ಬಳ್ಳಾರಿ, ಕಡಪ, ಅನಂತಪುರಕ್ಕೆ ಭೇಟಿ ನೀಡಲು ಅಕ್ರಮ ಗಣಿಗಾರಿಕೆ ಆರೋಪಿ ಗಾಲಿ ಜನಾರ್ದನ ರೆಡ್ಡಿಗೆ ಅನುಮತಿಸಿದ ಸುಪ್ರೀಂ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2015ರ ಜನವರಿ 20ರಂದು ರೆಡ್ಡಿ ಅವರಿಗೆ ಜಾಮೀನು ನೀಡಿತ್ತು. ಆದರೂ, ಬಳ್ಳಾರಿ ಸೇರಿದಂತೆ ಮೂರು ಜಿಲ್ಲೆಗಳಿಗೆ ಭೇಟಿ ನೀಡದಂತೆ ನ್ಯಾಯಾಲಯ ರೆಡ್ಡಿ ಅವರನ್ನು ನಿರ್ಬಂಧಿಸಿತ್ತು.
Gali Janardhan reddy, Bellary district and Supreme Court
Gali Janardhan reddy, Bellary district and Supreme Court

ಬಳ್ಳಾರಿ ಮತ್ತು ಆಂಧ್ರಪ್ರದೇಶದ ಕಡಪ ಮತ್ತು ಅನಂತಪುರ ಜಿಲ್ಲೆಗಳಿಗೆ ಎಂಟು ವಾರಗಳ ಕಾಲ ಭೇಟಿ ನೀಡಲು ಬಹುಕೋಟಿ ಅಕ್ರಮ ಗಣಿಕಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ.

“ಪ್ರಕರಣದ ವಾಸ್ತವಾಂಶ ಮತ್ತು ಪರಿಸ್ಥಿತಿಯನ್ನು ಪರಿಗಣಿಸಿ, ಇನ್ನೂ ವಿಚಾರಣೆ ಆರಂಭವಾಗದಿರುವುದರಿಂದ ಮತ್ತು ಅರ್ಜಿದಾರರು ಬಳ್ಳಾರಿಗೆ ಭೇಟಿ ನೀಡಿದಾಗಲೂ ಜಾಮೀನು ಷರತ್ತುಗಳನ್ನು ಉಲ್ಲಂಘಿಸದಿರುವುದರಿಂದ ಮೇಲಿನ ಮೂರು ಜಿಲ್ಲೆಗಳಿಗೆ ಭೇಟಿ ನೀಡಬಾರದು ಎಂದು ವಿಧಿಸಲಾಗಿರುವ ಜಾಮೀನು ಆದೇಶದಲ್ಲಿ ಪರಿಷ್ಕರಣೆ ಮಾಡಲಾಗುವುದು” ಎಂದು ನ್ಯಾಯಮೂರ್ತಿಗಳಾದ ವಿನೀತ್‌ ಶರಣ್‌ ಮತ್ತು ದಿನೇಶ್‌ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಜಿಲ್ಲೆಯ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಗೆ ರೆಡ್ಡಿ ಅವರು ತಮ್ಮ ಭೇಟಿಯ ಮಾಹಿತಿ ನೀಡಬೇಕು ಎಂಬ ನಿಬಂಧನೆಗೆ ಒಳಪಟ್ಟು ಜಾಮೀನು ಷರತ್ತು ಪರಷ್ಕರಿಸಲಾಗಿದೆ. “ಹೆಚ್ಚಿನ ಪ್ರಕರಣಗಳು ಇಲ್ಲದ ನವೆಂಬರ್‌ ಮೂರನೇ ವಾರದಲ್ಲಿ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಿ. ವಿಚಾರಣೆಯನ್ನು ತುರ್ತಾಗಿ ನಡೆಸುವ ಸಂಬಂಧ ವಿಚಾರಣಾ ನ್ಯಾಯಾಲಯ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದ ಹಿನ್ನೆಲೆಯಲ್ಲಿ 2011ರಲ್ಲಿ ಬಂಧಿತರಾಗಿದ್ದ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್‌ 2015ರ ಜನವರಿ 20ರಂದು ಜಾಮೀನು ನೀಡಿತ್ತು. ಆದರೂ, ಬಳ್ಳಾರಿ ಸೇರಿದಂತೆ ಮೂರು ಜಿಲ್ಲೆಗಳಿಗೆ ಭೇಟಿ ನೀಡದಂತೆ ನ್ಯಾಯಾಲಯ ರೆಡ್ಡಿ ಅವರನ್ನು ನಿರ್ಬಂಧಿಸಿತ್ತು. ಇದರ ಬೆನ್ನಿಗೇ, ಜಾಮೀನು ಆದೇಶದಲ್ಲಿ ಈ ಷರತ್ತಿಗೆ ಸಂಬಂಧಿಸಿದಂತೆ ಸಡಿಲಿಕೆ ನೀಡಬೇಕು ಎಂದು ರೆಡ್ಡಿ ಕೋರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆರೋಪಪಟ್ಟಿ ಸಲ್ಲಿಸಿದ್ದು, ಹೈದರಾಬಾದ್‌ನ ಪ್ರಧಾನ ವಿಶೇಷ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆ ಮುಗಿದಿದೆ ಎಂದು ಜುಲೈ 16ರಂದು ಮೆಮೊ ಸಲ್ಲಿಸಿದೆ ಎಂದು ರೆಡ್ಡಿ ಪರ ವಕೀಲರಾದ ಮುಕುಲ್‌ ರೋಹಟಗಿ ಮತ್ತು ರಂಜಿತ್‌ ಕುಮಾರ್‌ ಹೇಳಿದ್ದಾರೆ.

“ರೆಡ್ಡಿ ಅವರಿಗೆ ವಿಧಿಸಲಾಗಿರುವ ನಿರ್ಬಂಧಗಳು ಕಠೋರವಾಗಿವೆ. ಎಲ್ಲಿಯವರೆಗೆ ರೆಡ್ಡಿ ಅವರನ್ನು ಅವರ ತವರೂರಾದ ಬಳ್ಳಾರಿಯಿಂದ ಹೊರಗಿಡಲಾಗುತ್ತದೆ? ಈ ಷರತ್ತನ್ನು ಕೈಬಿಡಬೇಕು. 10,000 ದಾಖಲೆಗಳು ಮತ್ತು 300 ಸಾಕ್ಷಿಗಳಿದ್ದು, ಈ ರೀತಿಯಲ್ಲಿ ಪ್ರಕರಣ ನಡೆಸಿದರೆ ಇನ್ನೂ 10 ವರ್ಷಗಳಾದರೂ ವಿಚಾರಣೆ ಮುಗಿಯುವುದಿಲ್ಲ” ಎಂದು ರೋಹಟಗಿ ಹೇಳಿದರು.

ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಾಧವಿ ದಿವಾನ್‌ ಅವರು “300 ಸಾಕ್ಷಿಗಳಿದ್ದು, 47 ಸಾಕ್ಷಿಗಳು ಬಳ್ಳಾರಿಯಲ್ಲಿ ನೆಲೆಸಿದ್ದಾರೆ. ಈ ಪೈಕಿ 30 ಮಂದಿ ಸರ್ಕಾರಿ ಮತ್ತು ಬ್ಯಾಂಕ್‌ ಅಧಿಕಾರಿಗಳಾಗಿದ್ದಾರೆ. ಉಳಿದ 15 ಮಂದಿ ಖಾಸಗಿ ವ್ಯಕ್ತಿಗಳು" ಎಂದು ತಿಳಿಸಿದರು.

Also Read
ಗಣಿಗಾರಿಕೆ, ಮದ್ರಾಸ್ ಹೈಕೋರ್ಟ್ ಹಾಗೂ ಟಿ ಎಂ ಕೃಷ್ಣರ ʼಭೂಮಿಗೀತʼ…

“ನ್ಯಾಯಮೂರ್ತಿಗಳಿಗೆ ಲಂಚ ನೀಡಿದ ಪ್ರಕರಣದಲ್ಲಿ ಭಾಗಿಯಾಗಿರುವ ರೆಡ್ಡಿ ಅವರನ್ನು ಸಾಕ್ಷಿಗಳ ವಿಚಾರದಲ್ಲಿ ಹೇಗೆ ನಂಬುವುದು? ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಾರೆ. ಇಲ್ಲವೇ ಅವರಿಗೂ ಲಂಚ ನೀಡುತ್ತಾರೆ. ಈ ಮೂಲಕ ಪ್ರತಿಕೂಲ ಪರಿಸ್ಥಿತಿ ನಿರ್ಮಿಸುತ್ತಾರೆ. ಇದು ಪ್ರಕರಣದ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಬೆದರಿಕೆ ಒಡ್ಡುವ ಸಾಧ್ಯತೆ ಇದೆ. ಸಾಕ್ಷಿಗಳು ಉಲ್ಟಾ ಆದರೆ ಇಡೀ ಪ್ರಕರಣ ವಿಫಲವಾಗಲಿದೆ” ಎಂದು ಎಎಸ್‌ಜಿ ಮಾಧವಿ ವಾದಿಸಿದರು.

ಆಗ ರೋಹಟಗಿ “ರೆಡ್ಡಿ ಅವರು ಅಪರಾಧಿ ಮತ್ತು ಅವರಿಗೆ ಶಿಕ್ಷೆ ನೀಡಲಾಗಿದೆಯೇನೋ ಎಂಬ ರೀತಿಯಲ್ಲಿ ಸಿಬಿಐ ವಾದಿಸುತ್ತಿದೆ. ನನ್ನ ಹಕ್ಕು ಮತ್ತು ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಸಮತೋಲನ ಕಾಯ್ದುಕೊಳ್ಳಬೇಕಿದೆ. ಆರೋಪದ ಆಧಾರದಲ್ಲಿ ಭೂತಕಾಲದ ಪ್ರೇತಗಳನ್ನು ಪದೇಪದೇ ಎಳೆದು ತರಲಾಗದು. ಅವರ ವಿರುದ್ಧ ಅಪರಾಧ ನಿರ್ಣಯವಾಗಿಲ್ಲ” ಎಂದರು. ಮೂರು ತಿಂಗಳ ಬಳಿಕ ಪ್ರಕರಣದ ವಿಚಾರಣೆ ನಿಗದಿಯಾಗಿದೆ.

Related Stories

No stories found.
Kannada Bar & Bench
kannada.barandbench.com