ಕೋವಿಡ್ ಸಾಂಕ್ರಾಮಿಕತೆ ನಡುವೆಯೂ ರಾಜಸ್ಥಾನದಲ್ಲಿನ ಖಾಸಗಿ ಅನುದಾನರಹಿತ ಶಾಲೆಗಳಿಗೆ ಆರು ಮಾಸಿಕ ಕಂತುಗಳಲ್ಲಿ ಶೇ. 100ರಷ್ಟು ಶುಲ್ಕ ಸಂಗ್ರಹಿಸಲು ಸೋಮವಾರ ಸುಪ್ರೀಂ ಕೋರ್ಟ್ ಅನುಮತಿಸಿದೆ (ಗಾಂಧಿ ಸೇವಾ ಸದನ್ ರಾಜಸಮಂದ್ ವರ್ಸಸ್ ರಾಜಸ್ಥಾನ ಸರ್ಕಾರ).
2021-2022ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಶಾಲೆಗಳಿಗೆ ಪಾವತಿಸಬೇಕಾದ ಮೊತ್ತವನ್ನು ಕಂತಿನ ಮೂಲಕ ಹಣ ಪಾವತಿಸಬೇಕು ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ದ್ವಿಸದಸ್ಯ ಪೀಠವು ಆದೇಶಿಸಿದೆ.
ಪ್ರಸಕ್ತ ವರ್ಷ ಶೇ. 60-70ರಷ್ಟು ಶುಲ್ಕ ವಿಧಿಸುವಂತೆ ಖಾಸಗಿ ಶಾಲೆಗಳಿಗೆ ರಾಜಸ್ಥಾನ ಹೈಕೋರ್ಟ್ ಹಿಂದೆ ಆದೇಶಿಸಿದ್ದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. “2019-2020ನೇ ಸಾಲಿನಲ್ಲಿ ಹೊರಡಿಸಿದ ಅಧಿಸೂಚನೆಯಂತೆ ಶಾಲಾ ಆಡಳಿತ ಮಂಡಳಿ/ಶಾಲೆಗಳು 2019-2020 ಮತ್ತು 2020-2021ನೇ ಸಾಲಿನ ಶೈಕ್ಷಣಿಕ ಶುಲ್ಕವನ್ನು 2021ರ ಮಾರ್ಚ್ 5ರಿಂದ 2021ರ ಆಗಸ್ಟ್ 5ರ ವರೆಗೆ ಮಾಸಿಕ ಕಂತುಗಳಲ್ಲಿ ಸ್ವೀಕರಿಸಬಹುದಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ಶಾಲೆಗಳು ವಿದ್ಯಾರ್ಥಿಗಳನ್ನು ಉಚ್ಚಾಟಿಸುವಂತಿಲ್ಲ ಅಥವಾ ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಫಲಿತಾಂಶವನ್ನು ತಡೆ ಹಿಡಿಯುವಂತಿಲ್ಲ ಎಂದು ಇದೇ ವೇಳೆ ದ್ವಿಸದಸ್ಯ ಪೀಠ ಹೇಳಿದೆ.
“ಶಾಲಾ ಶುಲ್ಕವನ್ನು ಪಾವತಿಸಿಲ್ಲ ಎಂದು ಆನ್‌ಲೈನ್ ತರಗತಿ ಅಥವಾ ಭೌತಿಕ ತರಗತಿಗಳಿಗೆ ಹಾಜರಾಗುವುದರಿಂದ ವಿದ್ಯಾರ್ಥಿಗಳನ್ನು ಯಾವುದೇ ಆಡಳಿತ ಮಂಡಳಿ ತಡೆಯುವಂತಿಲ್ಲ. ಕಂತು ಸೇರಿದಂತೆ ಬಾಕಿ ಶುಲ್ಕ ಪಾವತಿಸಿಲ್ಲ ಎನ್ನುವ ಕಾರಣ ನೀಡಿ ಮೇಲೆ ಹೇಳಿದಂತೆ ಯಾವುದೇ ವಿದ್ಯಾರ್ಥಿಯ ಪರೀಕ್ಷಾ ಫಲಿತಾಂಶವನ್ನು ತಡೆಹಿಡಿಯುವಂತಿಲ್ಲ,” ಎಂದಿದೆ.
ಶಾಲಾ ಶುಲ್ಕ ಪಾವತಿಸಲು ಪೋಷಕರಿಗೆ ಕಷ್ಟವಾದರೆ ಅವರು ಪ್ರತ್ಯೇಕವಾಗಿ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಬಹುದಾಗಿದ್ದು, ಶಾಲಾ ಆಡಳಿತ ಮಂಡಳಿ ಮಾನವೀಯತೆಯ ಆಧಾರದಲ್ಲಿ ಪ್ರತ್ಯೇಕವಾಗಿ ಪ್ರಕರಣಗಳನ್ನು ಪರಿಗಣಿಸಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಈ ವ್ಯವಸ್ಥೆಯಿಂದ ಪೋಷಕರಿಗೆ ಸಹಾಯವಾಗಲಿದ್ದು 2021-2022ನೇ ಶೈಕ್ಷಣಿಕ ಸಾಲಿನ ಶುಲ್ಕ ಸಂಗ್ರಹಕ್ಕೆ ಸಮಸ್ಯೆ ಯಾಗುವುದಿಲ್ಲ. ಆಡಳಿತ ಮಂಡಳಿ/ಶಾಲೆಯು ಬಾಕಿ ಪಾವತಿಸಬೇಕು ಎಂದಾಗ ಅದನ್ನು ವಿದ್ಯಾರ್ಥಿಗಳು ಪಾವತಿಸಬೇಕು. ಈ ನಿರ್ದೇಶನವು ಪ್ರಕರಣದ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಪೀಠವು ಹೇಳಿದೆ.
“ಇಂದಿನಿಂದ 2021ರ ಮಾರ್ಚ್ 31ರ ಒಂದು ತಿಂಗಳ ಅವಧಿಯೊಳಗಾಗಿ ಅನುದಾನರಹಿತ ಶಾಲೆಗಳಿಗೆ ಸರ್ಕಾರ ಪಾವತಿಸಬೇಕಾದ ಹಣವನ್ನು ಪಾವತಿಸುವಂತೆ ರಾಜಸ್ಥಾನ ಸರ್ಕಾರಕ್ಕೆ ನಾವು ನಿರ್ದೇಶಿಸುತ್ತೇವೆ” ಎಂದು ಪೀಠವು ಆದೇಶ ಮಾಡಿದ್ದು, ವಿಚಾರಣೆಯನ್ನು ಫೆಬ್ರುವರಿ 15ಕ್ಕೆ ಮುಂದೂಡಿದೆ.
ರಾಜಸ್ಥಾನ ಪ್ರೌಢ ಶಿಕ್ಷಣ ಮಂಡಳಿ (ಆರ್‌ಬಿಎಸ್‌ಇ) ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಕ್ರಮವಾಗಿ ಶೇ. 60 ಮತ್ತು 70 ರಷ್ಟು ಶುಲ್ಕ ಪಾವತಿಸುವ ಕುರಿತಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಾಜಸ್ಥಾನ ಹೈಕೋರ್ಟ್ ಎತ್ತಿ ಹಿಡಿದಿತ್ತು. ಕೋವಿಡ್ ನಿರ್ಬಂಧಗಳು ಸಡಿಲಿಕೆಯಾದ ಬಳಿಕ ಶಾಲೆಗಳು ತೆರೆದ ನಂತರ ಆದೇಶ ಅನ್ವಯವಾಗಲಿದೆ ಎಂದು ನ್ಯಾಯಾಲಯ ಹೇಳಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ದಾಖಲಾಗಿತ್ತು.