ಒಂದು ಅವಧಿಗೆ ಪದಾಧಿಕಾರಿಗಳಾದ ನಂತರ ಪದಾಧಿಕಾರಿ ಹುದ್ದೆಯಲ್ಲಿದ್ದವರು ಕಡ್ಡಾಯವಾಗಿ ಮೂರು ವರ್ಷಗಳ ಕಾಲ ವಿಶ್ರಾಂತಿ (ಕೂಲಿಂಗ್ ಆಫ್) ಅವಧಿಯಲ್ಲಿರಬೇಕು ಎಂಬ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನಿಯಮಕ್ಕೆ ತಿದ್ದುಪಡಿ ತರಲು ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ [ಬಿಸಿಸಿಐ ಮತ್ತು ಬಿಹಾರ ಕ್ರಿಕೆಟ್ ಸಂಸ್ಥೆ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ “ಇದು ಅನಗತ್ಯ ಕಟ್ಟಳೆಯಾಗಿದ್ದು ಕೂಲಿಂಗ್ ಆಫ್ (ವಿಶ್ರಾಂತಿ) ಅವಧಿ ಜಾರಿಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಬದಲಾವಣೆ ತರಬೇಕಿದೆ. ಪ್ರಸ್ತಾವಿತ ತಿದ್ದುಪಡಿ ಜಾರಿಯಾದ ಬಳಿಕ ಒಬ್ಬ ವ್ಯಕ್ತಿಯು ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳಲ್ಲಿ ಎರಡು ಅವಧಿಗಳನ್ನು ಪೂರ್ಣಗೊಳಿಸಿದ ಬಳಿಕ ವಿಶ್ರಾಂತಿ ಅವಧಿಗೆ ಒಳಪಡುವುದು ಕೂಲಿಂಗ್ ಆಫ್ ಅವಧಿಯ ಉದ್ದೇಶವನ್ನು ದುರ್ಬಲಗೊಳಿಸದು ಎಂದು ನಾವು ಭಾವಿಸುತ್ತೇವೆ” ಎಂಬುದಾಗಿ ಹೇಳಿದೆ.
ಇದರರ್ಥ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ಪ್ರತಿ ಆರು ವರ್ಷಗಳಿಗೊಮ್ಮೆ ಪರ್ಯಾಯವಾಗಿ ರಾಜ್ಯ ಮತ್ತು ಬಿಸಿಸಿಐ ಆಡಳಿತದ ಹುದ್ದೆಗಳಿಗೆ ಸ್ಪರ್ಧಿಸಲು ಅನುವು ಮಾಡಿಕೊಡುವ ಪ್ರಸ್ತಾವಿತ ತಿದ್ದಪಡಿಗಳೊಂದಿಗಿನ ಅಸಂಗತತೆಯನ್ನು ಪೀಠ ಪ್ರಸ್ತುತ ಪದಗಳಲ್ಲಿ ಉಲ್ಲೇಖಿಸಿತು.
ಇದು ಇತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಕೆಟಿಗರಿಗೆ ಪದಾಧಿಕಾರಿ ಹುದ್ದೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ನ್ಯಾಯಾಲಯ ಕಲ್ಪಿಸಿತು.