ಸೆಬಿ-ಸಹಾರಾ ಖಾತೆಯಿಂದ ಠೇವಣಿದಾರರಿಗೆ ₹5,000 ಕೋಟಿ ಪಾವತಿ: ಕೇಂದ್ರದ ಮನವಿಗೆ ಸುಪ್ರೀಂ ಅಸ್ತು

ಹಣ ವಿತರಣೆ ಕುರಿತಂತೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್ ಸುಭಾಷ್ ರೆಡ್ಡಿ ಮತ್ತು ಅಮಿಕಸ್ ಕ್ಯೂರಿ ಗೌರವ್ ಅಗರವಾಲ್ ಅವರು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
Subrata Roy and SEBI
Subrata Roy and SEBI (saharagroup/Facebook)

ಸಹಾರಾ ಸಮೂಹದ ಸಹಕಾರಿ ಸಂಘಗಳಲ್ಲಿ ಹೂಡಿಕೆ ಮಾಡಿರುವ ಠೇವಣಿದಾರರಿಗೆ ಸೆಬಿ-ಸಹಾರಾ ಖಾತೆಯಿಂದ ₹ 5,000 ಕೋಟಿ ವಿತರಿಸಲು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಅಂಗೀಕರಿಸಿದೆ.

ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠವು ಕೇಂದ್ರ ಸಹಕಾರ ಸಚಿವಾಲಯದ ಅರ್ಜಿಯು ಸಮಂಜಸವಾಗಿದ್ದು ಸಂತ್ರಸ್ತರ ಹಿತಾಸಕ್ತಿ ಪರವಾಗಿ ಇದೆ ಎಂದು ಹೇಳಿತು.

ಸಹಾರಾ-ಸೆಬಿ ಮರುಪಾವತಿ ಖಾತೆಯಲ್ಲಿ ಇರುವ ಒಟ್ಟು ಮೊತ್ತ ₹24,979.67 ಕೋಟಿಗಳಲ್ಲಿ ₹5,000 ಕೋಟಿಗಳನ್ನು ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ವರ್ಗಾಯಿಸಬೇಕು. ಅವರು ಸಹಾರಾ ಗ್ರೂಪ್ ಕೋ ಆಪರೇಟಿವ್ ಸೊಸೈಟಿ ಠೇವಣಿದಾರರು ಪಡೆಯಬೇಕಾದ ನ್ಯಾಯಸಮ್ಮತ ಬಾಕಿಗೆ ತಕ್ಕಂತೆ ಅದನ್ನು ವಿತರಿಸುತ್ತಾರೆ.  ನಿಜವಾದ ಠೇವಣಿದಾರರಿಗೆ ಅತ್ಯಂತ ಪಾರದರ್ಶಕ ರೀತಿಯಲ್ಲಿ ಮತ್ತು ಸೂಕ್ತ ಗುರುತನ್ನು ಆಧರಿಸಿ ಹಣ ಪಾವತಿಸಬೇಕು.  ಠೇವಣಿದಾರರ ಠೇವಣಿಗಳಿಗೆ ಸಂಬಂಧಿಸಿದ ಮತ್ತು ಕೋರಿರುವ ಪರಿಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರು ಸಲ್ಲಿಸಿದ ಬಳಿಕ ನೇರವಾಗಿ ಬಾಕಿ ಹಣವನ್ನು ಬ್ಯಾಂಕ್‌ ಖಾತೆಗಳಿಗೆ ಠೇವಣಿ ಇಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಅಲ್ಲದೆ ಹಣ ವಿತರಣೆ ಕುರಿತಂತೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್ ಸುಭಾಷ್ ರೆಡ್ಡಿ ಮತ್ತು ಅಮಿಕಸ್ ಕ್ಯೂರಿ ಗೌರವ್ ಅಗರವಾಲ್ ಅವರು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.  ಬಾಕಿ ಹಣವನ್ನು ಸಹಾರಾ-ಸೆಬಿ ಖಾತೆಗೆ ಮರುಪಾವತಿ ಮಾಡುವುದರೊಂದಿಗೆ ಒಂಬತ್ತು ತಿಂಗಳೊಳಗೆ ಪಾವತಿಗಳನ್ನು ಮಾಡುವಂತೆ ಸೂಚಿಸಲಾಗಿದೆ ಎಂದು ಕೋರ್ಟ್ ಹೇಳಿದೆ.

ಮೇಲ್ವಿಚಾರಣೆ ನಡೆಸಲಿರುವ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಅಮಿಕಸ್‌ ಕ್ಯೂರಿ ಅವರಿಗೆ ಕ್ರಮವಾಗಿ ತಿಂಗಳಿಗೆ ₹ 15 ಲಕ್ಷ ಮತ್ತು ₹ 5 ಲಕ್ಷ ಗೌರವಧನ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

'ಸಹಾರಾ-ಸೆಬಿ ಮರುಪಾವತಿ ಖಾತೆ'ಯಲ್ಲಿ ಒಟ್ಟು ₹ 24,979.67 ಕೋಟಿಯಷ್ಟು ಹಣ ಬಳಕೆಯಾಗದೆ ಉಳಿದಿದೆ. ಸಹಾರಾ ಗ್ರೂಪ್ ಆಫ್ ಕೋಆಪರೇಟಿವ್ ಸೊಸೈಟೀಸ್ ವಿರುದ್ಧ ಹೆಚ್ಚಿನ ದೂರು ದಾಖಲಾಗಿವೆ. ಹೀಗಾಗಿ, ಕೋರಿದ ಮೊತ್ತವನ್ನು ಮೊದಲು ಸಹಕಾರ ಸಂಘಗಳ ಕೇಂದ್ರೀಯ ರಿಜಿಸ್ಟ್ರಾರ್‌ಗೆ ವರ್ಗಾಯಿಸಿ ನಂತರ ಕಾನೂನುಬದ್ಧ ಠೇವಣಿದಾರರಿಗೆ ವಿತರಿಸಿದರೆ ಅದು ನ್ಯಾಯಯುತವಾಗಿರುತ್ತದೆ ಎಂದು ಭಾರತ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ವಾದ ಮಂಡಿಸಿದ ಬಳಿಕ ನ್ಯಾಯಾಲಯ ಈ ಆದೇಶ ನೀಡಿತು.

Related Stories

No stories found.
Kannada Bar & Bench
kannada.barandbench.com