ಪತ್ನಿ ತನ್ನ ಅಹಂ ತಣಿಸುವುದಕ್ಕಾಗಿ ಪತಿಗೆ ನಿರ್ದಿಷ್ಟ ಶಿಕ್ಷೆ ನೀಡಿ ಎಂದು ಸಂಸತ್ತಿಗೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ವಕೀಲ ರಾಜ್ ಕಪೂರ್ ಮಂಗಳವಾರ ವೈವಾಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ಗೆ ತಿಳಿಸಿದರು. [ಆರ್‌ಐಟಿ ಪ್ರತಿಷ್ಠಾನ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಹೆಂಡತಿಯ ಸಮ್ಮತಿಯಿಲ್ಲದೆ ಆಕೆಯೊಂದಿಗೆ ಸಂಬೋಗ ನಡೆಸುವ ಗಂಡನಿಗೆ ಅತ್ಯಾಚಾರ ಆರೋಪದಿಂದ ವಿನಾಯಿತಿ ನೀಡುವ ಐಪಿಸಿ ಸೆಕ್ಷನ್ 375ರ ಸೆಕ್ಷನ್ 2ಅನ್ನು ಪ್ರಶ್ನಿಸಿ ಮತ್ತು ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ರಾಜೀವ್ ಶಕ್ದೆರ್ ಮತ್ತು ಸಿ ಹರಿ ಶಂಕರ್ ಅವರಿದ್ದ ಪೀಠದೆದುರು ಕಪೂರ್ ಪ್ರತ್ಯುತ್ತರ ವಾದ ಮಂಡಿಸಿದರು. ಪ್ರಕರಣದಲ್ಲಿ ಮಧ್ಯಪ್ರವೇಶ ಅರ್ಜಿ ಸಲ್ಲಿಸಿರುವ ಹೃದಯ್ ಹೆಸರಿನ ಸರ್ಕಾರೇತರ ಸಂಸ್ಥೆಯನ್ನು ನ್ಯಾಯಾಲಯದಲ್ಲಿ ಕಪೂರ್ ಪ್ರತಿನಿಧಿಸುತ್ತಿದ್ದಾರೆ.
ವಾದದ ಪ್ರಮುಖಾಂಶಗಳು
ಗಂಡ ಮತ್ತು ಹೆಂಡತಿಯ ನಡುವಿನ ಸಹಮತ ಇಲ್ಲದ ಲೈಂಗಿಕತೆಯನ್ನು ಅತ್ಯಾಚಾರ ಎಂದು ಹಣೆಪಟ್ಟಿ ಹಚ್ಚಲಾಗದು. ಆತ್ಯಂತಿಕವಾಗಿ ಇದನ್ನು ಲೈಂಗಿಕ ದೌರ್ಜನ್ಯ ಎಂದು ಕರೆಯಬಹುದು.
ದೈಹಿಕ ಮತ್ತು ಲೈಂಗಿಕ ಕಿರುಕುಳವನ್ನು ಒಳಗೊಂಡ ಕ್ರೌರ್ಯವನ್ನು ಪ್ರತಿಪಾದಿಸುವ ಐಪಿಸಿ ಸೆಕ್ಷನ್ 323, 324, 498A, 506, 509 ಮತ್ತು ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಗಂಡನ ವಿರುದ್ಧ ಕ್ರಮ ಕೈಗೊಳ್ಳಬಹುದು… ಪತ್ನಿ ತನ್ನ ಅಹಂ ತಣಿಸುವುದಕ್ಕಾಗಿ ಪತಿಗೆ ನಿರ್ದಿಷ್ಟ ಶಿಕ್ಷೆ ನೀಡಿ ಎಂದು ಸಂಸತ್ತಿಗೆ ಒತ್ತಾಯಿಸಲು ಸಾಧ್ಯವಿಲ್ಲ. ಐಪಿಸಿ ಸೆಕ್ಷನ್ 376 ಮತ್ತು ಕೌಟುಂಬಿಕ ದೌರ್ಜನ್ಯ ಕಾಯಿದೆಯ ನಡುವಣ ಏಕೈಕ ವ್ಯತ್ಯಾಸ ಎಂದರೆ ಶಿಕ್ಷೆಯ ಪ್ರಮಾಣ ಮಾತ್ರ.
ವಿವಾಹವೆನ್ನುವ ಆಚಾರಕ್ರಮವು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಮ್ಮಿಲನ ಮಾತ್ರವೇ ಅಲ್ಲ ಹಾಗಾಗಿ ಸೆಕ್ಷನ್ 2ರ ವಿನಾಯಿತಿಯನ್ನು ರದ್ದುಪಡಿಸುವುದು ಕೇವಲ ಅವರಿಬ್ಬರ ಮೇಲೆ ಮಾತ್ರವೇ ಅಲ್ಲದೆ ಮಕ್ಕಳು ಮತ್ತು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.
ತನ್ನ ಸಹಮತವಿಲ್ಲದೆ ನಡೆಯುವ ಲೈಂಗಿಕ ಕ್ರಿಯೆ ಅತ್ಯಾಚಾರ ಎಂದು ಲೈಂಗಿಕ ಕಾರ್ಯಕರ್ತೆ ಕೂಡ ದೂರು ಸಲ್ಲಿಸಬಹುದು ಎಂಬ ಅರ್ಜಿದಾರರ ವಾದ ಒಪ್ಪುವಂತದ್ದಲ್ಲ. ಎರಡೂ ಸಂಪೂರ್ಣ ಭಿನ್ನ ನಿದರ್ಶನಗಳಾಗಿದ್ದು ದಾಂಪತ್ಯವನ್ನು ಲೈಂಗಿಕ ಕಾರ್ಯಕರ್ತೆ ಮತ್ತು ಪುರುಷನ ನಡುವಿನ ಸಂಬಂಧದೊಂದಿಗೆ ಸಮೀಕರಿಸಲಾಗದು.
ಹಿಂದೂ ವಿವಾಹ ಕಾಯಿದೆಯ ಅಡಿಯ ಹಲವು ನಿಯಮಾವಳಿಗಳು ಮದುವೆ ಎಂಬ ಆಚಾರಕ್ರಮವನ್ನು ರಕ್ಷಿಸಲು ಯತ್ನಿಸಿವೆ.
ಕೃತ್ಯದ ಗುರುತ್ವ ಅಥವಾ ಉದ್ದೇಶದ ಆಧಾರದ ಮೇಲೆ ಸಂಸತ್ತು ಅಪರಾಧವನ್ನು ವರ್ಗೀಕರಿಸುವಾಗ ನ್ಯಾಯಾಂಗ ಪರಿಶೀಲನೆಯ ಅಧಿಕಾರದ ಮೇಲೆ ಮಿತಿ ಇರುತ್ತದೆ ಎಂದು ಹೇಳಿದೆ.
(ಹಲವು ತೀರ್ಪುಗಳನ್ನು ಉಲ್ಲೇಖಿಸುತ್ತಾ) ಸಂವಿಧಾನದ 226ನೇ ವಿಧಿ ಅಡಿಯಲ್ಲಿ ಹೈಕೋರ್ಟ್‌ನ ಅಧಿಕಾರವನ್ನು ಸುಪ್ರೀಂ ಕೋರ್ಟ್‌ನ ಅಧಿಕಾರಗಳೊಂದಿಗೆ ಸಮೀಕರಿಸಲಾಗದು.
ಈ ಎಲ್ಲಾ ವಾದಗಳು ಐಪಿಸಿ ಸೆಕ್ಷನ್ 376 ಬಿ ಮತ್ತು ಸಿಆರ್‌ಪಿಸಿಯ 198, 198 ಎ ಮತ್ತು 198 ಬಿಯನ್ನು ಉಳಿಸಿಕೊಳ್ಳಲು ಸಮಾನ ರೀತಿಯಲ್ಲಿ ಸಂಬಂಧಿಸಿವೆ.
ಪ್ರಕರಣದ ಮತ್ತೊಬ್ಬ ಪಕ್ಷಕಾರ ಪುರುಷ ಕಲ್ಯಾಣ ಟ್ರಸ್ಟ್ ಪರ ವಕೀಲ ಜೆ ಸಾಯಿ ದೀಪಕ್ ವಾದ ಮಂಡಿಸುವುದು ಬಾಕಿ ಇದ್ದು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯ ಅವರ ವಾದ ಆಲಿಸಲಿದೆ.