
ಆಧ್ಯಾತ್ಮಿಕ ನಾಯಕ ಅರವಿಂದ ಘೋಷ್ ಅವರ ಜಾಗತಿಕ ಮಾನವ ಏಕತೆಯ ಪ್ರಯೋಗ ಕೇಂದ್ರ, ತಮಿಳುನಾಡು- ಪಾಂಡಿಚೆರಿ ಗಡಿಗೆ ಹೊಂದಿಕೊಂಡಿರುವ ಆರೋವಿಲ್ಲೆ ಗ್ರಾಮದಲ್ಲಿ ಎರಡು ರಸ್ತೆಗಳ ನಿರ್ಮಾಣ ಮುಂದುವರೆಸದಂತೆ ಆರೋವಿಲ್ಲೆ ಪ್ರತಿಷ್ಠಾನಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಈಚೆಗೆ ರದ್ದುಗೊಳಿಸಿದೆ [ಆರೋವಿಲ್ಲೆ ಪ್ರತಿಷ್ಠಾನ ಮತ್ತು ನವರೋಜ್ ಕೆರ್ಸಾಸ್ಪ್ ಮೋದಿ ನಡುವಣ ಪ್ರಕರಣ].
ನ್ಯಾಯಮಂಡಳಿ ತನ್ನ ವ್ಯಾಪ್ತಿ ಮೀರಿದ್ದು ಎನ್‌ಜಿಟಿ ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಪರಿಸರಕ್ಕೆ ಸಂಬಂಧಿಸಿದ ಮಹತ್ವದ ಸವಾಲುಗಳು ಎದ್ದಾಗ ಮಾತ್ರ ಅದು ತನ್ನ ಅಧಿಕಾರ ಚಲಾಯಿಸಬಹುದು ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ಬುದ್ಧಿವಾದ ಹೇಳಿದೆ.
ಪ್ರಸ್ತುತ ಪ್ರಕರಣದಲ್ಲಿ ಪರಿಸರಕ್ಕೆ ಸಂಬಂಧಿಸಿದ ಮಹತ್ವದ ಸವಾಲು ತಲೆದೋರಿಲ್ಲ ಎಂದು ಅದು ತಿಳಿಸಿದೆ. "ಮುನ್ನೆಚ್ಚರಿಕೆ ತತ್ವವನ್ನು ಅನ್ವಯಿಸುವ ನೆಪದಲ್ಲಿ ನ್ಯಾಯಾಂಗ ಪರಿಶೀಲನೆಯ ನಿರ್ಬಂಧಿತ ಕ್ಷೇತ್ರ ಪ್ರವೇಶಿಸುವ ಮೂಲಕ ನ್ಯಾಯಮಂಡಳಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ... ಎನ್‌ಜಿಟಿ ಕಾಯಿದೆಗೆ ಸೇರಿಸಲಾದ ಶೆಡ್ಯೂಲ್ Iರಲ್ಲಿ ನಿರ್ದಿಷ್ಟಪಡಿಸಿದ ಕಾಯಿದೆ ಜಾರಿಗೆ ತರಲು ಅಗತ್ಯವಾದ ಪರಿಸರಕ್ಕೆ ಸಂಬಂಧಿಸಿದ ಯಾವುದೇ ಗಣನೀಯ ಸವಾಲು ಇಲ್ಲದಿರುವಾಗ ಅಂತಹ ನಿರ್ದೇಶನಗಳು ನ್ಯಾಯಮಂಡಳಿಯ ಅಧಿಕಾರ ವ್ಯಾಪ್ತಿಯಿಂದ ಹೊರಗೆ ಇರುತ್ತವೆ” ಎಂದು ಅದು ವಿವರಿಸಿದೆ.
ಆರೋವಿಲ್ಲೆ ಗ್ರಾಮವನ್ನು ಸುತ್ತುವರೆದಿರುವ ಕ್ರೌನ್ ರಸ್ತೆ ಮತ್ತು ಹೊರ ವರ್ತುಲ ರಸ್ತೆಯ ನಿರ್ಮಾಣ ಮುಂದುವರೆಸದಂತೆ ಏಪ್ರಿಲ್ 28 ಮತ್ತು ಜುಲೈ 27, 2022ರಂದು ಎನ್‌ಜಿಟಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಆರೋವಿಲ್ಲೆ ಪ್ರತಿಷ್ಠಾನ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ವಿವಾದದ ಕೇಂದ್ರ ಬಿಂದುವಾಗಿರುವ ಆರೋವಿಲ್ಲೆ ಗ್ರಾಮದಲ್ಲಿರುವ ಡರ್ಕಲಿ ಅರಣ್ಯ ಎಂದು ಕರೆಯಲಾಗುವ ಪ್ರದೇಶ ಮಾನವ ನಿರ್ಮಿತ ತೋಟ ಎಂದು ವರ್ಗೀಕೃತವಾಗಿದ್ದು ಯಾವುದೇ ಅಧಿಕೃತ ದಾಖಲೆಗಳಲ್ಲಿ ಅರಣ್ಯ ಎಂದು ಗುರುತಿಸಿಕೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು. ಈ ಪ್ರದೇಶ ಕಾನೂನುಬದ್ಧವಾಗಿ ಅರಣ್ಯವಲ್ಲ ಎಂದು ಗುರುತಿಸಿಕೊಂಡಿದ್ದರೂ ತಪ್ಪಾಗಿ ಮುನ್ನೆಚ್ಚರಿಕೆ ತತ್ವ ಅನ್ವಯಿಸಿದ ಎನ್‌ಜಿಟಿಯನ್ನು ಅದು ತರಾಟೆಗೆ ತೆಗೆದುಕೊಂಡಿತು.
"ಕುತೂಹಲಕಾರಿ ಅಂಶವೆಂದರೆ, ಪ್ರಶ್ನಾರ್ಹ ಪ್ರದೇಶವನ್ನು ಅರಣ್ಯವೆಂದು ಪರಿಗಣಿಸುವಂತಿಲ್ಲ ಮತ್ತು ಅರಣ್ಯ (ಸಂರಕ್ಷಣೆ) ಕಾಯಿದೆಯಡಿ ಯಾವುದೇ ಬಗೆಯ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದ ನಂತರವೂ ನ್ಯಾಯಮಂಡಳಿ 'ಮುನ್ನೆಚ್ಚರಿಕೆ ತತ್ವ'ವನ್ನು ಅನ್ವಯಿಸಿದೆ... ಅಂತಹ ನಿರ್ದೇಶನಗಳು ಸ್ಪಷ್ಟವಾಗಿ ನ್ಯಾಯಮಂಡಳಿಯ ಅಧಿಕಾರ ವ್ಯಾಪ್ತಿಯಿಂದ ಹೊರಗಿರುತ್ತವೆ" ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿತು.
ಎನ್‌ಜಿಟಿ ಕಾಯಿದೆಯಡಿ ನ್ಯಾಯವ್ಯಾಪ್ತಿ ಕೋರುವುದಕ್ಕಾಗಿ ಪರಿಸರ ಕಾನೂನುಗಳು ಸ್ಪಷ್ಟವಾಗಿ ಉಲ್ಲಂಘನೆಯಾಗಿರಬೇಕು ಎಂದು ನ್ಯಾಯಾಲಯ ಹೇಳಿತು.
"ಪರಿಸರಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿಯ ಮುಂದೆ ಅರ್ಜಿದಾರರು ಎತ್ತುವ ಪ್ರತಿಯೊಂದು ಪ್ರಶ್ನೆ ಅಥವಾ ವ್ಯಾಜ್ಯವನ್ನು ಗಣನೀಯ ಪ್ರಶ್ನೆಯಾಗಿ ಪರಿಗಣಿಸುವಂತಿಲ್ಲ. ನ್ಯಾಯಮಂಡಳಿಯ ಮುಂದೆ ಸಲ್ಲಿಸಲಾದ ಪ್ರಕರಣಗಳಿಗೆ ಪುರಾವೆಗಳ ಕಠಿಣ ಕಾನೂನು ಅನ್ವಯಿಸದಿದ್ದರೂ, ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಗಣನೀಯ ಪ್ರಶ್ನೆಯನ್ನು ಅದರಲ್ಲಿಯೂ ಶೆಡ್ಯೂಲ್ Iರಲ್ಲಿ ನಿರ್ದಿಷ್ಟಪಡಿಸಿದ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರಬೇಕಾಗುತ್ತದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಆರೋವಿಲ್ಲೆ ಗ್ರಾಮ ಯೋಜನೆಯ ಇತಿಹಾಸ ಪರಿಶೀಲಿಸಿದ ನ್ಯಾಯಾಲಯ ಪಟ್ಟಣ ಮತ್ತದರ ನೀಲನಕ್ಷೆಯನ್ನು 2010 ರ ಆರಂಭದಲ್ಲಿಯೇ ಸಂಬಂಧಪಟ್ಟ ಪ್ರಾಧಿಕಾರ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಎನ್‌ಜಿಟಿಯ ನಿರ್ದೇಶನಕ್ಕೆ ಸಮರ್ಥನೆಯ ಕೊರತೆ ಇದೆ ಎಂದು ಹೇಳಿತು.
"ಆದ್ದರಿಂದ ಅಭಿವೃದ್ಧಿಯ ಹಕ್ಕು ಮತ್ತು ಸ್ವಚ್ಛ ಪರಿಸರದ ಹಕ್ಕಿನ ನಡುವೆ ಅತ್ಯುತ್ತಮ ಸಮತೋಲನವನ್ನು ಸಾಧಿಸುವ ಮತ್ತು "ಸುಸ್ಥಿರ ಅಭಿವೃದ್ಧಿ"ಯನ್ನು ಸಾಕಾರಗೊಳಿಸಿಕೊಳ್ಳುವ ಅವಶ್ಯಕತೆಯಿದೆ" ಎಂದ ನ್ಯಾಯಾಲಯ ಎನ್‌ಜಿಟಿ ಆದೇಶ ರದ್ದುಗೊಳಿಸಿತು.
ಆರೋವಿಲ್ಲೆ ಪ್ರತಿಷ್ಠಾನವನ್ನು ವಕೀಲರಾದ ಬಾಲಾಜಿ ಶ್ರೀನಿವಾಸನ್ ಮತ್ತು ವೈಭವ್ ವೆಂಕಟೇಶ್ ಪ್ರತಿನಿಧಿಸಿದರೆ, ಪ್ರತಿವಾದಿಗಳ ಪರವಾಗಿ ವಕೀಲರಾದ ಎ ಯೋಗೇಶ್ವರನ್, ಎಂವಿ ಸ್ವರೂಪ್, ಟಿವಿಎಸ್ ರಾಘವೇಂದ್ರ ಶ್ರೇಯಸ್, ಗುರ್ಮೀತ್ ಸಿಂಗ್ ಮಕ್ಕರ್, ಅಜಯ್ ಮಾರ್ವಾ ಮತ್ತು ವಿಕಾಸ್ ಮೆಹ್ತಾ ವಾದ ಮಂಡಿಸಿದರು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]