ಜಾರಿ ನಿರ್ದೇಶನಾಲಯದ (ಇ ಡಿ) ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು ಸೆಪ್ಟೆಂಬರ್ 15, 2023ರವರೆಗೆ ವಿಸ್ತರಿಸಿ ಸುಪ್ರೀಂ ಕೋರ್ಟ್ ಗುರುವಾರ ಆದೇಶ ಹೊರಡಿಸಿದೆ.
ಅಧಿಕಾರಾವಧಿ ವಿಸ್ತರಣೆಗಾಗಿ ಕೇಂದ್ರ ಸಲ್ಲಿಸಿದ್ದ ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್ ಹಾಗೂ ಸಂಜಯ್ ಕರೋಲ್ ಅವರಿದ್ದ ಪೀಠ ಆ ಅವಧಿಯ ಬಳಿಕ ಅಧಿಕಾರಾವಧಿ ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಜಾರಿ ನಿರ್ದೇಶನಾಲಯಕ್ಕೆ ಹೊಸ ನಿರ್ದೇಶಕರನ್ನು ನೇಮಿಸಲು ಜುಲೈ 31ರವರೆಗೆ ಗಡುವು ನೀಡಿ ಸರ್ವೋಚ್ಚ ನ್ಯಾಯಾಲಯ ಜುಲೈ 11ರಂದು ನೀಡಿದ್ದ ತೀರ್ಪನ್ನು ಬದಲಿಸುವಂತೆ ಕೋರಿ ಕೇಂದ್ರ ಸರ್ಕಾರ ಮನವಿ ಸಲ್ಲಿಸಿತ್ತು.
ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ 2021ರಲ್ಲಿ ನೀಡಿದ್ದ ತೀರ್ಪಿಗೆ ವ್ಯತಿರಿಕ್ತವಾಗಿದೆ ಎಂಬ ಕಾರಣಕ್ಕೆ ಮಿಶ್ರಾ ಅವರಿಗೆ ನೀಡಲಾದ ಅಧಿಕಾರಾವಧಿ ವಿಸ್ತರಣೆ ಆದೇಶವನ್ನು ಸುಪ್ರೀಂ ಕೋರ್ಟ್ ಜುಲೈ 11ರಂದು ರದ್ದುಗೊಳಿಸಿತ್ತು.
ಬಳಿಕ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ ಕೇಂದ್ರ ಸರ್ಕಾರ ಅಕ್ಟೋಬರ್ 15ರವರೆಗೆ ಮಿಶ್ರಾ ಅವರು ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ನೀಡಬೇಕು ಎಂದು ಕೋರಿತ್ತು. ಇದರಿಂದ ದೇಶದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖಾ ಕಾರ್ಯಾಚರಣೆ ನಡೆಸುತ್ತಿರುವ ಹಣಕಾಸು ಕ್ರಿಯಾ ಕಾರ್ಯಪಡೆಯ (ಎಫ್‌ಎಟಿಎಫ್) ತನಿಖೆ ಸುಗಮವಾಗುತ್ತದೆ ಎಂದು ಅದು ವಾದಿಸಿತ್ತು.