಅವರಿಗೆ ಮನವಿ ಮಾಡಲು ಸೂಚಿಸಿತು.