ಎಲ್ಲಾ ವಿಕಲಚೇತನ ಅಭ್ಯರ್ಥಿಗಳೂ ಲಿಪಿಕಾರರನ್ನು ಆಯ್ಕೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ

ಈವರೆಗೆ ನಿರ್ದಿಷ್ಟ ಅಂಗವೈಕಲ್ಯದ ಪ್ರಮಾಣ ಶೇಕಡಾ 40 ಅಥವಾ ಅದಕ್ಕಿಂತಲೂ ಹೆಚ್ಚಿರುವ ವ್ಯಕ್ತಿಗಳು ಮಾತ್ರ ಪರೀಕ್ಷೆಗಳಲ್ಲಿ ಲಿಪಿಕಾರರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು.
Supreme Court of India
Supreme Court of India
Published on

ಮಹತ್ವದ ತೀರ್ಪೊಂದರಲ್ಲಿ  ಶೇಕಡಾ 40 ರಷ್ಟು ಅಂಗವೈಕಲ್ಯ ಮಾನದಂಡಗಳನ್ನು ಪೂರೈಸದಿದ್ದರೂ ಎಲ್ಲಾ ವಿಕಲಚೇತನ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಲಿಪಿಕಾರರ ಸಹಾಯ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ [ಗುಲ್ಶನ್‌ ಕುಮಾರ್‌ ಮತ್ತು ಐಬಿಪಿಎಸ್‌ ನಡುವಣ ಪ್ರಕರಣ].

ಈವರೆಗೆ ನಿರ್ದಿಷ್ಟ ಅಂಗವೈಕಲ್ಯದ ಪ್ರಮಾಣ ಶೇಕಡಾ 40 ಅಥವಾ ಅದಕ್ಕಿಂತಲೂ ಹೆಚ್ಚಿರುವ ವ್ಯಕ್ತಿಗಳು ಮಾತ್ರ ಪರೀಕ್ಷೆಗಳಲ್ಲಿ ಲಿಪಿಕಾರರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು.

Also Read
ಸಿಎಲ್ಎಟಿ 2023: ವಿಕಲಚೇತನ ಅಭ್ಯರ್ಥಿಗಳ ಲಿಪಿಕಾರರಿಗೆ ಕಟ್ಟುನಿಟ್ಟಿನ ಮಾನದಂಡ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ವಿಕಲಚೇತನ ಅಭ್ಯರ್ಥಿಗಳು ಮತ್ತು ಮಾನದಂಡ ಹೊಂದಿರುವ ಅಭ್ಯರ್ಥಿಗಳ (40% ಅಂಗವೈಕಲ್ಯತೆ ಅಥವಾ ಅದಕ್ಕಿಂತ ಹೆಚ್ಚು) ನಡುವೆ ನಿರ್ಮಿಸಲಾದ ಕೃತಕ ವ್ಯತ್ಯಾಸ ಮತ್ತು ವಿಭಜನೆಯನ್ನು ತಗ್ಗಿಸುವ ಅವಶ್ಯಕತೆ ಇದೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ತಿಳಿಸಿದೆ.

ಅಂತೆಯೇ ಎಲ್ಲಾ ಬಗೆಯ ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಕೂಡ ಪರೀಕ್ಷೆ ಬರೆಯುವಾಗ ಯಾವುದೇ ಅಡೆತಡೆ ಇಲ್ಲದಂತೆ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ವಿಕಲಚೇತನರು ಭೌತಿಕವಾಗಿ ಪ್ರವೇಶಿಸಲು ಸಾಧ್ಯವಾಗುವಂತೆ ಪರೀಕ್ಷಾ ಕೇಂದ್ರಗಳು ಸಜ್ಜಾಗಿವೆಯೇ. ಅವರಿಗೆ ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಜೊತೆಗೆ ತಾರತಮ್ಯ ತಡೆಗಟ್ಟಿ ಸಮಾನ ಅವಕಾಶ ಒದಗಿಸುವುದಕ್ಕಾಗಿ 2016ರ ಆರ್‌ಪಿಡಬ್ಲ್ಯೂಡಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುಪ್ರೀಂ ಕೋರ್ಟ್‌ ಪರೀಕ್ಷೆ ನಡೆಸುವ ಸಂಸ್ಥೆಗಳಿಗೆ ತಾಕೀತು ಮಾಡಿದೆ.

Also Read
ಎನ್ಎಲ್ಎಟಿ ಪ್ರವೇಶ ಪರೀಕ್ಷೆ: ವಿಶೇಷಚೇತನ ಅಭ್ಯರ್ಥಿಗಳಿಗೆ ಸೂಚನೆ ಬಿಡುಗಡೆ ಮಾಡಿದ ಎನ್ಎಲ್‌ಎಸ್‌ಐಯು

ಹಾಗೆಯೇ ಅದಕ್ಕೆ ಸಂಬಂಧಿಸಿದಂತೆ ವಿವಿಧ ನಿರ್ದೇಶನಗಳನ್ನೂ ನೀಡಿದ್ದು ಅವುಗಳನ್ನು ಎರಡು ತಿಂಗಳೊಳಗೆ ಪಾಲಿಸಬೇಕು ಎಂದು ಸೂಚಿಸಿದೆ.

ತಾನು ಅಂಗವೈಕಲ್ಯಕ್ಕೆ ತುತ್ತಾಗಿರುವ ಕಾರಣ ಬ್ಯಾಂಕ್ ಪರೀಕ್ಷೆಗಳಲ್ಲಿ ಲಿಪಿಕಾರರನ್ನು ಬಳಸಲು ಗುಲ್ಶನ್ ಕುಮಾರ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಹಿಂದೆಯೇ ಅವರಿಗೆ ಲಿಪಿಕಾರರನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತಾದರೂ ಭವಿಷ್ಯದಲ್ಲಿ ಇಂಥದ್ದೇ ಸಮಸ್ಯೆ ತಲೆದೋರದಿರಲು ಮಾರ್ಗಸೂಚಿ ರೂಪಿಸುವುದು ಮುಖ್ಯ ಎಂದಿತ್ತು. ಅದರಂತೆ ಸೋಮವಾರ ಅದು ವಿವಿಧ ನಿರ್ದೇಶನಗಳನ್ನು ನೀಡಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Gulshan_Kumar_v_IBPS
Preview
Kannada Bar & Bench
kannada.barandbench.com